Bajaj CNG Bike: ಬಜಾಜ್ ಸಿಎನ್‌ಜಿ ಬೈಕ್ ಬಗ್ಗೆ ಬಿಗ್ ಅಪ್ಡೇಟ್.. ನಿರ್ವಹಣೆಗೆ ಜಾಸ್ತಿ ಹಣ ಅಗತ್ಯವಿಲ್ಲ, ಭಾರೀ ಮೈಲೇಜ್!
ಭಾರತದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಬಜಾಜ್ (Bajaj) ಗುರುತಿಸಿಕೊಂಡಿದ್ದು, ಕಂಪನಿಯ ಮೋಟರ್‌ಸೈಕಲ್ ಹಾಗೂ ಸ್ಕೂಟರ್‌ಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಈಗ, ಬಜಾಜ್ ದೇಶೀಯ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿಎನ್‌ಜಿ (CNG) ಚಾಲಿತ ಬೈಕ್ ಅಭಿವೃದ್ಧಿಪಡಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.
ಬಜಾಜ್ ಆಟೋ (Bajaj Auto) ಸಿಎನ್‌ಜಿ ಚಾಲಿತ ತ್ರಿಚಕ್ರ ವಾಹನ (ಆಟೋ) ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ದಾಖಲಿಸಿದೆ. ಆ ರೀತಿಯ ಪ್ರಗತಿಯನ್ನು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿಯೂ ಮುಂದುವರಿಸಲು ಬಯಸಿದೆ ಎಂದು ವರದಿಯಾಗಿದೆ. ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಸಿಎನ್‌ಜಿ ಬೈಕ್‌ಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು ಕಡಿಮೆಗೊಳಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ತಿಳಿದುಬಂದಿದೆ.

ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ತಯಾರಿಸುತ್ತಿದ್ದು, ಮೊದಲ ಬೈಕ್ ಮುಂದಿನ ಹಣಕಾಸು ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಬಜಾಜ್ ಆಟೋ ಕಾರ್ಯನಿರ್ವಾಹಕ ನಿರ್ದೇಶಕ (Bajaj Auto Executive Director) ರಾಕೇಶ್ ಶರ್ಮಾ (Rakesh Sharma) ಅವರು ಬುಧವಾರ ಹೇಳಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದು, ಭಾರತೀಯ ವಾಹನ ಸವಾರರಿಗೆ ಸಿಎನ್‌ಜಿ ಮೋಟಾರ್‌ಸೈಕಲ್ ಉತ್ತಮ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.
ತ್ರಿಚಕ್ರ ವಾಹನ ಮಾರಾಟದಲ್ಲಿ ನಾವು ದೊಡ್ಡಮಟ್ಟದಲ್ಲಿ ಬೆಳವಣಿಗೆಯನ್ನು ಕಂಡಿದ್ದು, ಅದನ್ನು ದ್ವಿಚಕ್ರ ವಾಹನಗಳಿಗೂ ವಿಸ್ತರಿಸಲು ಬಯಸಿದ್ದೇವೆ ಎಂದು ರಾಕೇಶ್ ಶರ್ಮಾ ಹೇಳಿದ್ದಾರೆ. ಇದು ಕೇವಲ 1 ಸಿಎನ್‌ಜಿ ಬೈಕ್ ಆಗಿರುವುದಿಲ್ಲ. ಪ್ರತಿಯೊಂದು ಮೋಟಾರ್‌ಸೈಕಲ್ ವಿಭಾಗಕ್ಕೂ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ. ನೂತನ ಸಿಎನ್‌ಜಿ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆಗೆ ಇದು 2025ರ ಆರ್ಥಿಕ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳು, ಬಜಾಜ್ ಸಿಎನ್‌ಜಿ ಮೋಟಾರ್‌ಸೈಕಲ್‌ಗೆ ಪ್ಲಾಟಿನಾ (Platina) ಹೆಸರನ್ನು ಇಡಬಹುದು ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಬ್ರೂಜರ್ ಇ101 (Bruzer E101) ಕೋಡ್ ನೇವ್ ಹೊಂದಿರುವ ಸಿಎನ್‌ಜಿ/ ಪೆಟ್ರೋಲ್ ಬೈಕ್ ಅಂತಿಮ ಹಂತದಲ್ಲಿ ವಿನ್ಯಾಸಗೊಳ್ಳುತ್ತಿದೆ ಎಂದು ಹೇಳಿತ್ತು. ಮಹಾರಾಷ್ಟದ ಔರಂಗಾಬಾದ್, ಉತ್ತರಖಂಡದ ಪಂತ್ ನಗರ ಕೈಗಾರಿಕೆಯಲ್ಲಿ ನೂತನ ಬೈಕ್ ಉತ್ಪಾದನೆ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿತ್ತು.
ಬಜಾಜ್ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಕೆ ಮಾಡಿದರೆ, ಸಿಎನ್‌ಜಿ ಬೈಕ್ ಗಳು ಕೊಂಚ ಹೆಚ್ಚಿನ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕೆ ಕಾರಣವೆಂದರೆ, ತಯಾರಿಕಾ ವೆಚ್ಚ ಹೆಚ್ಚಾಗಿರುವುದು ಎನ್ನಲಾಗಿದೆ. ಮುಂಬರಲಿರುವ ಸಿಎನ್‌ಜಿ ಮೋಟಾರ್‌ಸೈಕಲ್ ಫ್ಯುಯೆಲ್ (ಇಂಧನ) ಟ್ಯಾಂಕ್ ವಿನ್ಯಾಸ ಕೊಂಚ ಭಿನ್ನವಿರಲಿದೆ. ಆದರೆ, ಸಿಎನ್‌ಜಿ ಬೈಕ್ ನಿರ್ವಹಣಾ ವೆಚ್ಚ ಕಡಿಮೆಯಿದ್ದು, ಹೆಚ್ಚಿನ ಮೈಲೇಜ್ ನೀಡುವುದರಿಂದ ಬೆಲೆ ಏರಿಕೆ ಅಷ್ಟಾಗಿ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯ 125 ಸಿಸಿ - 200 ಸಿಸಿ ವಿಭಾಗದಲ್ಲಿ ಬಜಾಜ್ ಶೇಕಡ 30% ಪಾಲನ್ನು ಹೊಂದಿದ್ದು, ಇದು ದೊಡ್ಡ ಆದಾಯದ ಮೂಲವಾಗಿದೆ. ಸಿಎನ್‌ಜಿ ಬೈಕ್ ಬಿಡುಗಡೆಗೊಂಡರೆ ಕಂಪನಿ ಈ ವಿಭಾಗದಲ್ಲಿ ಮತ್ತಷ್ಟು ಬಲಗೊಳ್ಳಲಿದೆ. ಜೊತೆಗೆ ದೇಶದಲ್ಲಿ ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಸಿಎನ್‌ಜಿ ಮೋಟಾರ್‌ಸೈಕಲ್‌ಗಳಿಂದ ಭಾರೀ ಅನುಕೂಲವಾಗಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








