Ampere Nexus: ಭಾರತದ ಮೊದಲ ಹೈ-ಪರ್ಫಾಮೆನ್ಸ್ ಫ್ಯಾಮಿಲಿ ಇವಿ ಸ್ಕೂಟರ್ ಬಿಡುಗಡೆ
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ (ಜಿಇಎಂಪಿಎಲ್), ಇಂದು ತನ್ನ ಮೊದಲ ಉನ್ನತ-ಕಾರ್ಯಕ್ಷಮತೆಯ (high-performance)ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಆಂಪಿಯರ್ ನೆಕ್ಸಸ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಇದರ ಆರಂಭಿಕ ಬೆಲೆಯನ್ನು 1,09,900 ಲಕ್ಷ ರೂ.ಗೆ ನಿಗಧಿಪಡಿಸಿದೆ. ಇದು ಸಂಪೂರ್ಣ ಮೇಡ್ ಇನ್ ಇಂಡಿಯಾ ವಾಹನವೆಂದು ಕಂಪನಿ ತಿಳಿಸಿದೆ.
ಆಂಪಿಯರ್ ನೆಕ್ಸಸ್' ಉನ್ನತ ಕಾರ್ಯಕ್ಷಮತೆ ಮತ್ತು ಕುಟುಂಬಕ್ಕೆ ಬೇಕಾಗುವ ವೈಶಿಷ್ಟ್ಯಗಳ ಅನುಭವವನ್ನು ನೀಡುತ್ತವೆ. ಉತ್ತಮ ಸೌಕರ್ಯ, ಶೈಲಿ, ಕಾರ್ಯಕ್ಷಮತೆ, ಸುರಕ್ಷತೆಯನ್ನು ಒದಗಿಸುತ್ತದೆ. ಶೇ30 ಹೆಚ್ಚುವರಿ ಬ್ಯಾಟರಿ ಬಾಳಿಕೆ, ಸುರಕ್ಷಿತ LFP ಬ್ಯಾಟರಿ, ಪವರ್‌ಫುಲ್ ಮಿಡ್-ಮೌಂಟ್ ಡ್ರೈವ್‌ನೊಂದಿಗೆ ತನ್ನ 4 ಕಿಲೋವ್ಯಾಟ್ ಪೀಕ್ ಮೋಟಾರ್ ಸವಾರಿ ಅನುಭವವನ್ನು ಹೆಚ್ಚಿಸುತ್ತದೆ. ಝನ್ಸ್ಕರ್ ಆಕ್ವಾ, ಇಂಡಿಯನ್ ರೆಡ್, ಲೂನಾರ್ ವೈಟ್ ಮತ್ತು ಸ್ಟೀಲ್ ಗ್ರೇ ಎಂಬ ನಾಲ್ಕು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಈ ವೈವಿಧ್ಯಮಯ ಬಣ್ಣದ ಪ್ಯಾಲಿಟ್, ಸವಾರರ ಆದ್ಯತೆಗಳಿಗೆ ಸರಿಹೊಂದುವಂತೆ ಆಕರ್ಷಕವಾದ ಆಯ್ಕೆಗಳನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ವಿಶೇಷತೆಗಳು: ಆಂಪಿಯರ್ ನೆಕ್ಸಸ್ ಸ್ಕೂಟರ್, ಟ್ವಿನ್ ಸಸ್ಪೆಂಷನ್ ಹೊಂದಿರುವ ಮೊದಲ ಹೈಬ್ರಿಡ್ ಸ್ವಿಂಗ್ ಆರ್ಮ್ ಜೊತೆಗೆ ಬರುತ್ತದೆ. ಏರ್-ಕೂಲ್ ಆರ್ಕಿಟೆಕ್ಚರ್, ಲೋಡ್-ಸ್ಟ್ರ್ಯಾಟಿಫೈಡ್ ವಿನ್ಯಾಸ, ಹೆಚ್ಚಿನ ಸಾಮರ್ಥ್ಯದ ಚಾಸಿಸ್(4ಪಟ್ಟು ಹೆಚ್ಚು), ನಟ್‌ಗಳು ಮತ್ತು ಬೋಲ್ಟ್‌ಗಳು ಗೋಚರಿಸಿದ ಮೊದಲ ಪ್ರೀಮಿಯಂ ವಿನ್ಯಾಸ, 7 ಇಂಚಿನ ಸ್ಮಾರ್ಟ್‌ಸೆನ್ಸ್ ತಂತ್ರಜ್ಞಾನದ TFT ಟಚ್‌ಸ್ಕ್ರೀನ್, 3ಗಂಟೆ 22 ನಿಮಿಷಗಳ ಅತಿ ವೇಗದ ಚಾರ್ಜಿಂಗ್ ಅನ್ನು ಒಳಗೊಂಡಿದೆ.
ಡೈಮಂಡ್ ಕಟ್ ಹೆಡ್‌ಲ್ಯಾಂಪ್‌ಗಳು ಮತ್ತು ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್, ದೊಡ್ಡ ಆಸನ, ಐದು ರೈಡಿಂಗ್ ಮೋಡ್‌ಗಳೊಂದಿಗೆ ಗಂಟೆಗೆ 93 ಕಿ.ಮೀ ಗರಿಷ್ಠ ವೇಗ ಮತ್ತು ಸಿಂಗಲ್ ಚಾರ್ಜ್‌ಗೆ ಪ್ರಮಾಣೀಕೃತ 136 ಕಿ.ಮೀ ರೇಂಜ್, ಐದು ರೈಡಿಂಗ್ ಮೋಡ್‌ಗಳು, ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು IP67 ರೇಟಿಂಗ್ ಅನ್ನು ಪಡೆದುಕೊಂಡಿದೆ ಎಂದು ಕಂಪನಿ ಹೇಳಿದೆ.

ಹೊಸ ದಾಖಲೆ: ಹೊಸ ಆಂಪಿಯರ್ ನೆಕ್ಸಸ್ ಇವಿ ಸ್ಕೂಟರ್, ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ 10,000 ಕಿ.ಮೀ ವ್ಯಾಪ್ತಿಯಲ್ಲಿ ಪ್ರವಾಹ ಪರಿಸ್ಥಿತಿಗಳು ಸೇರಿದಂತೆ ಎಲ್ಲ ಭೂಪ್ರದೇಶಗಳು ಮತ್ತು ಹವಾಮಾನಗಳಲ್ಲಿ ಸಲೀಸಾಗಿ ಓಡಿಸಲಾಗಿದೆ. ಹೆಚ್ಚು ಆರಾಮ-ನೀಡುವ ಮಲ್ಟಿಪಲ್ ಸಿಟಿ ಮೋಡ್‌ಗಳು ಮತ್ತು ರಿವರ್ಸ್ ಮೋಡ್ ಜೊತೆಗೆ ಪವರ್ ಮೋಡ್‌ನಲ್ಲಿ ಪ್ರಭಾವಶಾಲಿ ವೇಗವನ್ನು ನೀಡುವ ಮೂಲಕ ದಕ್ಷತೆಯನ್ನು ಹೊಂದಿದೆ. ಜೊತೆಗೆ, ಪ್ರತಿ ಚಾರ್ಜ್‌ಗೆ 136 ಕಿ.ಮೀಗಳ ಪ್ರಮಾಣೀಕೃತ ಶ್ರೇಣಿಯೊಂದಿಗೆ, ಸವಾರರು ಆಗಾಗ್ಗೆ ರೀಚಾರ್ಜ್ ಮಾಡುವ ಬಗ್ಗೆ ಚಿಂತಿಸದೆ ಸುತ್ತಾಡಬಹುದು. ನಾವೀನ್ಯತೆ-ವಿಶ್ವಾಸಾರ್ಹತೆ ಎರಡೂ ಇರುವಂತೆ ರಚಿಸಲಾಗಿದೆ ಎಂದು ಗ್ರೀವ್ಸ್ ಎಲೆಕ್ಟ್ರಿಕ್ ತಿಳಿಸಿದೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದಾಖಲೆಯ ಪ್ರಯಾಣವನ್ನು ಸಾಧಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದೆ. ಒಂದೇ ರೈಡ್‌ನಲ್ಲಿ 115 ನಗರಗಳು ಮತ್ತು ಪಟ್ಟಣಗಳಿಗೆ ಭೇಟಿ ನೀಡಿರುವುದರ ಜೊತೆಗೆ 1,860 ಕೆ.ಜಿ ತೂಕದ ಪಿಕಪ್ ಟ್ರಕ್ ಅನ್ನು ಎಳೆಯುವ ಸಾಮರ್ಥ್ಯವಿರುವ ಮೊದಲ ಇಲೆಕ್ಟ್ರಿಕ್ ಸ್ಕೂಟರ್ ಆಗಿ ಗುರ್ತಿಸಿಕೊಂಡಿದೆ. ಜೊತೆಗೆ ಇದು ಇಬ್ಬರು ಪ್ರಯಾಣಿಕರನ್ನು ಸೇರಿದಂತೆ 140 ಕೆ.ಜಿ ತೂಕ ಹೊತ್ತು 2 ಕಿ.ಮೀ ಕ್ರಮಿಸಿರುವುದಾಗಿ ಕಂಪನಿ ಹೇಳಿಕೊಂಡಿದೆ.

ಗ್ರೀವ್ಸ್ ಇಲೆಕ್ಟ್ರಿಕ್ ಮೊಬಿಲಿಟಿ ಸಿಇಒ ವಿಜಯ ಕುಮಾರ್ ಮಾತನಾಡಿ, "ಹೊಸ ಆಂಪಿಯರ್ ನೆಕ್ಸಸ್‌ನ ಬಿಡುಗಡೆಯು, ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಸುಸ್ಥಿರ ಸಾರಿಗೆಯ ಬಗ್ಗೆ ನಮಗಿರುವ ಬದ್ಧತೆಯ ಮಹತ್ವದ ಸಾಧನೆಯನ್ನು ಸೂಚಿಸುತ್ತದೆ. ಆರಾಮವಾದ ಅರ್ಬನ್, ಹೈ-ಸ್ಪೀಡ್ ವಾಹನಗಳು ಇ-ಮೊಬಿಲಿಟಿಯನ್ನು ಸಾರ್ವತ್ರಿಕಗೊಳಿಸುವ ನಮ್ಮ ಪ್ರಯಾಣದ ಒಂದು ಪ್ರಮುಖ ಘಟ್ಟವನ್ನು ಸೂಚಿಸುತ್ತದೆ. ಜನರ ನಿತ್ಯದ ಆಕಾಂಕ್ಷೆಗಳನ್ನು ನಿಭಾಯಿಸಿಕೊಳ್ಳಲು ಸಿದ್ಧವಾಗಿರುವವರಿಗೆ ಆಂಪಿಯರ್ ನೆಕ್ಸಸ್ ಬದ್ಧವಾಗಿದೆ ಎಂದರು.
ನೀವು ಆಂಪಿಯರ್ ನೆಕ್ಸಸ್ ಅನ್ನು ಆನ್‌ಲೈನ್‌ನಲ್ಲಿ ಎರಡು ರೂಪಾಂತರಗಳಲ್ಲಿ (ನೆಕ್ಸಸ್ ಎಕ್ಸ್ ಮತ್ತು ನೆಕ್ಸಸ್ ಎಸ್.ಟಿ) ಬುಕ್ ಮಾಡಬಹುದು. ರಾಷ್ಟ್ರವ್ಯಾಪಿ 400 ಡೀಲರ್‌ಶಿಪ್‌ಗಳು ಮತ್ತು ಟಚ್‌ಪಾಯಿಂಟ್‌ಗಳಲ್ಲಿ ಟೆಸ್ಟ್ ರೈಡ್‌ಗಳ ಅವಕಾಶವನ್ನು ಕಲ್ಪಿಸಲಾಗಿದೆ. ವಿತರಣೆಯು ಮೇ 2024 ರ ದ್ವಿತೀಯಾರ್ಧದಿಂದ ಭಾರತದಾದ್ಯಂತ ಲಭ್ಯವಿರುತ್ತದೆ ಎಂದು ಕಂಪನಿ ತಿಳಿಸಿದೆ.


Click it and Unblock the Notifications








