'ಕಿಂಗ್ ಆಫ್ ರೇಂಜ್' ಬೆಂಗಳೂರಿನ Simple ONE ಎಲೆಕ್ಟ್ರಿಕ್ ಸ್ಕೂಟರ್ ಕೆಲವೇ ಗಂಟೆಗಳಲ್ಲಿ ಬಿಡುಗಡೆ: ವಿಶೇಷತೆಗಳೇನು?
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ಅಪ್ 'ಸಿಂಪಲ್ ಎನರ್ಜಿ' ನಾಳೆ ಸಿಂಪಲ್ ಒನ್ (Simple ONE) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಿದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ರೇಂಜ್ ನೀಡುವ ಸ್ಕೂಟರ್ ಇದಾಗಿದೆ ಎಂದು ಹೇಳಲಾಗಿದ್ದು, ಭಾರೀ ಹೈಪ್ ಕ್ರಿಯೇಟ್ ಮಾಡಿದೆ.
ಭಾರತದ ಮಾರುಕಟ್ಟೆಯಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಅಂದರೆ, 2021ರಲ್ಲಿಯೇ ಈ ಸ್ಕೂಟರ್ ಅನ್ನು ಸಿಂಪಲ್ ಎನರ್ಜಿ ಕಂಪನಿ ಅನಾವರಣ ಮಾಡಿತ್ತು. ಆದರೆ, ವಿವಿಧ ಕಾರಣಗಳಿಗೆ ಬಿಡುಗಡೆಯನ್ನು ಮುಂದೂಡುತ್ತಲೇ ಬಂದಿತ್ತು. ಅಂತಿಮವಾಗಿ ನಾಳೆ ಲಾಂಚ್ ಮಾಡಲಿದೆ. ಇದರ ಬ್ಯಾಟರಿಯನ್ನು ಹಲವಾರು ಬಾರಿ ಪರೀಕ್ಷೆಗೆ ಮಾಡಲಾಗಿದ್ದು, ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕಂಪನಿಯೇ ಹೇಳಿಕೊಂಡಿದೆ.

ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಯುವ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಫುಲ್ ಎಲ್ಇಡಿ ಲೈಟಿಂಗ್, ಬ್ಲೂಟೂತ್ ಮತ್ತು ವೈ ಫೈ ಕನೆಕ್ಟ್ ಆಗಿರುವ ಕಲರ್ TFT ಡಿಸ್ಪ್ಲೇಯನ್ನು ಪಡೆದಿದೆ. ಜೊತೆಗೆ ನಾಲ್ಕು ರೈಡಿಂಗ್ ಮೋಡ್ ಒಳಗೊಂಡಿದೆ. ಅವುಗಳೆಂದರೆ, ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್.
ಈ ಸ್ಕೂಟರ್ ನ ಬ್ರೇಕಿಂಗ್ ಸಿಸ್ಟಮ್ ಹಾಗೂ ಸಸ್ಪೆನ್ಸನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ ಮತ್ತು ರೇರ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಸಸ್ಪೆನ್ಸನ್ ಸೆಟಪ್ ನೋಡುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಮೊನೊಶಾಕ್ ಸೆಟಪ್ ಹೊಂದಿದೆ. 12 ಇಂಚಿನ ಅಲಾಯ್ ವೀಲ್ಸ್, 90/90 - 12 ಅಳತೆಯ ಟೈಯರ್ಸ್ ಪಡೆದಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ನೀರಿಕ್ಷೆ ಹುಟ್ಟಿಸಿರುವುದೇ ಅದು ಹೆಚ್ಚಿನ ರೇಂಜ್ ನೀಡಲಿದೆ ಎಂದು. ಲಭ್ಯವಾಗಿರುವ ಮಾಹಿತಿ ಪ್ರಕಾರ, ಬಿಡುಗಡೆಯಾದ ಮೇಲೆ ಇದೇ ಅತಿಹೆಚ್ಚು ಕಾರ್ಯಕ್ಷಮತೆ ಹಿಂದಿರುಗಿಸುವ ಸ್ಕೂಟರ್ ಆಗಿರಲಿದೆ. ಇದರಲ್ಲಿ ಉಪಯೋಗಿಸಲಾಗಿರುವ 4.8 kWh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಫುಲ್ ಚಾರ್ಜ್ ನಲ್ಲಿ 236 km ರೇಂಜ್ ಕೊಡಲಿದೆ.
ಸಿಂಪಲ್ ಒನ್ ಸ್ಕೂಟರ್ ನಲ್ಲಿ ಬಳಕೆ ಮಾಡಿರುವ ಮೋಟಾರ್, ಹಿಂಭಾಗದ ವೀಲ್ ಗೆ ಪವರ್ ವರ್ಗಾಯಿಸಲಿದ್ದು, 8.5kW (11.3 bhp) ಪವರ್, 72 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. 105kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 2.77 ಸೆಕೆಂಡುಗಳಲ್ಲಿ 0 ಯಿಂದ 40 kmph ವೇಗವನ್ನು ಪಡೆಯಲಿದೆ. ಜೊತೆಗೆ ಅಜೂರ್ ಬ್ಲೂ, ಬ್ರೆಜನ್ ಬ್ಲಾಕ್ ಸೇರಿದಂತೆ ಬಗೆಬಗೆಯ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕಂಪನಿಯು ಎಲ್ಲಿಯೂ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದರೂ, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಖರೀದಿಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಬಹುತೇಕ ರೂ.1.10 ಲಕ್ಷ ಬೆಲೆಯನ್ನು ಹೊಂದಿರಬಹುದು. ಎಲ್ಲದಕ್ಕೂ ನಾಳೆಯೇ ತೆರೆ ಬೀಳಲಿದೆ. ಲಾಂಚ್ ಆದ ಕೊಡಲೇ ಈ ಸ್ಕೂಟರ್ ವಿತರಣೆಯನ್ನು ಆರಂಭಿಸಲು ಕಂಪನಿ ಸಿದ್ಧತೆ ನಡೆಸಿದ್ದು, ಅದಕ್ಕಾಗಿ ತಮಿಳುನಾಡಿನ ಉತ್ಪಾದನಾ ಘಟಕದಲ್ಲಿ ತಯಾರಿಕೆಯನ್ನು ಶುರು ಮಾಡಿದೆ.
ಒಟ್ಟಾರೆ, ಸುಮಾರು ಎರಡು ವರ್ಷಗಳ ಬಳಿಕ ಭಾರತದ ಮಾರುಕಟ್ಟೆಯಲ್ಲಿ ಸಿಂಪಲ್ ಎನರ್ಜಿ ನಾಳೆ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದ್ದು, ಗ್ರಾಹಕರು ದೊಡ್ಡ ಮಟ್ಟದಲ್ಲಿ ನೀರಿಕ್ಷೆ ಇಟ್ಟುಕೊಂಡಿದ್ದಾರೆ. ಒಂದೊಮ್ಮೆ ನೀರಿಕ್ಷೆಗಿಂತ ಗರಿಷ್ಠ ರೇಂಜ್ ನಲ್ಲಿ ಬಿಡುಗಡೆಯಾದರೆ, ಇತರೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಗಳಿಗೆ ಪ್ರಬಲ ಪ್ರತಿಸ್ಪರ್ಧಿಯಾಗುವುದರಲ್ಲಿ ಎರಡು ಮಾತಿಲ್ಲ.


Click it and Unblock the Notifications








