Ultraviolette: ಬೆಂಗಳೂರಿನ 'ಅಲ್ಟ್ರಾವೈಲೆಟ್'ನಿಂದ ಹೊಸ ಹೆಸರು ನೋಂದಣಿ.. ಕಡಿಮೆ ಬೆಲೆಯಲ್ಲಿ ಇವಿ?
ಭಾರತದ ಎಲೆಕ್ಟ್ರಿಕ್ ವಾಹನ (ಇವಿ) ಮಾರುಕಟ್ಟೆಯಲ್ಲಿ ಬೆಂಗಳೂರು ಮೂಲದ ಕಂಪನಿಗಳೇ ಪಾರುಪತ್ಯ ಸಾಧಿಸುತ್ತಿವೆ. ಅದರಲ್ಲೂ ಅಲ್ಟ್ರಾವೈಲೆಟ್ (Ultraviolette) ದುಬಾರಿ ಬೆಲೆಯಲ್ಲಿ ಆಕರ್ಷಕ ವೈಶಿಷ್ಟ್ಯ ಹೊಂದಿರುವ ತನ್ನ 'F77' ಎಲೆಕ್ಟ್ರಿಕ್ ಬೈಕ್‌ನಿಂದಲೇ ದೊಡ್ಡಮಟ್ಟದ ಅಭಿಮಾನಿ ಬಳಗವನ್ನು ಹೊಂದಿದೆ. ಸದ್ಯ, ನೂತನ ಇವಿಯ ಹೆಸರನ್ನು ನೋಂದಣಿ ಮಾಡಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದನ್ನು ಬಿಡುಗಡೆಗೊಳಿಸಲು, ಇತ್ತೀಚೆಗೆ ಕಂಪನಿಯು 'ಅಲ್ಟ್ರಾವೈಲೆಟ್ X44' ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಮಾಡಿದೆ. ಪ್ರಸ್ತುತ, ತಯಾರಿಸುತ್ತಿರುವ ನೂತನ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗೆ ಈ ಹೆಸರನ್ನು ಬಳಕೆ ಮಾಡಬಹುದು ಎಂದು ಅಂದಾಜಿಸಲಾಗಿದ್ದು, ಅದು ಸಹ ಅತ್ಯಂತ ಕೈಗೆಟುಕುವ ದರದಲ್ಲಿ ಗ್ರಾಹಕರಿಗೆ ಸಿಗಬಹುದು ಎಂದು ಮಾರುಕಟ್ಟೆ ತಜ್ಞರು ನಿರೀಕ್ಷಿಸಿದ್ದಾರೆ.

ಇನ್ನೊಂದು ವಾದದ ಪ್ರಕಾರ, ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಸ್ಕೂಟರ್‌ಗಳಿಗೆ ಭಾರೀ ಬೇಡಿಕೆಯಿದೆ. ಅದನ್ನು ಅರಿತುಕೊಂಡಿರುವ ಕಂಪನಿಯು, ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 'ಅಲ್ಟ್ರಾವೈಲೆಟ್ X44' ಹೆಸರಿನಲ್ಲಿ ಬಿಡುಗಡೆಗೊಳಿಸಲು ತಯಾರಿ ನಡೆಸುತ್ತಿದೆ ಎಂದು ಹೇಳಲಾಗಿದೆ. ಇದರಿಂದ ಕಂಪನಿಯ ಮಾರಾಟ ಪ್ರಮಾಣ ದ್ವಿಗುಣಗೊಳ್ಳುತ್ತದೆ ಎಂಬುದು ಲೆಕ್ಕಾಚಾರವಾಗಿದೆ.
ಪ್ರಸ್ತುತ, ಭಾರತದಲ್ಲಿ ಖರೀದಿಗೆ ಸಿಗುವ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬಗ್ಗೆ ಮಾತನಾಡುವುದಾದರೆ, ಇದು ದುಬಾರಿ ಬೆಲೆಯನ್ನು ಹೊಂದಿದೆ. ಕಂಪನಿಯು ಈ ಬೈಕ್ ಅನ್ನು ರೂ.3.8 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಬಿಡುಗಡೆ ಮಾಡಿತ್ತು. ಇದರ ಪ್ರೀಮಿಯಂ ಮಾದರಿ F77 ರೆಕಾನ್ ರೂ.4.55 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಪವರ್ ಟ್ರೈನ್ ಬಗ್ಗೆ ಹೇಳುವುದಾದರೆ, ಇದರಲ್ಲಿ PMS ಮೋಟಾರ್ ಬಳಕೆ ಮಾಡಲಾಗಿದೆ. ಇದು, 38.8 bhp ಗರಿಷ್ಠ ಪವರ್ ಹಾಗೂ 95 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಬೈಕ್, 147 km/h ಟಾಪ್ ಸ್ವೀಡ್ ಪಡೆಯಲಿದೆ ಎಂಬುದು ಪ್ರಮುಖ ವಿಶೇಷತೆಯಾಗಿದೆ.
ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಎರಡು ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಅವುಗಳೆಂದರೆ, 7.1 kWh ಹಾಗೂ 10.3 kWh ಬ್ಯಾಟರಿ ಪ್ಯಾಕ್. ಅದಕ್ಕೆ ಅನುಗುಣವಾಗಿ ಈ ಮೋಟಾರ್‌ಸೈಕಲ್ ಫುಲ್ ಚಾರ್ಜಿನಲ್ಲಿ 206 km ರಿಂದ 307 km ರೇಂಜ್ ನೀಡುತ್ತದೆ. ಸ್ಟ್ಯಾಂಡರ್ಡ್ ಚಾರ್ಜರ್ ಬಳಕೆಯಲ್ಲಿ ಈ ಬೈಕ್, 35 km ರೇಂಜ್ ನೀಡುವಷ್ಟು ಚಾರ್ಜ್ ಆಗಲು ಒಂದು ಗಂಟೆ ತೆಗೆದುಕೊಳ್ಳುತ್ತದೆ.
ಅದೇ ರೀತಿಯಲ್ಲಿ ಬೂಸ್ಟ್ ಚಾರ್ಜರ್ ಉಪಯೋಗ ಮಾಡಿದಾಗ 75 km ರೇಂಜ್ ಕೊಡುವಷ್ಟು ಚಾರ್ಜ್ ಆಗಲು, ಒಂದು ಗಂಟೆಯೇ ಬೇಕಾಗುತ್ತದೆ. ಈ ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್, ಫ್ರಂಟ್ 41 ಎಂಎಂ USD ಫೋರ್ಕ್, ರೇರ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ವಿಚಾರಕ್ಕೆ ಬರುವುದಾದರೆ, ಫ್ರಂಟ್ 20 ಎಂಎಂ ಹಾಗೂ ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಬೈಕ್ ಗ್ರಾಹಕರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ, ಬ್ಲೂಟೂತ್ & ಸ್ಮಾರ್ಟ್‌ಫೋನ್ ಕನೆಕ್ಟಿವಿಟಿಯೊಂದಿಗೆ 5 ಇಂಚಿನ TFT ಇನ್ಸ್ಟ್ರುಮೆಂಟಲ್ ಕನ್ಸೋಲ್, LED ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್, ಕ್ರ್ಯಾಶ್ ಡಿಟೆಕ್ಷನ್, 9 ಆಕ್ಸಿಸ್ IMU ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಗ್ಲೈಡ್, ಕಾಂಬ್ಯಾಟ್ ಮತ್ತು ಬ್ಯಾಲಿಸ್ಟಿಕ್ ಎಂಬ ರೈಡಿಂಗ್ ಮೋಡ್ ಗಳನ್ನು ಒಳಗೊಂಡಿದೆ.
ಇನ್ನು, ಕಂಪನಿಯು 'ಅಲ್ಟ್ರಾವೈಲೆಟ್ X44' ನೇಮ್‌ಪ್ಲೇಟ್ ಅನ್ನು ಟ್ರೇಡ್‌ಮಾರ್ಕ್ ಮಾಡಿದ್ದು, ಅದರಲ್ಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುವ ದ್ವಿಚಕ್ರ ವಾಹನವಾಗಿದೆ ಎಂದು ಅಂದಾಜಿಸಲಾಗಿರುವುದರಿಂದ ದೇಶೀಯ ಗ್ರಾಹಕರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಈ ಬಗ್ಗೆ ಕಂಪನಿಯಿಂದ ಸ್ಪಷ್ಟನೆ ಬಂದ ನಂತರ ಎಲ್ಲ ಗೊಂದಲಗಳಿಗೆ ಅಧಿಕೃತವಾಗಿ ತೆರೆಬೀಳಲಿದೆ. ಅಲ್ಲಿಯವರೆಗೆ ಇವೆಲ್ಲವೂ ಕೇವಲ ಉಹಾಪೋಹವಷ್ಟೇ ಎಂದು ಹೇಳಬಹುದು.


Click it and Unblock the Notifications








