ಮೂರೇ ದಿನದಲ್ಲಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ಹೋಂಡಾ ಆಕ್ಟಿವಾ 6G 'ಸ್ಮಾರ್ಟ್'

ಭಾರತದಲ್ಲಿ ನಿಮ್ಮ ಅಚ್ಚುಮೆಚ್ಚಿನ ಸ್ಕೂಟರ್ ಯಾವುದು ಎಂದು ಕೇಳಿದರೆ, ಜನರಿಗೆ ತಕ್ಷಣ ನೆನಪಾಗುವ ಹೆಸರು 'ಹೋಂಡಾ ಆಕ್ಟಿವಾ'. ಇದು ಅಷ್ಟರಮಟ್ಟಿಗೆ ಜನಪ್ರಿಯತೆ ಗಳಿಸಿದೆ. ಆಕ್ಟಿವಾ ಸ್ಕೂಟರ್ ಕೈಗೆಟುಕುವ ಬೆಲೆಯಲ್ಲಿ ದೊರೆಯಲಿದ್ದು, ಅತ್ಯುತ್ತಮ ಮೈಲೇಜ್ ನೀಡುವುದರಿಂದ ಬಹುತೇಕ ಗ್ರಾಹಕರು ಇಷ್ಟಪಟ್ಟು ಖರೀದಿ ಮಾಡುತ್ತಾರೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI), ತನ್ನ ಖರೀದಿದಾರರಿಗಾಗಿ ಹಲವು ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿರುತ್ತದೆ. ಇತ್ತೀಚೆಗೆ ಜನವರಿ 23 ರಂದು ಹೊಸ ಆಕ್ಟಿವಾ ಸ್ಕೂಟರ್ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಇದರ ಮೇಲೆ ಖರೀದಿದಾರರಿಗೆ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿದ್ದು, ಹೋಂಡಾ ಕಂಪನಿಯು ಆಕ್ಟಿವಾ 6G ಸ್ಕೂಟರ್‌ನ ಟಾಪ್ - ಎಂಡ್ 'ಸ್ಮಾರ್ಟ್' ರೂಪಾಂತರವನ್ನು ದೇಶೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧವಾಗಿದೆ ಎಂದು ವರದಿಯಾಗಿದೆ.

ಮುಂಬರಲಿರುವ ಹೋಂಡಾ ಆಕ್ಟಿವಾ ಹೊಸ ರೂಪಾಂತರವು ಹೈಬ್ರಿಡ್ ತಂತ್ರಜ್ಞಾನವನ್ನು ಪಡೆದಿದೆ ಎಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಸದ್ಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಾದರಿಯಂತೆಯೇ ಹೊಸ ಹೋಂಡಾ ಆಕ್ಟಿವಾ 6G ಸ್ಮಾರ್ಟ್ 109.51 ಸಿಸಿ ಎಂಜಿನ್‌ ಹೊಂದಿದೆ. ಇದು 7.79 bhp ಗರಿಷ್ಠ ಪವರ್ ಮತ್ತು 8.79 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಜೊತೆಗೆ 5 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಹೋಂಡಾ 'H-Smart' ವೈಶಿಷ್ಟ್ಯದ ಬಗ್ಗೆ ಬಹುತೇಕರು ತಲೆಕೆಡಿಸಿಕೊಂಡಿದ್ದಾರೆ. ಇದು ಸಣ್ಣ ವಾಹನಗಳಲ್ಲಿ ಹೋಂಡಾ ಹೊಸದಾಗಿ ನೀಡುತ್ತಿರುವ ಕಳ್ಳತನ-ವಿರೋಧಿ ವ್ಯವಸ್ಥೆ (anti-theft system) ಆಗಿರಬಹುದು. ಈ ವೈಶಿಷ್ಟ್ಯದ ಜೊತೆಗೆ, ಹೋಂಡಾ ಆಕ್ಟಿವಾ 6Gಯ ಹೊಸ ರೂಪಾಂತರವು ಪ್ರಸ್ತುತ ಮಾದರಿಗೆ ಹೋಲಿಸಿದರೆ ಹೆಚ್ಚಿನ ನವೀಕರಣಗಳನ್ನು ಪಡೆಯುವ ಸಾದ್ಯತೆಯಿದೆ. ಬೆಲೆಗೆ ಸಂಬಂಧಿಸಿದಂತೆ, ಪ್ರಸ್ತುತ ಮಾದರಿಗೆ (73,662 ರೂ. ಎಕ್ಸ್ ಶೋರೂಂ) ಹೋಲಿಸಿದರೆ ನೂತನ ಆಕ್ಟಿವಾ 6G ಸ್ಮಾರ್ಟ್ ಬೆಲೆ ಸ್ವಲ್ಪ ದುಬಾರಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಕಳೆದ ವರ್ಷ ಆಗಸ್ಟ್ 9 ರಂದು ಭಾರತದ ಮಾರುಕಟ್ಟೆಯಲ್ಲಿ ಹೋಂಡಾ, CB300F ಅನ್ನು ರೂ.2.26 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಟಾಪ್-ಎಂಡ್ ಡಿಲಕ್ಸ್ ಪ್ರೊ ರೂಪಾಂತರದ ಬೆಲೆ ರೂ.2.29 ಲಕ್ಷ (ಎಕ್ಸ್ ಶೋರೂಂ) ಇದೆ. ಈ ಬೈಕ್, 298 ಸಿಸಿ ಆಯಿಲ್-ಕೂಲ್ಡ್ SOHC 4-ವಾಲ್ವ್ ಎಂಜಿನ್‌ ಹೊಂದಿದ್ದು, ಇದು 24 hp ಗರಿಷ್ಠ ಪವರ್ ಮತ್ತು 25.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಆರು-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಹೋಂಡಾ ಆಕ್ಟಿವಾ 6G ಸ್ಕೂಟರ್ ಆರಂಭಿಕ ಬೆಲೆ ರೂ. 73,663. ಇದ್ದು, ಟಾಪ್ ಎಂಡ್ ಮಾದರಿ ಬೆಲೆ ರೂ.78,294 ಇದೆ. 3 ರೂಪಾಂತರ ಮತ್ತು 9 ಬಣ್ಣಗಳ ಆಯ್ಕೆಯಲ್ಲಿ ಈ ಸ್ಕೂಟರ್ ಖರೀದಿಗೆ ಸಿಗಲಿದ್ದು, 109.51 ಸಿಸಿ BS6 ಎಂಜಿನ್‌ ಹೊಂದಿದ್ದು, 7.68 bhp ಪವರ್ ಮತ್ತು 8.84 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 106 ಕೆಜಿ ತೂಕ ಮತ್ತು 5.3 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಈ ಹೋಂಡಾ ಆಕ್ಟಿವಾ 6G ಸ್ಕೂಟರ್ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಎಂಜಿನ್ ಸ್ಟಾರ್ಟ್-ಸ್ಟಾಪ್ ಸ್ವಿಚ್, ಸೈಲೆಂಟ್ ಸ್ಟಾರ್ಟರ್ ಮತ್ತು ಸೀಟ್ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೋಂಡಾ ಆಕ್ಟಿವಾ 6G, ಟಿವಿಎಸ್ ಜುಪಿಟರ್, ಸುಜುಕಿ ಆಕ್ಸೆಸ್, ಯಮಹಾ ರೇ ZR ಮತ್ತು ಹೀರೋ ಮೆಸ್ಟ್ರೋ ಎಡ್ಜ್‌ಗೆ ಪ್ರಬಲ ಪ್ರತಿಸ್ಪರ್ದಿಯಾಗಿದೆ. ಆದರೆ, ಆಕ್ಟಿವಾದ ಜಾಗವನ್ನು ಯಾವುದೇ ದ್ವಿಚಕ್ರ ವಾಹನ ಕಂಪನಿಯ ಸ್ಕೂಟರ್ ಗೆ ಈವರೆಗೆ ಆಕ್ರಮಿಸಿಕೊಳ್ಳಲು ಸಾಧ್ಯವಾಗಿಲ್ಲ.

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿವಿಎಸ್ ಜುಪಿಟರ್ ರೂ.76,461 (ಎಕ್ಸ್ ಶೋರೂಂ) ಆರಂಭಿಕ ಬೆಲೆಯನ್ನು ಹೊಂದಿದೆ. ಸುಜುಕಿ ಆಕ್ಸೆಸ್ ಬೆಲೆ ರೂ.77,378 ಇದೆ. ಯಮಹಾ ರೇ ZR ಪ್ರಾರಂಭಿಕ ಬೆಲೆ ರೂ.83,273 ಇದ್ದು, ಹೀರೋ ಮೆಸ್ಟ್ರೋ ಎಡ್ಜ್‌ ಬೆಲೆ ರೂ.87,827 ಇದೆ. ಇವುಗಳಿಗೆ ಹೋಲಿಕೆ ಮಾಡಿದರೆ, ಹೋಂಡಾ ಆಕ್ಟಿವಾ 6G ಸ್ಕೂಟರ್ ಬೆಲೆಯೇ ಕೊಂಚ ಕಡಿಮೆ ಎಂದು ಹೇಳಬಹುದು. ಮುಂಬರಲಿರುವ ಹೋಂಡಾ ಆಕ್ಟಿವಾ 6G 'ಸ್ಮಾರ್ಟ್' ಬೆಲೆ ಎಷ್ಟಿರಲಿದೆ ಎನ್ನುವುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.

Most Read Articles

Kannada
Read more on ಹೋಂಡಾ honda
English summary
Honda activa 6g smart scooter with hybrid tech to launch on january 23
Story first published: Friday, January 20, 2023, 16:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X