ಬೆಂಗಳೂರು ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆ: ಹೈಲ್ಮೆಟ್, DL ಬೇಕಿಲ್ಲ
ಭಾರತದ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಬಿಡುಗಡೆಯಾಗುತ್ತಿರುತ್ತವೆ. ಕೆಲವು ನವೀನ ವೈಶಿಷ್ಟ್ಯ ಹಾಗೂ ಕೈಗೆಟುಕುವ ಬೆಲೆಯಿಂದಲೇ ಗ್ರಾಹಕರಿಗೆ ಇಷ್ಟವಾಗುತ್ತವೆ. ಇದೀಗ, ಬೆಂಗಳೂರು ಮೂಲದ ಯುಲು (Yulu) ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಹೆಚ್ಚಿನ ಮಾಹಿತಿ ತಿಳಿಯೋಣ.
ಯುಲು (Yulu), ಬಜಾಜ್ ಆಟೋ (Bajaj Auto) ನೆರವಿನೊಂದಿಗೆ ಎರಡನೇ ಪೀಳಿಗೆಯ ಈ ಸ್ಕೂಟರ್ ಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ. ನೂತನ ಮಿರಾಕಲ್ ಜಿಆರ್ (Miracle GR) ಹಾಗೂ ಡಿಎಕ್ಸ್ ಜಿಆರ್ (DeX GR) ಸ್ಕೂಟರ್ ಗಳು ಅತ್ಯಾಕರ್ಷಕ ವೈಶಿಷ್ಟ್ಯದೊಂದಿಗೆ ಮಾರುಕಟ್ಟೆಗೆ ಬಂದಿವೆ. OTA ಸಪೋರ್ಟ್ ಕೂಡ ಲಭ್ಯವಿರಲಿದೆ. ಇವುಗಳನ್ನು ವೈಯಕ್ತಿಕ ಹಾಗೂ ವಾಣಿಜ್ಯ ಬಳಕೆಗೆ ಸುಲಭವಾಗಿ ಉಪಯೋಗಿಸಬಹುದು. ಈ ಮೂಲಕ ಯುಲು ತನ್ನ ಆದಾಯವನ್ನು ದ್ವಿಗುಣಗೊಳಿಸಲು ಹೊರಟಿದೆ.

ಹೊಚ್ಚ ಹೊಸ ಮಿರಾಕಲ್ ಜಿಆರ್ ಹಾಗೂ ಡಿಎಕ್ಸ್ ಜಿಆರ್ ಸ್ಕೂಟರ್ ಗಳು ಬದಲಾಯಿಸಬಹುದಾದ ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಸ್ಮಾರ್ಟ್ ಡಾಕ್‌ಲೆಸ್ ಇವಿ ತಂತ್ರಜ್ಞಾನವನ್ನು ಪಡೆದುಕೊಂಡಿವೆ ಎಂದು ಹೇಳಬಹುದು. ಮಿರಾಕಲ್ ಜಿಆರ್ ಗರಿಷ್ಠ 25 km/h ಟಾಪ್ ಸ್ವೀಡ್ ಹೊಂದಿದೆ. ಡಿಎಕ್ಸ್ ಜಿಆರ್ ಸ್ಕೂಟರ್ 15 ಕೆಜಿವರೆಗಿನ ತೂಕದ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಕೂಟರ್ ಗಳಲ್ಲಿ ಸಂಚರಿಸುವಾಗ ಯಾವುದೇ ಹೈಲ್ಮೆಟ್ ಹಾಗೂ ಪರವಾನಗಿಯ ಅಗತ್ಯವಿಲ್ಲ.
ಯುಲು ಸ್ಕೂಟರ್ ಗಳಲ್ಲಿ ಪ್ರಯಾಣಿಸುವುದು ಹೇಗೆ: ಮೊದಲಿಗೆ ಯುಲು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿರಿ. ಬಳಿಕ, ಸ್ಕೂಟರ್ ಬುಕ್ ಮಾಡಿರಿ. ಸಮೀಪ ಯುಲು ಸ್ಟೇಷನ್ ಗೆ ತೆರಳಿ.. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಯುಲು ಸ್ಕೂಟರ್ ಬಳಕೆ ಮಾಡಬಹುದು. ಕೆಲಸ ಮುಗಿದ ಮೇಲೆ ಅಲ್ಲೇ ಹತ್ತಿರದ ನೋಂದಾಯಿತ ಯುಲು ಸ್ಟೇಷನ್ ನಲ್ಲಿ ಸ್ಕೂಟರ್ ಬಿಟ್ಟು ತೆರಳಬಹುದು. ಇದರಿಂದ ಬೆಂಗಳೂರು ಸೇರಿದಂತೆ ದೊಡ್ಡ ಮಹಾನಗರಗಳ ಜನರಿಗೆ ಅನುಕೂಲವಾಗಿದೆ.
ಸದ್ಯ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಯುಗ ಆರಂಭವಾಗುತ್ತಿದ್ದು, ಅದಕ್ಕೆ ತಕ್ಕಂತೆ ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್ ಪ್ರಾರಂಭಿಸಲು ಯುಲು, ಹಾಗೂ ಮ್ಯಾಗ್ನಾ (Magna) ಕಂಪನಿಗಳು ಸೇರಿಕೊಂಡು ಜಂಟಿಯಾಗಿ ಯುಮಾ ಎನರ್ಜಿ (Yuma Energy) ಎಂಬ ಉದ್ಯಮವನ್ನು ಆರಂಭಿಸಿದೆ. 'ಯುಮಾ ಎನರ್ಜಿ' ಬೆಂಗಳೂರು, ಮುಂಬೈ ಮತ್ತು ದೆಹಲಿಯಾದ್ಯಂತ ಸುಮಾರು 100 ಸೆಂಟರ್ ಗಳನ್ನು ಹೊಂದಿದ್ದು, 2024ರ ವೇಳೆಗೆ ಆ ಸಂಖ್ಯೆಯನ್ನು 500ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಅಮಿತ್ ಗುಪ್ತಾ ಅವರು, 'ಮಾರ್ಚ್ ಮೊದಲ ವಾರದಲ್ಲಿ ಈ ದ್ವಿಚಕ್ರ ವಾಹನಗಳು ಸಾರ್ವಜನಿಕರಿಗೆ ಬಳಕೆಗೆ ಲಭ್ಯವಿರುತ್ತವೆ. ನಾವು 2023ರ ಅಂತ್ಯದೊಳಗೆ 1 ಲಕ್ಷ ವಾಹನಗಳನ್ನು ನಮ್ಮ ಗ್ರಾಹರಿಗೆ ನೀಡಲು ಯೋಜಿಸಿದ್ದೇವೆ. ಅವುಗಳಲ್ಲಿ ಸರಿ ಸುಮಾರು 50 ಸಾವಿರದಷ್ಟು ಮಿರಾಕಲ್ ಜಿಆರ್ ಮತ್ತು ಡಿಎಕ್ಸ್ ಜಿಆರ್ ಸ್ಕೂಟರ್ ಇರಲಿವೆ' ಎಂದು ಹೇಳಿದ್ದಾರೆ.
ಯುಲು ಕಂಪನಿ ಹಿನ್ನೆಲೆ: ಇದು ದೊಡ್ಡ ನಗರಗಳಲ್ಲಿ ಖಾಸಗಿ ಹಾಗೂ ವಾಣಿಜ್ಯ ಬಳಕೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಾಡಿಗೆ ಕೊಡುವ ಕಂಪನಿಯಾಗಿದ್ದು, 2017ರಲ್ಲಿ ಅಮಿತ್ ಗುಪ್ತಾ, ಆರ್.ಕೆ.ಮಿಶ್ರಾ, ಹೇಮಂತ್ ಗುಪ್ತಾ ಹಾಗೂ ನವೀನ್ ದಚೂರಿ ಎಂಬುವವರು ಸ್ಥಾಪಿಸಿದರು. ಬೆಂಗಳೂರಿನಲ್ಲಿ ಪ್ರದಾನ ಕಚೇರಿಯನ್ನು ಹೊಂದಿದ್ದು, ದೆಹಲಿ, ಗುರುಗ್ರಾಮ್, ಮುಂಬೈ, ಪುಣೆ ಮತ್ತು ಭುವನೇಶ್ವರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬರೋಬ್ಬರಿ 18,000 ವಾಹನಗಳನ್ನು ಬಾಡಿಗೆಗೆ ಬಿಟ್ಟಿದ್ದು, 2.5 ಲಕ್ಷ ಗ್ರಾಹಕರಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








