ಜಾಗತಿಕವಾಗಿ ದೊಡ್ಡ ಸಾಧನೆ ಮಾಡಿದ ಟಿವಿಎಸ್: ಏನದು?
ಭಾರತದ ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಟಿವಿಎಸ್ (TVS) ತಯಾರಿಸುವ ದ್ವಿಚಕ್ರ ವಾಹನಗಳನ್ನು ಪ್ರತಿಯೊಬ್ಬ ಗ್ರಾಹಕರು ಇಷ್ಟಪಟ್ಟು ಖರೀದಿಸುತ್ತಾರೆ. ಇಲ್ಲೊಂದು ಬೈಕ್ ಮಾರಾಟದಲ್ಲಿ ಕಂಪನಿಯು ದೊಡ್ಡ ಸಾಧನೆ ಮಾಡಿ, ಹೊಸ ಮೈಲಿಗಲ್ಲನ್ನು ನಿರ್ಮಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಟಿವಿಎಸ್ ಮೋಟಾರ್ ಕಂಪನಿ (TVS Motor Company), ಜನಪ್ರಿಯ ಅಪಾಚೆ ಸರಣಿಯ ಮೋಟಾರ್‌ಸೈಕಲ್‌ಗಳ 50 ಲಕ್ಷ ಯುನಿಟ್‌ಗಳನ್ನು ಜಾಗತಿಕ ಮಾರಾಟ ಮಾಡಿ, ದೊಡ್ಡ ದಾಖಲೆಯನ್ನು ನಿರ್ಮಾಣ ಮಾಡಿದೆ. ಭಾರತೀಯ ಮಾಲೀಕತ್ವದ ಟಿವಿಎಸ್ 60ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದೆ. ಅಪಾಚೆ ಸರಣಿ ಬೈಕ್ ಗಳನ್ನು 2005ರಲ್ಲಿ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿತ್ತು. ಅಂದಿನಿಂದಲೂ ಕಾರ್ಯಕ್ಷಮತೆ ಹಾಗೂ ಆಕರ್ಷಕ ಲುಕ್ ನಿಂದ ಹೆಚ್ಚಿನ ಖರೀದಿದಾರರನ್ನು ಸೆಳೆಯುತ್ತಿದೆ.

ಟಿವಿಎಸ್ ಅಪಾಚೆ ಸರಣಿಯ ಒಟ್ಟು ಐದು ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಅಪಾಚೆ RTR 160, ಬೆಂಗಳೂರಿನಲ್ಲಿ ರೂ.1,57,287 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 159.7ಸಿಸಿ, ಏರ್ ಕೋಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 15.8 bhp ಗರಿಷ್ಠ ಪವರ್, 13.85 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು,5 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಜೊತೆಗೆ ಗ್ಲೋಸ್ ಬ್ಲ್ಯಾಕ್, ಪರ್ಲ್ ವೈಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ.
ಟಿವಿಎಸ್ ಅಪಾಚೆ RTR 160 4V ಬೈಕ್, ರೂ.1,62,992 ಆನ್-ರೋಡ್ ದರದಲ್ಲಿ ದೊರೆಯಲಿದೆ. ಇದು 12 ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 45 kmpl ಮೈಲೇಜ್ ನೀಡುತ್ತದೆ. ಇದು 159.7cc, ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಫೋರ್ ವಾಲ್ವ್ ಎಂಜಿನ್ ಹೊಂದಿದ್ದು,
17.39 bhp ಗರಿಷ್ಠ ಪವರ್ ಹಾಗೂ 14.73 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫ್ರಂಟ್ ಡಿಸ್ಕ್, ರೇರ್ ಡ್ರಮ್ ಬ್ರೇಕ್ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಟಿವಿಎಸ್ ಅಪಾಚೆ RR310 ಬೈಕ್, ರೂ.3,42,092 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 312.2 ಸಿಸಿ BS6 ಎಂಜಿನ್ ಹೊಂದಿದ್ದು, 33.5 bhp ಗರಿಷ್ಠ ಪವರ್ ಹಾಗೂ 27.3 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 30 kmpl ಮೈಲೇಜ್ ನೀಡುತ್ತದೆ. ಈ ಬೈಕ್ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಫುಲ್ LED ಲೈಟಿಂಗ್, ಬ್ಲೂಟೂತ್ ಕನೆಕ್ಟ್ದ್ TFT ಡಿಸ್ಪ್ಲೇಯನ್ನು ಹೊಂದಿದೆ.
ಅಲ್ಲದೆ, ಟಿವಿಎಸ್ ಅಪಾಚೆ RTR 200 4V, ಬೆಂಗಳೂರಿನಲ್ಲಿ ರೂ.1,80,716 ಆನ್-ರೋಡ್ ದರದಲ್ಲಿ ಸಿಗಲಿದೆ. 12 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 39 kmpl ಮೈಲೇಜ್ ನೀಡುತ್ತದೆ. 197.75 ಸಿಸಿ BS6 ಎಂಜಿನ್ ಹೊಂದಿದ್ದು, 20.54 bhp ಗರಿಷ್ಠ ಪವರ್ ಹಾಗೂ 17.25 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದ್ದು, ಗ್ಲಾಸ್ ಬ್ಲ್ಯಾಕ್, ಪರ್ಲ್ ವೈಟ್ ಮತ್ತು ಮ್ಯಾಟ್ ಬ್ಲೂ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ.
ಅಪಾಚೆ RTR 180, ರೂ.1,57,604 ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, 42 kmpl ಮೈಲೇಜ್ ನೀಡಲಿದೆ. ಜೊತೆಗೆ 177.4 ಸಿಸಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್ ಎಂಜಿನ್ ಪಡೆದಿದ್ದು, 16.5 bhp ಪವರ್ ಹಾಗೂ 15.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. LED ಪೈಲಟ್ ಲ್ಯಾಂಪ್, ಹ್ಯಾಲೊಜೆನ್ ಹೆಡ್‌ಲೈಟ್, LED ಟೈಲ್‌ಲೈಟ್, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಹೇಳಬಹುದು.
ಒಟ್ಟಾರೆಯಾಗಿ ಟಿವಿಎಸ್ ಮಾರಾಟ ಫೆಬ್ರವರಿ ತಿಂಗಳ ದ್ವಿಚಕ್ರ ವಾಹನ ಮಾರಾಟದಲ್ಲಿ ಕೊಂಚ ಹಿನ್ನಡೆ ಸಾಧಿಸಿದೆ. ಆದರೆ, ತನ್ನ ಎಲೆಕ್ಟ್ರಿಕ್ ಸ್ಕೂಟರ್ ಐಕ್ಯೂಬ್ ಮಾರಾಟದಲ್ಲಿ ಮಾತ್ರ ಉತ್ತಮ ಪ್ರಗತಿ ಸಾಧಿಸಿದೆ. ಅಲ್ಲದೆ, ಅಪಾಚೆ ಸರಣಿಯ ಮೋಟಾರ್‌ಸೈಕಲ್‌ಗಳು ಜಾಗತಿಕವಾಗಿ 50 ಲಕ್ಷ ಯುನಿಟ್ ಮಾರಾಟವಾಗಿರುವುದು ದೊಡ್ಡ ದಾಖಲೆಯಾಗಿದೆ. ಈ ಬೈಕ್ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಬಜಾಜ್ ಪಲ್ಸರ್ ಗೆ ಭಾರೀ ಪೈಪೋಟಿ ನೀಡಲಿದೆ.


Click it and Unblock the Notifications