Ola: ನಾಳೆಯಿಂದ ಕಡಿಮೆ ಬೆಲೆಯ 'ಓಲಾ ಎಸ್1 ಏರ್' ಮಾರಾಟ, ಅದಕ್ಕೂ ಮುನ್ನ ಬಿಗ್ ಅಪ್ಡೇಟ್
ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಓಲಾ (Ola) ತನ್ನ ಎಸ್1 ಸರಣಿ ಸ್ಕೂಟರ್ ಮೂಲಕ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಅಭಿಮಾನಿ ಬಳಗವನ್ನು ಹೊಂದಿದೆ. ನಾಳೆಯಿಂದ ತನ್ನ ಕಡಿಮೆ ಬೆಲೆಯ ಎಸ್1 ಏರ್ (S1 Air) ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಶುರು ಮಾಡಲಿದೆ.
ಸದ್ಯ, ಓಲಾ ಕಂಪನಿ ಎಸ್1 ಏರ್ ಸ್ಕೂಟರ್‌ಗೆ 'ನಿಯಾನ್' ಎಂಬ ಹೊಸ ಆಕರ್ಷಕ ಬಣ್ಣದ ಆಯ್ಕೆಯನ್ನು ಪರಿಚಯಿಸಿದ್ದು, ಅದರ ಟೀಸರ್ ಅನ್ನು ತನ್ನ ಸಾಮಾಜಿಕ ಖಾತೆಯಲ್ಲಿ ಹಂಚಿಕೊಂಡಿದೆ. ಇದರೊಟ್ಟಿಗೆ ಈ ಸ್ಕೂಟರ್, ಸ್ಟೆಲ್ಲರ್ ಬ್ಲೂ, ಪೊರ್ಚೆಲೈನ್ ವೈಟ್, ಕೋರಲ್ ಗ್ಲಾಮ್, ಲಿಕ್ವಿಡ್ ಸಿಲ್ವರ್ ಹಾಗೂ ಮಿಡ್‌ನೈಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.

ಇತ್ತೀಚೆಗೆ, ಓಲಾ ಎಸ್1 ಏರ್ ಸ್ಕೂಟರ್ ಮಾರಾಟದ ಬಗ್ಗೆ ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಸ್ವತಃ ಟ್ವೀಟ್ ಮಾಡಿ, 'ಜುಲೈ 28 ರಿಂದ 30 ರವರೆಗೆ (2 ದಿನ) ಎಸ್1 ಏರ್ ಕಾಯ್ದಿರಿಸಿರುವ ಗ್ರಾಹಕರಿಗೆ ರೂ.1,09,999 ದರದಲ್ಲಿ ಈ ಸ್ಕೂಟರ್ ಸಿಗಲಿದೆ. ಜುಲೈ 31 ರಿಂದ ಎಸ್1 ಏರ್ ಖರೀದಿಸಬೇಕೆಂದರೆ, ರೂ.1,19,999 ಬೆಲೆಯಿರುತ್ತದೆ. ಆಗಸ್ಟ್ ಮೊದಲ ವಾರದಿಂದ ಡೆಲೆವರಿ ಶುರುವಾಗಲಿದೆ' ಎಂದು ಹೇಳಿದ್ದರು.
ಇದಕ್ಕೂ ಮೊದಲು, ಓಲಾ ಕಂಪನಿ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬರೋಬ್ಬರಿ 5 ಲಕ್ಷ ಕಿಲೋಮೀಟರ್ ಓಡಿಸಿ, ಯಶಸ್ವಿಯಾಗಿ ಪರೀಕ್ಷಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿತ್ತು. ನೂತನ ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳ ಬಗ್ಗೆ ಮಾತನಾಡುವುದಾದರೆ, ಇದು 3 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದೆ.
ಇದರಲ್ಲಿ ಬಳಕೆ ಮಾಡಿರುವ ಹಬ್ ಮೋಟಾರ್ 11.3 hp ಪವರ್ ಹಾಗೂ 58 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫುಲ್ ಚಾರ್ಜಿನಲ್ಲಿ 125 km ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ಇಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ಮೂರು ಆಕರ್ಷಕ ರೈಡಿಂಗ್ ಮೋಡ್ ಆಯ್ಕೆಗಳನ್ನು ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಪಡೆದಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್, ಬೆಲೆ ಕಡಿಮೆ ಇದ್ದರೂ ಯುವ ಗ್ರಾಹಕರನ್ನು ತನ್ನತ್ತ ಆಕರ್ಷಿಸುವ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, 7 ಇಂಚಿನ TFT ಸ್ಕ್ರೀನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ರಿವರ್ಸ್ ಮೋಡ್, OTA ಅಪ್‌ಡೇಟ್ಸ್, ರಿಮೋಟ್ ಬೂಟ್ ಲಾಕ್/ಅನ್‌ಲಾಕ್ ಮತ್ತು ಮ್ಯೂಸಿಕ್ ಪ್ಲೇಬ್ಯಾಕ್ ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಜೊತೆಯಲ್ಲಿಯೇ ಎಲ್‌ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್ ಹಾಗೂ ಅತ್ಯಾಧುನಿಕ ಹೆಡ್‌ಲ್ಯಾಂಪ್ ಅನ್ನು ಹೊಂದಿದೆ.
ಓಲಾ ಎಸ್1 ಏರ್ ಎಲೆಕ್ಟ್ರಿಕ್ ಸ್ಕೂಟರ್ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಟಮ್ ಬಗ್ಗೆ ತಿಳಿಯೋಣ. ಈ ಸ್ಕೂಟರ್, ಮುಂಭಾಗ ಟೆಲಿಸ್ಕೋಪಿಕ್ ಪೋರ್ಕ್ಸ್ ಹಾಗೂ ಹಿಂಭಾಗ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬೆಲೆ ಕಡಿಮೆಯಿರುವುದರಿಂದ ಓಲಾ, ಇತರೆ ಎಸ್1 ಸರಣಿ ಸ್ಕೂಟರ್ ಗಳಲ್ಲಿ ಇರುವಂತೆ ಡಿಸ್ಕ್ ಬ್ರೇಕ್ ಆಯ್ಕೆಯನ್ನು ನೀಡಿಲ್ಲ. ಕೇವಲ ಡ್ರಮ್ ಬ್ರೇಕ್ ಅನ್ನು ಮಾತ್ರ ಕೊಟ್ಟಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ ಎಸ್1 ಪ್ರೊ ರೂ.1.40 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯುತ್ತದೆ. 4 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆಡಿದ್ದು, ಸಂಪೂರ್ಣ ಚಾರ್ಜಿನಲ್ಲಿ 181 km ರೇಂಜ್ ನೀಡುತ್ತದೆ. ಮಿಡ್ ಲೆವೆಲ್ ಎಸ್1 ರೂ.1.30 ಲಕ್ಷ ದರದಲ್ಲಿ ಗ್ರಾಹಕರಿಗೆ ಸಿಗಲಿದೆ. 3 kWh ಬ್ಯಾಟರಿ ಪ್ಯಾಕ್ ಪಡೆದಿದ್ದು, ಫುಲ್ ಚಾರ್ಜಿನಲ್ಲಿ 141 km ರೇಂಜ್ ಕೊಡುತ್ತದೆ. ಜೊತೆಗೆ 95 kmph ಟಾಪ್ ಸ್ವೀಡ್ ಹೊಂದಿದೆ.
ಇನ್ನು, ಓಲಾದ ಎಸ್1 ಏರ್ ಮಾರಾಟ ನಾಳೆಯಿಂದ ಆರಂಭವಾಗಲಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ನೀರಿಕ್ಷೆಗಳು ಹೆಚ್ಚಾಗಿವೆ. ಈ ಸ್ಕೂಟರ್ ಗೆ ದೇಶೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಹಾಗೂ ಎಥರ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಗಳು ಪ್ರತಿಸ್ಪರ್ಧಿಯಾಗಿವೆ. ಎಸ್1 ಏರ್ ಕಡಿಮೆ ಬೆಲೆಗೆ ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿದಾರರು ಕೊಂಡುಕೊಳ್ಳಬಹುದು ಎನ್ನುವ ವಿಶ್ವಾಸದಲ್ಲಿ ಕಂಪನಿಯಿದೆ.


Click it and Unblock the Notifications








