ಓಲಾ ಸ್ಕೂಟರ್ ಬ್ಯಾಟರಿ ಬೆಲೆ ಕೇಳಿದ್ರೆ ಆಶ್ಚರ್ಯವಾಗುತ್ತೆ: ಆ ದರಕ್ಕೆ ಹೊಸ ಸ್ಕೂಟರ್ ಸಿಗುತ್ತೆ!
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ದಿನದಿಂದ ದಿನಕ್ಕೆ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ. ಓಲಾ, ಎಥರ್ ಹಾಗೂ ಟಿವಿಎಸ್ ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಪ್ರತಿಯೊಬ್ಬರಿಗೂ ಈ ಸ್ಕೂಟರ್ ಗಳ ತಯಾರಿಕೆಗೆ ಬಳಸುವ ಬ್ಯಾಟರಿ ಬೆಲೆ ಬಗ್ಗೆ ತೀವ್ರ ಕುತೂಹಲವಿರುತ್ತದೆ. ಆ ಬಗ್ಗೆ ಪೋಸ್ಟ್ವೊಂದು ವೈರಲ್ ಆಗಿದೆ.
ತರುಣ್ ಪಾಲ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಓಲಾ ಸ್ಕೂಟರ್ ಬ್ಯಾಟರಿ ಬೆಲೆ ಕುರಿತಂತೆ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಓಲಾ ಎಸ್1 ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬಳಸುವ 2.98 kWh ಬ್ಯಾಟರಿ ಬೆಲೆ ರೂ.66,549 ಹಾಗೂ ಓಲಾ S1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಬಳಸುವ 3.97 kWh ಬ್ಯಾಟರಿ ದರ ರೂ.87,298 ಇದೆ. ಈ ಬಗ್ಗೆ 'ಬ್ಯಾಟರಿ' ಪ್ಯಾಕ್ ಮಾಡಲಾಗಿರುವ ಮರದ ಪೆಟ್ಟಿಗೆ (wooden crate) ಮೇಲೆ ಬರೆದಿರುವ ಬೆಲೆ ವಿವರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ಸೋಷಿಯಲ್ ಮೀಡಿಯಾದಲ್ಲಿ ಇದು ಬಾರಿ ವೈರಲ್ ಆಗುತ್ತಿದೆ.

ಸರ್ವಿಸ್ ಸೆಂಟರ್ ನಲ್ಲಿ ತರುಣ್ ಪಾಲ್ ಅವರಿಗೆ ಈ ಚಿತ್ರಗಳು ಹೇಗೆ ದೊರೆಯಿತು ಎಂಬುದರ ಬಗ್ಗೆ ಖಚಿತ ಮಾಹಿತಿಯಿಲ್ಲ. ಅವರು ತಮ್ಮ ಸ್ಕೂಟರ್ ಬ್ಯಾಟರಿ ಬದಲಾಯಿಸಲು ಅಲ್ಲಿಗೆ ಬಂದಿರಬಹುದು ಎಂದು ಹೇಳಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾ ಎಸ್1 ಪ್ರೊ ದರ ರೂ.1.28 ಲಕ್ಷ ಇದ್ದು, ರೂ.12,000 ರಿಯಾಯಿತಿಯೊಂದಿಗೆ ಖರೀದಿಗೆ ಲಭ್ಯವಿದೆ. ಜೊತೆಗೆ ಓಲಾ ಕಂಪನಿ ಮೂರು ವರ್ಷಗಳವರೆಗೆ ತನ್ನ ಸ್ಕೂಟರ್ ಗಳಿಗೆ ವಾರಂಟಿ ನೀಡುತ್ತಿದೆ.
ನಿಮ್ಮ ಸ್ಕೂಟರ್ ಬ್ಯಾಟರಿಯಲ್ಲಿ ಯಾವುದೇ ರೀತಿಯಲ್ಲಿ ಸಮಸ್ಯೆ ಕಂಡುಬಂದರೂ ವಾರಂಟಿ ಅವಧಿಯಲ್ಲಿ ಉಚಿತವಾಗಿ ಬದಲಾಯಿಸಿಕೊಡಲಾಗುತ್ತದೆ. ಓಲಾ ಕಂಪನಿಯು ಹಲವು ಬಾರಿ ಬ್ಯಾಟರಿ ಪ್ಯಾಕ್‌ಗಳನ್ನು ಪರೀಕ್ಷಿಸಿದ ಬಳಿಕವೇ ಸ್ಕೂಟರ್ ಗಳಿಗೆ ಅದನ್ನು ಅಳವಡಿಸುತ್ತದೆ. ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಗೆ ಬಳಸುವ 3.97 kWh ಬೆಲೆ ರೂ.87,298 ಇದ್ದು, ಸದ್ಯ, ಅದಕ್ಕಿಂತ ಕಡಿಮೆ ಬೆಲೆಗೆ ದೇಶೀಯ ಮಾರುಕಟ್ಟೆಯಲ್ಲಿ ಓಲಾ ಎಸ್1 ಏರ್ ಸ್ಕೂಟರ್ ದೊರೆಯಲಿದ್ದು, ರೂ.84,999 ದರವನ್ನು ಹೊಂದಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಓಲಾದ ಕಡಿಮೆ ಬೆಲೆಯ ಸ್ಕೂಟರ್ ಎಸ್1 ಏರ್, ಮೂರು ಬ್ಯಾಟರಿ ಪ್ಯಾಕ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಅವುಗಳೆಂದರೆ. 2 kWh, 3 kWh ಹಾಗೂ 4 kWh. ಕ್ರಮವಾಗಿ ರೂ.84,999, ರೂ.99,999 ಹಾಗೂ ರೂ.1,09,999 ಎಕ್ಸ್ ಶೋರೂಂ ದರವನ್ನು ಪಡೆದಿದ್ದು, ಬ್ಯಾಟರಿ ಪ್ಯಾಕ್ ಗೆ ಅನುಗುಣವಾಗಿ 85 ಕಿ.ಮೀ, ರಿಂದ 165 ಕಿ.ಮೀ ರೇಂಜ್ ನೀಡಲಿವೆ. ಗರಿಷ್ಠ 85 kmph ಟಾಪ್ ಸ್ವೀಡ್ ಹೊಂದಿದೆ.
ಓಲಾ ಎಸ್1 ಕೂಡ 2 kWh, 3 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.99,999 ಮತ್ತು ರೂ.1,09,999 ಎಕ್ಸ್ ಶೋರೂಂ ದರವನ್ನು ಹೊಂದಿದೆ. ಚಿಕ್ಕ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿರುವ ಓಲಾ ಸ್ಕೂಟರ್ 91 km ರೇಂಜ್ ನೀಡಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ. ದೊಡ್ಡ ಬ್ಯಾಕ್ ಹೊಂದಿರುವ ಸ್ಕೂಟರ್ 141 km ರೇಂಜ್ ನೀಡುವ ಸಾಮರ್ಥ್ಯ ಪಡೆದಿದ್ದು, 95 kmph ಟಾಪ್ ಸ್ವೀಡ್ ಹೊಂದಿದೆ ಎಂದು ಹೇಳಬಹುದು.
ಓಲಾದ ಟಾಪ್ ಎಂಡ್ ಸ್ಕೂಟರ್ ಎಸ್1 ಪ್ರೊ, ರೂ.1,29,999 ದರವನ್ನು ಹೊಂದಿದ್ದು, 4 kWh ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಫುಲ್ ಚಾರ್ಜ್ ನಲ್ಲಿ 181 km ರೇಂಜ್ ನೀಡಲಿದ್ದು, 116 kmph ಟಾಪ್ ಸ್ವೀಡ್ ಪಡೆಯಲಿದೆ. ಏಕೋ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಎಂಬ ಮೂರು ರೈಡಿಂಗ್ ಆಯ್ಕೆಗಳನ್ನು ಹೊಂದಿದ್ದು, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್ ಹಾಗೂ ಟಿವಿಎಸ್ ಕಂಪನಿ ಸ್ಕೂಟರ್ ಗಳಿಗೆ ಭಾರೀ ಪೈಪೋಟಿ ನೀಡಲಿದೆ.
ಓಲಾ ಸ್ಕೂಟರ್ ಬ್ಯಾಟರಿ ಬೆಲೆ ಬಗ್ಗೆ ಟ್ವಿಟರ್ ಬಳಕೆದಾರನ ಪೋಸ್ಟ್ ಗಮನಿಸಿದಾಗ ಬ್ಯಾಟರಿಗಳು ಎಷ್ಟೊಂದು ದುಬಾರಿಯೆಂದು ಗೊತ್ತಾಗುತ್ತದೆ. ಆದರೆ, ಈ ಕುರಿತಂತೆ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಯಾವುದೇ ವಿವರವನ್ನು ಬಹಿರಂಗಪಡಿಸುವುದಿಲ್ಲ. ಸದ್ಯ, ಗ್ರಾಹಕರನ್ನು ಆಕರ್ಷಿಸಲು ಬ್ಯಾಟರಿಗಳ ಮೇಲೆ ವಾರಾಂಟಿಯನ್ನು ನೀಡುತ್ತಿವೆ. ಆದ್ದರಿಂದ ಬ್ಯಾಟರಿ ಬದಲಾಯಿಸಬೇಕಾದರೆ, ಅದರ ಹೊರೆ ಬಹುತೇಕ ಗ್ರಾಹಕರ ಮೇಲೆ ಬೀಳುವುದಿಲ್ಲ. ಅದನ್ನು ಕಂಪನಿಗಳೇ ಭರಿಸುತ್ತವೆ. ವಾರಂಟಿ ಅವಧಿ ಮುಗಿದ ಮೇಲೆ ಅದು ಗ್ರಾಹಕನಿಗೆ ವರ್ಗಾವಣೆಯಾಗುತ್ತದೆ.


Click it and Unblock the Notifications