ಭಾರತದಲ್ಲಿ ಯಮಹಾ ಸ್ಕೂಟರ್, ಬೈಕ್‌ಗಳ ದರ ಹೆಚ್ಚಳ
ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಯಮಹಾ ಮೋಟಾರ್ ಇಂಡಿಯಾ, ತನ್ನ ವಿವಿಧ ಮಾದರಿ ಬೆಲೆಯನ್ನು ಹೆಚ್ಚಿಸಿದೆ. ಅವುಗಳಲ್ಲಿ ಖರೀದಿದಾರರು ಇಷ್ಟಪಟ್ಟು ಕೊಳ್ಳುವ ಆರ್15, FZX, FZ25, ಎಂಟಿ15 ಹಾಗೂ ಫ್ಯಾಸಿನೊ ಸೇರಿವೆ. ನೂತನ ದರಗಳು ಈ ತಿಂಗಳಿನಿಂದಲೇ ಜಾರಿಗೆ ಬಂದಿವೆ.
ಯಾವ ಬೈಕ್‌ಗೆ ಎಷ್ಟು:
ಅತ್ಯಾಕರ್ಷಕ ಬೈಕ್‌ಗಳಾದ FZ25 ಹಾಗೂ FZS 25 ದರವನ್ನು ಯಮಹಾ, ಗರಿಷ್ಠ ಪ್ರಮಾಣದಲ್ಲಿ ಏರಿಕೆ ಮಾಡಿದ್ದು, ಎರಡು ಮಾದರಿ ಬೆಲೆ ಬರೋಬ್ಬರಿ ರೂ.3,000 ಹೆಚ್ಚಳವಾಗಿದೆ. ಇದರಿಂದ ಎಂಟ್ರಿ ಲೆವೆಲ್ FZ 25 ಆರಂಭಿಕ ಬೆಲೆ ರೂ.1,49,900 (ಎಕ್ಸ್ ಶೋರೂಂ)ದಿಂದ ಶುರುವಾಗಲಿದೆ. ಆದರೆ, ಕಂಪನಿಯು FZ, FZ-FI ಹಾಗೂ FZS-FI ದರವನ್ನು ಏರಿಕೆ ಮಾಡಿಲ್ಲ ಎಂಬುದು ಖುಷಿ ವಿಚಾರವಾಗಿದೆ ಎಂದು ಹೇಳಬಹುದು.

ಯಮಹಾದ ಇತರೆ ಬೈಕ್‌ಗಳ ಬೆಲೆ ಏರಿಕೆ ಬಗ್ಗೆ ಮಾತನಾಡುವುದಾದರೆ, FZX ಬೈಕ್ ಬೆಲೆ ರೂ.1,500 ಹೆಚ್ಚಳವಾಗಿದ್ದು, ಇನ್ಮುಂದೆ ಮಾರುಕಟ್ಟೆಯಲ್ಲಿ ರೂ.1,34,400 ಎಕ್ಸ್ ಶೋರೂಂ ದರವನ್ನು ಹೊಂದಿರಲಿದೆ. ಯಮಹಾ ಎಂಟಿ15 ಬೆಲೆಯು ರೂ.1,000 ಏರಿಕೆಯಾಗಿದ್ದು, ಸದ್ಯ ಬ್ಲ್ಯಾಕ್ ಕಲರ್ ಎಂಟಿ15 ಆರಂಭಿಕ ಬೆಲೆ ರೂ.1,64,400ಕ್ಕೆ ತಲುಪಿದ್ದು, ಮೊಟೊಜಿಪಿ ಬೆಲೆ ರೂ.1,66,400ಗೆ ಏರಿದೆ. ಅಲ್ಲದೆ, R15 V3 ಬೆಲೆಯನ್ನು ರೂ.1,000ವರೆಗೆ ಹೆಚ್ಚಿಸಲಾಗಿದೆ. ಜೊತೆಗೆ R15 V4 ಬೆಲೆಯು ರೂ.1,000 ಏರಿದ್ದು, ರೂ.1,62,900 ಪ್ರಾರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಇಷ್ಟೇಅಲ್ಲದೆ, ಯಮಹಾ R15M V4 ಮೆಟಾಲಿಕ್ ಗ್ರೇ ಮಾದರಿ ಬೆಲೆ ಬರೋಬ್ಬರಿ ರೂ.1,500 ಹೆಚ್ಚಳವಾಗಿದೆ. WGP 60 ಎಡಿಷನ್ ಮತ್ತು ಮೊಟೊಜಿಪಿ ಎಡಿಷನ್ ಬೆಲೆ ರೂ.1,500 ಏರಿಕೆಯಾಗಿದ್ದು, R15 V4 ಮೆಟಾಲಿಕ್ ರೆಡ್ ಮಾದರಿ ರೂ. 1,79,900 ಆರಂಭಿಕ ಬೆಲೆಯಲ್ಲಿ ಖರೀದಿಗೆ ದೊರೆತರೆ, ಮೊಟೊಜಿಪಿ ಎಡಿಷನ್ ರೂ.1,93,400 ಎಕ್ಸ್ ಶೋರೂಂ ದರದಲ್ಲಿ ಗ್ರಾಹಕರು ಕೊಂಡುಕೊಳ್ಳಬಹುದು. ಕೈಗೆಟುಕುವ ಬೈಕುಗಳ ದರವೇ ಈ ಬಾರಿ ಹೆಚ್ಚಳವಾಗಿದ್ದು, ಖರೀದಿದಾರರಿಗೆ ಕೊಂಚ ಮಟ್ಟಿಗೆ ಬೇಸರ ತಂದಿದೆ.
ಸ್ಕೂಟರ್ ಬೆಲೆಯು ಏರಿಕೆ:
ಯಮಹಾ ಕಂಪನಿಯು ಕೇವಲ ಬೈಕ್‌ಗಳ ದರವನ್ನು ಮಾತ್ರ ಏರಿಕೆ ಮಾಡಿಲ್ಲ. ತನ್ನ ಪ್ರಮುಖ ಸ್ಕೂಟರ್ ಆಗಿರುವ ಫ್ಯಾಸಿನೊ ಬೆಲೆಯನ್ನು ಹೆಚ್ಚಿಸಿದೆ. ಡ್ರಮ್ ಬ್ರೇಕ್ ವೇರಿಯಂಟ್ ಫ್ಯಾಸಿನೊ 125 ದರವನ್ನು ರೂ.1,000, ಡಿಸ್ಕ್ ಬ್ರೇಕ್ ವೇರಿಯಂಟ್ ಬೆಲೆಯನ್ನು ರೂ.1,700 ಹೆಚ್ಚಿಸಿದೆ. ಈ ಮಾದರಿಗಳ ದರ ಏರಿಕೆ ಬಳಿಕ, ಫ್ಯಾಸಿನೊ 125 ಸ್ಕೂಟರ್ ಬೆಲೆ 77,100ದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿ ಬೆಲೆ ರೂ.88,730 ಇರಲಿದೆ (ಎಲ್ಲ ಬೆಲೆಗಳು ಎಕ್ಸ್ ಶೋರೂಂ ಆಧಾರಿತ).
ಯಮಹಾ RayZR ಡ್ರಮ್ ಬ್ರೇಕ್ ವೇರಿಯೆಂಟ್ ಬೆಲೆ ರೂ.1,000, ಡಿಸ್ಕ್ ಬ್ರೇಕ್ ವೇರಿಯಂಟ್ ಬೆಲೆಯನ್ನು ರೂ.1,700 ಏರಿಸಲಾಗಿದೆ. ಇದರಿಂದ ಈ ಹೊಸ ಸ್ಕೂಟರ್ ಆರಂಭಿಕ ಬೆಲೆಗಳು ರೂ.81,230ದಿಂದ ಆರಂಭವಾಗಲಿದೆ. ಯಮಹಾ Aerox 155 ಸ್ಕೂಟರ್ ಬೆಲೆ ಸದ್ಯ ರೂ.1,500 ಹೆಚ್ಚಳವಾಗಿದ್ದು, ರೂ.1,40,800 ಪ್ರಾರಂಭಿಕ ಬೆಲೆಯಲ್ಲಿ ಗ್ರಾಹಕರಿಗೆ ಸಿಗಲಿದೆ. ಮುಂಬರುವ ಹಬ್ಬದ ಸೀಸನ್ ನಲ್ಲಿ ಹೊಸ ದ್ವಿಚಕ್ರ ವಾಹನ ಖರೀದಿಸಬೇಕೆಂದು ಕೊಂಡವರಿಗೆ ಇದು ಕೊಂಚ ದುಬಾರಿಯಾಗಿದ್ದು, ಆಗ ರಿಯಾಯಿತಿಗಳನ್ನು ಕಂಪನಿಗಳು ನೀಡಬಹುದು.
ಭಾರತದ ಮಾರುಕಟ್ಟೆಯಲ್ಲಿ ಅತಿಹೆಚ್ಚು ಖರೀದಿದಾರರನ್ನು ಹೊಂದಿರುವ ಯಮಹಾ ಫ್ಯಾಸಿನೊ 125, ಐದು ರೂಪಾಂತರಗಳು ಹಾಗೂ 17 ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದ್ದು, 125 ಸಿಸಿ BS6 ಎಂಜಿನ್ ಹೊಂದಿದೆ. ಇದು 8.04 bhp ಗರಿಷ್ಠ ಪವರ್ ಹಾಗೂ 10.3 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5.2 ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 50 kmpl ಮೈಲೇಜ್ ನೀಡುವ ಸಾಮರ್ಥ್ಯ ಪಡೆದಿದೆ ಎಂದು ಹೇಳಬಹುದು.
ಒಟ್ಟಾರೆಯಾಗಿ ಕಂಪನಿಗಳು, ತಯಾರಿಕ ವೆಚ್ಚವನ್ನು ಸರಿದೂಗಿಸಲು ಬೆಲೆಯನ್ನು ಏರಿಕೆ ಮಾಡುತ್ತಿವೆ. ಆದರೆ, ಇದು ಗ್ರಾಹಕರ ಮೇಲೆ ಕೊಂಚ ಮಟ್ಟಿಗೆ ವ್ಯತಿರಿಕ್ತ ಪರಿಣಾಮವನ್ನು ಬಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬೆಲೆ ಏರಿಕೆ ಮಾಡಲಿ, ಅದನ್ನು ಖರೀದಿದಾರರ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಬೆಲೆ ಏರಿಕೆಯನ್ನು ಕಂಪನಿಗಳು, ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಮಾಡಿಲ್ಲ. ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳು ಸಹ ದರ ಏರಿಕೆ ಮಾಡಿವೆ. ಅದರಲ್ಲಿ ಪ್ರಮುಖವಾಗಿ ಟಾಟಾ ಮೋಟಾರ್ಸ್,ಮಹೀಂದ್ರಾ ಕಂಪನಿಗಳು ಸೇರಿವೆ.


Click it and Unblock the Notifications








