TVS XL: ರೈತರ ಮೆಚ್ಚಿನ ಟಿವಿಎಸ್ ಎಕ್ಸ್ಎಲ್ ಎಲೆಕ್ಟ್ರಿಕ್ ಅವತಾರದಲ್ಲಿ ಬರುತ್ತೆ!
ಟಿವಿಎಸ್ (TVS) ಕಂಪನಿಯ ಎಕ್ಸ್ಎಲ್ (XL) ಮೊಪೆಡ್ ದೇಶದ ಗ್ರಾಮೀಣ ಜನರ, ಅದರಲ್ಲೂ ರೈತರ ಜೀವನಾಡಿಯಾಗಿದೆ. ದಶಕಗಳಿಂದ ಮಾರಾಟವಾಗುತ್ತಿದ್ದು, ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. ಸದ್ಯ, ಭಾರತವು ಶುದ್ಧ ಪರಿಸರ ನಿರ್ಮಾಣದತ್ತ ಹೆಜ್ಜೆ ಹಾಕುತ್ತಿದ್ದು, ಅದಕ್ಕೆ ತಾನೇನು ಹೊರತಾಗಿಲ್ಲ ಎನ್ನುವಂತೆ ಟಿವಿಎಸ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ತೊಡಗಿದೆ.
ಈಗಾಗಲೇ, ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಿ, ಭಾರೀ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಹೊಂದಿರುವ ಕಂಪನಿಯು, ಆಗಸ್ಟ್‌ನಲ್ಲಿ ಕ್ರೆವ್ನ್ (Creon) ಇ-ಸ್ಕೂಟರ್ ಬಿಡುಗಡೆಗೆ ತಯಾರಿಯನ್ನು ನಡೆಸುತ್ತಿದೆ. ಇದೀಗ, ಟಿವಿಎಸ್ ಕಂಪನಿಯು ದೊಡ್ಡಮಟ್ಟದಲ್ಲಿ ಜನಮನ್ನಣೆ ಗಳಿಸಿರುವ ಎಕ್ಸ್ಎಲ್ ಮೊಪೆಡ್ ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ದತೆಯನ್ನು ನಡೆಸುತ್ತಿದೆ ಎಂದು ವಿವಿಧ ಮಾಧ್ಯಮಗಳು ವರದಿ ಮಾಡಿವೆ.

ಈ ಕುರಿತಂತೆ, ಟಿವಿಎಸ್ ಎಕ್ಸ್ಎಲ್ ಎಲೆಕ್ಟ್ರಿಕ್ ಅವತಾರದಲ್ಲಿ ಹೀಗಿರಬಹುದು ಎನ್ನುವ ಚಿತ್ರವೊಂದು ಇಂಟರ್ನೆಟ್ ನಲ್ಲಿ ಸೋರಿಕೆಯಾಗಿದೆ. ಅದರ ಅನ್ವಯ, ಎಲೆಕ್ಟ್ರಿಕ್ ರೂಪದಲ್ಲಿ ಬರುವ ಎಕ್ಸ್ಎಲ್ ಮೊಪೆಡ್ ವಿನ್ಯಾಸದಲ್ಲಿ ಯಾವುದೇ ಹೊಸ ಬದಲಾವಣೆಗಳನ್ನು ಪಡೆದುಕೊಂಡಿಲ್ಲ. ರೌಂಡ್ ಹೆಡ್‌ಲೈಟ್, ಸ್ಪ್ಲಿಟ್ ಸೀಟ್, ಟ್ಯೂಬ್ಯುಲರ್ ಗ್ರ್ಯಾಬ್ ರೈಲ್ ಅದೇ ರೀತಿಯಲ್ಲಿ ಇರಲಿವೆ. ಮೊಪೆಡ್ ಮಧ್ಯಭಾಗದಲ್ಲಿ ಬ್ಯಾಟರಿ ಇರಲಿದೆ.
ಇದರೊಟ್ಟಿಗೆ, ಹಳೆಯ ಎಕ್ಸ್ಎಲ್ ರೀತಿಯಲ್ಲೇ ಸಸ್ಪೆನ್ಷನ್ ಸೆಟಪ್ ಹಾಗೂ ಬ್ರೇಕಿಂಗ್ ಸಿಸ್ಯಮ್ ಹೊಂದಿರಲಿದೆಯಂತೆ. ಎಲೆಕ್ಟ್ರಿಕ್ ಅವತಾರದಲ್ಲಿ ಬರಲಿರುವ ಎಕ್ಸ್ಎಲ್ ಮೊಪೆಡ್ ರೇಂಜ್ ಹಾಗೂ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಮುಂಬರುವ ದಿನಗಳಲ್ಲಿ ಈ ಬಗ್ಗೆ ಟಿವಿಎಸ್ ಕಂಪನಿ ಅಧಿಕೃತ ವಿವರ ನೀಡಬಹುದು. ಒಂದೊಮ್ಮೆ, ಟಿವಿಎಸ್ ಎಲೆಕ್ಟ್ರಿಕ್ ರೂಪದಲ್ಲಿ ಬಿಡುಗಡೆಯಾದರೆ, 'ಲೂನಾ' ಮೊಪೆಡ್ ಗೆ ಪ್ರಬಲ ಪ್ರತಿಸ್ಪರ್ಧಿಯಾಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟಿವಿಎಸ್ ಎಕ್ಸ್ಎಲ್ 100 ಮೊಪೆಡ್, ಬೆಂಗಳೂರಿನಲ್ಲಿ ರೂಪಾಂತರಗಳಿಗೆ ಅನುಗುಣವಾಗಿ ರೂ. 60,629 ದಿಂದ ರೂ.73,220 ಆನ್-ರೋಡ್ ಬೆಲೆಯನ್ನು ಹೊಂದಿದೆ. 99.7 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 4.3 bhp ಗರಿಷ್ಠ ಪವರ್ ಹಾಗೂ 6.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 51.5 kmpl ಮೈಲೇಜ್ ನೀಡುತ್ತದೆ.
ಟಿವಿಎಸ್ ಎಕ್ಸ್ಎಲ್ 100 ವಿಶೇಷತೆಗಳ ಬಗ್ಗೆ ಹೇಳುವದಾದರೆ, ಇದು, 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಪಡೆದಿದ್ದು, 86 ಕೆಜಿ ತೂಕವಿದೆ. ಬರೋಬ್ಬರಿ 130 ಕೆಜಿ ತೂಕದವರೆಗೆ ಸರಕನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಸಸ್ಪೆನ್ಷನ್ ಸೆಟಪ್ ಕುರಿತು ತಿಳಿದುಕೊಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಹಾಗೂ ರೇರ್ ಡ್ಯುಯಲ್ ಹೈಡ್ರಾಲಿಕ್ ಸ್ಪ್ರಿಂಗ್ಸ್ ಸೆಟಪ್ ಒಳಗೊಂಡಿದೆ. ಜೊತೆಗೆ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.
ಟಿವಿಎಸ್ ಆಗಸ್ಟ್‌ನಲ್ಲಿ ಬಿಡುಗಡೆಗೊಳಿಸಲು ಹೊರಟಿರುವ ಕ್ರೆವ್ನ್ (Creon) ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳುವುದಾದರೆ, ಇದು, ದೇಶೀಯ ಮಾರುಕಟ್ಟೆಯಲ್ಲಿ ರೂ.1.20 ಬೆಲೆಯಲ್ಲಿ ಖರೀದಿಗೆ ಸಿಗಬಹುದು. 40 Ah ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಪಡೆದುಕೊಂಡಿರಲಿದ್ದು, 80 km ರೇಂಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಟ್ಯೂಬ್ಲೆಸ್ ಟೈಯರ್ ಹಾಗೂ ಡಿಸ್ಕ್ ಬ್ರೇಕ್ ನೊಂದಿಗೆ ಗ್ರಾಹಕರಿಗೆ ಲಭ್ಯವಾಗಬಹುದು.
ಟಿವಿಎಸ್ ಕಂಪನಿಯ ಜನಪ್ರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಮಾತನಾಡುವುದಾದರೆ, ಇದು ಎರಡು ರೂಪಾಂತರಗಳ ಆಯ್ಕೆಯಲ್ಲಿ ದೊರೆಯುತ್ತದೆ. ವೇರಿಯೆಂಟ್ಸ್ ಅನುಗುಣವಾಗಿ ರೂ.1,23,776 ದಿಂದ ರೂ.1,38,883 ಬೆಲೆಯನ್ನು ಹೊಂದಿವೆ. ಇವುಗಳಲ್ಲಿ 3.04 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಫುಲ್ ಚಾರ್ಜಿನಲ್ಲಿ 100 km ರೇಂಜ್ ನೀಡುತ್ತವೆ. 75 km/h ಟಾಪ್ ಸ್ವೀಡ್ ಪಡೆಯಲಿವೆ.
ಈ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗ್ರಾಹಕರನ್ನು ಆಕರ್ಷಿಸುವ ಹಲವು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ದೊಡ್ಡದಾದ TFT ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ. ಕೆಲವೇ ದಿನಗಳ ಹಿಂದೆ, ಟಿವಿಎಸ್ ಕಂಪನಿ, ಐಕ್ಯೂಬ್ ಇ-ಸ್ಕೂಟರ್ ನ ಹೊಸ ರೂಪಾಂತರವನ್ನು ಕಡಿಮೆ ದರಕ್ಕೆ ಬಿಡುಗಡೆಗೊಳಿಸಲು ತಯಾರಿಸಿ ನಡೆಸುತ್ತಿದೆ ಎಂದು ವರದಿಯಾಗಿತ್ತು. ಅದಕ್ಕೆ ಕಂಪನಿ ಕಡೆಯಿಂದ ಅಧಿಕೃತ ಸ್ಪಷ್ಟನೆ ಸಿಗಬೇಕಾಗಿದೆ.


Click it and Unblock the Notifications