ಬ್ಯಾಟರಿ ಮೇಲೆ 8 ಲಕ್ಷ ಕಿ.ಮೀ ವಾರಂಟಿ: 307 ಕಿ.ಮೀ ರೇಂಜ್... ಬೆಂಗಳೂರಿನ ಇವಿ ಬೈಕ್ ಸೂಪರ್!
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕಾ ಕಂಪನಿಯಾದ ಅಲ್ಟ್ರಾವೈಲೆಟ್ (ultraviolette) ತನ್ನ ಪ್ರಮುಖ ಎಲೆಕ್ಟ್ರಿಕ್ ಬೈಕ್ ಆದ F77ಗೆ ಹೊಸ ಬ್ಯಾಟರಿ ವಾರಂಟಿಗಳನ್ನು ಪರಿಚಯಿಸಿದೆ. ಈ ವಾರಂಟಿ ಮೂಲಕ ನಿರೀಕ್ಷಿತ ಖರೀದಿದಾರರು ಬ್ಯಾಟರಿಯ ವಾರಂಟಿಯನ್ನು ವಿಸ್ತರಿಸಲು ವಿವಿಧ ಆಯ್ಕೆಗಳನ್ನು ಹೊಂದಿರುವುದಾಗಿ ವರದಿಯಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಖರೀದಿಗೆ ಹಿಂದೇಟು ಹಾಕಲು ಪ್ರಮುಖ ಕಾರಣವೆಂದರೆ ಚಾರ್ಜಿಂಗ್ ಮೂಲ ಸೌಕರ್ಯ ಹಾಗೂ ಬ್ಯಾಟರಿ ಮೇಲಿನ ಅಪನಂಬಿಕೆಯಾಗಿದೆ. ಆದ್ರೆ ಈಗ ಚಾರ್ಜಿಂಗ್ ಸ್ಟೇಷನ್‌ಗಳು ವೇಗವಾಗಿ ಬೆಳೆಯುತ್ತಿವೆ. ಬಹುತೇಕ ಸಿಟಿಗಳಲ್ಲಿ ಈಗಾಗಲೇ ಈ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಉಳಿದಂತೆ ಬ್ಯಾಟರಿ ಮೇಲಿನ ಸಂದೇಹಗಳಿಗೂ ಅಲ್ಟ್ರಾವೈಲೆಟ್ ಸರಿಯಾದ ಉತ್ತರ ನೀಡುತ್ತಿದೆ. ಹೌದು.. ಕಂಪನಿಯು ಈಗ ಬ್ಯಾಟರಿ ಪ್ಯಾಕ್‌ಗಳ ಮೇಲಿನ ವಾರೆಂಟಿಯನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ಕಂಪನಿಯು ಯುವಿ ಕೇರ್, ಯುವಿ ಕೇರ್ + ಮತ್ತು ಯುವಿ ಕೇರ್ ಮ್ಯಾಕ್ಸ್ ಎಂಬ ಮೂರು ವಾರಂಟಿ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ.

ಅಲ್ಟ್ರಾವೈಲೆಟ್ ಕಂಪನಿಯು ತಮ್ಮ ಬ್ಯಾಟರಿಗಳ ಮೇಲಿನ ಬಲವಾದ ನಂಬಿಯೊಂದಿಗೆ ಬರೋಬ್ಬರಿ 8 ಲಕ್ಷ ಕಿ.ಮೀ ಅಥವಾ ಎಂಟು ವರ್ಷಗಳ ವಾರೆಂಟಿಯನ್ನು ನೀಡುತ್ತಿದೆ. ಬ್ಯಾಟರಿ ತಂತ್ರಜ್ಞಾನದ ಜಗತ್ತಿನಲ್ಲಿ ಇಂತಹ ಪ್ರಗತಿಯೊಂದಿಗೆ, ಮುಂದಿನ ಕೆಲವು ವರ್ಷಗಳಲ್ಲಿ ಇವಿ ಅಳವಡಿಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ.
ಬ್ಯಾಟರಿ ಬಗ್ಗೆ ಚಿಂತೆ ಬೇಡ: ಎಫ್ 77 ಬೈಕ್ ಒಂದು ಲಕ್ಷ ಕಿ.ಮೀ ದೂರವನ್ನು ಕ್ರಮಿಸಿದ ನಂತರವೂ, ಬ್ಯಾಟರಿ ಮೂಲ ರೇಟಿಂಗ್ ಸಾಮರ್ಥ್ಯದಲ್ಲಿ ಶೇಕಡಾ 95 ಕ್ಕಿಂತ ಹೆಚ್ಚು ಉಳಿಸಿಕೊಂಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಇಂತಹ ವಿಶ್ವಾಸಾರ್ಹ ಬ್ಯಾಟರಿ ಪ್ಯಾಕ್‌ನೊಂದಿಗೆ, ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳ ಮೇಲಿರುವ ಅಪನಂಬಿಕೆಯನ್ನು ಬಿಟ್ಟು ಗ್ರಾಹಕರು ಇವಿ ಖರೀದಿಸಲು ಈಗ ಯೋಚಿಸಬೇಕಾಗಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಹೊಸ ವಾರೆಂಟಿ: ಮೊದಲ ಎರಡು ವಾರೆಂಟಿ (ಯುವಿ ಕೇರ್, ಯುವಿ ಕೇರ್ +) ಪ್ಯಾಕ್‌ಗಳು 60,000 ಕಿ.ಮೀ ಮತ್ತು 1 ಲಕ್ಷ ಕಿ.ಮೀ ಪರಿಷ್ಕೃತ ಮಿತಿಯನ್ನು ಹೊಂದಿದ್ದರೇ, ಯುವಿ ಕೇರ್ ಮ್ಯಾಕ್ಸ್‌ಗೆ ಹೊಸ ದೂರದ ಮಿತಿಯಾಗಿ 8 ಲಕ್ಷ ಕಿ.ಮೀ ಅಥವಾ ಎಂಟು ವರ್ಷಗಳ ವಾರೆಂಟಿಯನ್ನು ನೀಡಲಾಗುತ್ತಿದೆ. ಇದು ಹಿಂದಿನ ವಾರಂಟಿಗೆ ಹೋಲಿಸಿಕೊಂಡರೆ ಎಂಟು ಪಟ್ಟು ಹೆಚ್ಚಾಗಿದೆ. ಈ ಹೊಸ ವಾರಂಟಿ ಪ್ಯಾಕ್ ಈಗಾಗಲೇ ಎಫ್ 77 ಮೋಟಾರ್‌ಸೈಕಲ್ ಹೊಂದಿರುವ ಗ್ರಾಹಕರು ಸಹ ಖರೀದಿಸಬಹುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೆಯೇ ಅಲ್ಟ್ರಾವಯಲೆಟ್ ಈ ವಾರಂಟಿ ಪ್ಯಾಕ್‌ಗಳ ಬೆಲೆಯನ್ನು ಇನ್ನೂ ಹಂಚಿಕೊಂಡಿಲ್ಲ.
ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳು ಶುರು: ಅಲ್ಟ್ರಾವೈಲೆಟ್ ಕಂಪನಿಯು ಮೊದಲ ಹಂತವಾಗಿ ದೇಶದ ಪ್ರಮುಖ ನಗರಗಳಲ್ಲಿ ಸೂಪರ್‌ನೋವಾ (SUPERNOVA) ಹೆಸರಿನ 100ಕ್ಕೂ ಹೆಚ್ಚು ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲು ತೀರ್ಮಾನ ಮಾಡಿದೆ. ಈಗಾಗಲೇ ಕರ್ನಾಟಕ ಮಹಾರಾಷ್ಟ್ರ ಮತ್ತು ತಮಿಳುನಾಡಿನ ವಿವಿಧ ನಗರಗಳಲ್ಲಿ 10 ಚಾರ್ಜಿಂಗ್ ಸ್ಟೇಷನ್‌ಗಳು ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಕೆಲವೇ ನಿಮಿಷಗಳಲ್ಲಿ ಚಾರ್ಜ್ ಆಗಲಿವೆ.

12 ಕೆಡಬ್ಲ್ಯೂ (kW) ಮತ್ತು 6 ಕೆಡಬ್ಲ್ಯೂ (kW) ಸಾಮರ್ಥ್ಯದ ಈ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳು, ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)ನಿಂದಲೂ ಮಾನ್ಯತೆಯನ್ನು ಪಡೆದಿವೆ. ಕೇವಲ 40 ರಿಂದ 60 ನಿಮಿಷಗಳಲ್ಲಿ ಅಲ್ಟ್ರಾವೈಲೆಟ್‍ನ ಎಫ್77 ಎಲೆಕ್ಟ್ರಿಕ್ ಬೈಕ್‌ಗಳು ಶೇ 20 ರಿಂದ 80 ರಷ್ಟು ಚಾರ್ಜ್ ಆಗಲಿದ್ದು, ಇನ್ಮುಂದೆ ದೂರದ ಊರುಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಸಾಮಾನ್ಯ ಅಲ್ಟ್ರಾವೈಲೆಟ್‍ನ ಎಫ್77 ಎಲೆಕ್ಟ್ರಿಕ್ ಬೈಕ್ ರೂ.3,80,000 ಹಾಗೂ ಪ್ರೀಮಿಯಂ ಮಾದರಿ ಎಫ್77 ರೆಕಾನ್ ರೂ.4,55,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇವೆರೆಡು ಆವೃತ್ತಿಗಳಲ್ಲಿ ಪಿಎಂಎಸ್ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಹೆಚ್ಚುಕಮ್ಮಿ 38.8 ಬಿಹೆಚ್‍ಪಿ ಗರಿಷ್ಠ ಪವರ್ (ಶಕ್ತಿ) ಮತ್ತು 95 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತವೆ.

ಅಲ್ಟ್ರಾವೈಲೆಟ್‍ನ ಎಫ್77 ಎಲೆಕ್ಟ್ರಿಕ್ ಬೈಕ್ ಮಾದರಿಗಳು, 7.1 ಕೆಡಬ್ಲ್ಯೂಹೆಚ್ (kWh) ಮತ್ತು 10.3 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿ ಒಳಗೊಂಡಿವೆ. ಫುಲ್ ಚಾರ್ಜ್‌ನಲ್ಲಿ ಕ್ರಮವಾಗಿ 206 ಕಿ.ಮೀನಿಂದ 307 ಕಿ.ಮೀ ರೇಂಜ್ (ಮೈಲೇಜ್) ಕೊಡುತ್ತವೆ. ಜೊತೆಗೆ ಗಂಟೆಗೆ 147 ಕಿ.ಮೀ ವರೆಗೆ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿವೆ.


Click it and Unblock the Notifications








