Simple ONE ಮೊದಲೇ ರೇಂಜ್‌ನಲ್ಲಿ 'ಬೆಂಕಿ'.. ಕಂಪನಿ ಎಲೆಕ್ಟ್ರಿಕ್ ಕಾರು ಬರುತ್ತಂತೆ: ಪಕ್ಕಾ ಹಬ್ಬ ಗುರು!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸಿಂಪಲ್ ಎನರ್ಜಿ' ಗರಿಷ್ಠ ರೇಂಜ್ ಹಿಂದಿರುಗಿಸುವ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಜೊತೆಗೆ ತನ್ನ ಮುಂದಿನ ಕಾರ್ಯಯೋಜನೆ ಬಗ್ಗೆ ಒಂದಷ್ಟು ಮಾಹಿತಿ ಬಹಿರಂಗಪಡಿಸಿದ್ದು, ಎಲ್ಲವೂ ಅಂದುಕೊಂಡ ಹಾಗೆ ನಡೆದ್ರೆ, ಸಿಂಪಲ್ ಎನರ್ಜಿ ದೇಶದಲ್ಲಿ ರಾರಾಜಿಸಲಿದೆ.
ಮುಂದಿನ 18 ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಎರಡು ಹೊಸ ಸ್ಕೂಟರ್ ಹಾಗೂ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಸಿಂಪಲ್ ಎನರ್ಜಿ ಬಿಡುಗಡೆ ಮಾಡಲಿದೆಯಂತೆ. ನೂತನ ಸ್ಕೂಟರ್‌ಗಳನ್ನು ದಿನನಿತ್ಯದ ಬಳಕೆಗೆ ಸಾಧ್ಯವಾಗುವಂತೆ 'ಸಿಂಪಲ್ ಒನ್' ಇ-ಸ್ಕೂಟರ್ ಪ್ಲಾಟ್‌ಫಾರ್ಮ್ ಆಧರಿಸಿಯೇ ತಯಾರಿಸಲಿದ್ದು, ರೂ.1 ರಿಂದ ರೂ.1.5 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು. ಮುಂದಿನ 8-10 ರಿಂದ ತಿಂಗಳಲ್ಲಿ ಉತ್ಪಾದನೆ ಶುರುವಾಗಲಿದೆ.

ಸಿಂಪಲ್ ಎನರ್ಜಿ, ಗರಿಷ್ಠ ರೇಂಜ್ ನೀಡುವ ಪ್ರೀಮಿಯಂ ಎಲೆಕ್ಟ್ರಿಕ್ ಬೈಕ್ ತಯಾರಿಕೆಗೆ ಮುಂದಾಗಿದ್ದು, ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ರೂ.3 ರಿಂದ ರೂ.5 ಲಕ್ಷ ಬೆಲೆಯಲ್ಲಿ ದೊರೆಯಬಹುದು. ಅಲ್ಲದೆ, ಕಂಪನಿಯು 2025ರ ಫೋರ್ ವೀಲ್ ಎಲೆಕ್ಟ್ರಿಕ್ ವೆಹಿಕಲ್ ಮಾರುಕಟ್ಟೆಗೆ ಎಂಟ್ರಿಕೊಡಲಿದ್ದು, ಅತ್ಯಧಿಕ ಕಾರ್ಯಕ್ಷಮತೆ ಹೊಂದಿರುವ 'ಸಿಂಪಲ್ ಒನ್' ಹೆಸರಿನಲ್ಲಿ ಎಲೆಕ್ಟ್ರಿಕ್ ಕಾರನ್ನು ದೇಶದಲ್ಲಿ ಲಾಂಚ್ ಮಾಡಬಹುದು. ಈ ಕಾರು, ಹೇಗಿರಲಿದೆ ಎಂಬುದು ಮುಂದಿನ ವರ್ಷಗಳಲ್ಲಿ ತಿಳಿಯಲಿದೆ.
ಸದ್ಯ, ಭಾರತದಲ್ಲಿ ಬಿಡುಗಡೆಯಾಗಿರುವ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡುವುದಾದರೆ, ಇದು, ರೂ.1.45 ಲಕ್ಷದಿಂದ ರೂ.1.5 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಸಿಗಲಿದೆ. ಸಂಪೂರ್ಣ ಸುರಕ್ಷತೆ ಹೊಂದಿರುವ 5 kWh ಸಾಮರ್ಥ್ಯದ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಪಡೆದಿರುವ ಈ ಸ್ಕೂಟರ್, ಸಂಪೂರ್ಣ ಚಾರ್ಜಿನಲ್ಲಿ 212 km (IDC) ರೇಂಜ್ ನೀಡಲಿದೆ.
ಈ ಸ್ಕೂಟರ್ ನಲ್ಲಿ ಉಪಯೋಗಿಸುವ ಎಲೆಕ್ಟ್ರಿಕ್ ಮೋಟಾರ್ 11.39 bhp (8.5kW) ಪವರ್ ಮತ್ತು 72 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 2.77 ಸೆಕೆಂಡ್‌ಗಳಲ್ಲಿ ಗಂಟೆಗೆ 0 ಯಿಂದ 40 ಕಿಮೀ ವೇಗವನ್ನು ಪಡೆಯಲಿದ್ದು, 105 km ಟಾಪ್ ಸ್ವೀಡ್ ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಪ್ಯಾಕ್, ಶೇಕಡ 0-80% ಚಾರ್ಜ್ ಆಗಲು 5 ಗಂಟೆ 54 ನಿಮಿಷ ಬೇಕು ಅಷ್ಟೇ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, OTA ಅಪ್‌ಡೇಟ್ ಸೇರಿದಂತೆ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಫ್ರಂಟ್, ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದ್ದು, ಬ್ರೆಜೆನ್ ಬ್ಲ್ಯಾಕ್, ಅಜುರೆ ಬ್ಲೂ ಹಾಗೂ ಗ್ರೇಸ್ ವೈಟ್ ಸೇರಿದಂತೆ ಆರು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ನಿಮಗೆ ಗೊತ್ತಿರಲಿ.. 2021ರಲ್ಲಿಯೇ ಸಿಂಪಲ್ ಒನ್ ಸ್ಕೂಟರ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಅನಾವರಣ ಮಾಡಲಾಗಿತ್ತು. ಆದರೆ, ವಿವಿಧ ಕಾರಣಗಳಿಗೆ ಬಿಡುಗಡೆಯನ್ನು ಮುಂದೂಡಿಕೆ ಮಾಡಲಾಗಿತ್ತು. ಇನ್ನು, ಕಂಪನಿಯು ತನ್ನ ಮುಂದಿನ ಕಾರ್ಯಯೋಜನೆ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಅದರಲ್ಲೂ ಕಾರು ಬಿಡುಗಡೆಗೆ ತಯಾರಿ ನಡೆಸುತ್ತಿರುವುದು ಅದರ ಅಭಿಮಾನಿಗಳಿಗೆ ಖುಷಿ ತಂದಿದೆ. ನೂತನ ಸ್ಕೂಟರ್ ಗರಿಷ್ಠ ರೇಂಜ್ ನೊಂದಿಗೆ ಬಂದಿದ್ದು, ಕಾರು ಹೇಗಿರಬಹುದು ಎನ್ನುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ.


Click it and Unblock the Notifications








