Bajaj: ವಿಶ್ವದ ಮೊದಲ ಬಜಾಜ್ CNG ಬೈಕ್ ವಿತರಣೆ... ಕುಟುಂಬಕ್ಕೆ ಎಲ್ಲಿಲ್ಲದ ಸಂತೋಷ!
ದೇಶದ ಜನಪ್ರಿಯ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ, ಹೊಸದಾಗಿ ಬಿಡುಗಡೆ ಮಾಡಿದ ತನ್ನ ಫ್ರೀಡಂ 125 CNG ಮೋಟಾರ್‌ಸೈಕಲ್ ಡೆಲಿವರಿಯನ್ನು ಪ್ರಾರಂಭಿಸಿದೆ. ಕೇವಲ ಒಂದು ವಾರದೊಳಗೆ, ಬಜಾಜ್ ಆಟೋದಲ್ಲಿನ ಬಲವಾದ ಗ್ರಾಹಕ ಬೇಡಿಕೆಯು ಅಚ್ಚರಿಗೊಳಿಸಿದೆ. ಬಜಾಜ್ ಫ್ರೀಡಂ 125 ಬೈಕ್ (Bajaj Freedom 125 CNG) ಕುರಿತು 30,000ಕ್ಕೂ ಹೆಚ್ಚು ಮಂದಿ ವಿಚಾರಣೆ ನಡೆಸಿರುವುದು ತಿಳಿದುಬಂದಿದೆ. ಇತರ 125 ಸಿಸಿ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ಭರ್ಜರಿ ಮೈಲೇಜ್, ಹೊಸ ಡಿಸೈನ್, ಕಡಿಮೆ ನಿರ್ವಣೆಯು ಗ್ರಾಹಕರ ಬೇಡಿಕೆಯನ್ನು ದುಪ್ಪಟ್ಟುಗೊಳಿಸಿದೆ ಎಂದು ಬಜಾಜ್ ತಿಳಿಸಿದೆ.
ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಮೊದಲ ಡೆಲಿವರಿಯು ಪುಣೆಯಲ್ಲಿ ನಡೆಯಿತು. ಪ್ರವೀಣ್ ಥೋರಟ್ ಎಂಬವರಿಗೆ ವಿತರಿಸಲಾಯಿತು. ಡೆಲಿವರಿ ಪಡೆಯಲು ಕುಟುಂಬ ಸಮೇತ ಆಗಮಿಸಿದ್ದ ಪ್ರವೀಣ್ ಥೋರಟ್ ಅವರಿಗೆ ಡೀಲರ್ ಸಿಬ್ಬಂದಿ ಶುಭಾಷಯ ತಿಳಿಸಿ ಕೀಯನ್ನು ಹಸ್ತಾಂತರಿಸಿದರು. ವಿಶ್ವದ ಮೊದಲ ಸಿಎನ್‌ಜಿ ಬೈಕ್ ಧಕ್ಕಿಸಿಕೊಂಡಿದ್ದಕ್ಕೆ ಕುಟುಂಬ ಎಲ್ಲಿಲ್ಲದ ಸಂತೋಷ ವ್ಯಕ್ತಪಡಿಸಿತು.

"ಬಜಾಜ್ ಫ್ರೀಡಂ 125 ಬಿಡುಗಡೆಯು ಅಭೂತಪೂರ್ವ ಗ್ರಾಹಕರ ಆಸಕ್ತಿಯನ್ನು ಹುಟ್ಟುಹಾಕಿದೆ, ಇದು ಸಾಮಾನ್ಯ ಪೆಟ್ರೋಲ್ ಬೈಕ್‌ಗಳಿಗೆ ಹೋಲಿಸಿದರೆ ಗಮನಾರ್ಹ ನಿರ್ವಹಣಾ ವೆಚ್ಚ ಉಳಿತಾಯ ಮಾಡುತ್ತದೆ. ವಿತರಣೆಯನ್ನು ವಿಸ್ತರಿಸುವ ಮೂಲಕ ನಾವು ಈ ಬೇಡಿಕೆಯನ್ನು ಪೂರೈಸಲು ಶ್ರಮಿಸುತ್ತಿದ್ದೇವೆ. ನಮ್ಮ ವಿಸ್ತೃತ ಡೀಲರ್ ನೆಟ್‌ವರ್ಕ್‌ನಾದ್ಯಂತ ಶೀಘ್ರವಾಗಿ ಬುಕಿಂಗ್ ಅನ್ನು ದೇಶಾದ್ಯಂತ ತೆರೆಯಲಾಗುತ್ತದೆ" ಎಂದು ಬಜಾಜ್ ಆಟೋ ಲಿಮಿಟೆಡ್‌ನ ಅಧ್ಯಕ್ಷ ಸಾರಂಗ್ ಕಾನಡೆ ಹೇಳಿದರು.
ಬೈಕ್ ವಿಶೇಷತೆಗಳು: ಜುಲೈ 5, 2024 ರಂದು ಬಿಡುಗಡೆಯಾದ ಬಜಾಜ್ ಫ್ರೀಡಂ 125, ಇದೇ ರೀತಿಯ ಪೆಟ್ರೋಲ್ ಮೋಟಾರ್‌ಸೈಕಲ್‌ಗಳಿಗೆ ಹೋಲಿಸಿದರೆ ಗ್ರಾಹಕರಿಗೆ ಶೇ50 ರಷ್ಟು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಶೇ26.7 ರಷ್ಟು ಕಾರ್ಬನ್ ಡೈಆಕ್ಸೈಡ್ (CO2) ಅನ್ನು ಕಡಿಮೆ ಮಾಡಿ ಪರಿಸರ ಹಾನಿಯನ್ನು ತಗ್ಗಿಸುತ್ತದೆ.

ಇದರ CNG ಟ್ಯಾಂಕ್ ಅನ್ನು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಟ್ರೆಲ್ಲಿಸ್ ಚೌಕಟ್ಟಿನೊಳಗೆ ಇರಿಸಲ್ಪಟ್ಟಿದೆ. 2 ಕೆ.ಜಿ ಸಿಎನ್‌ಜಿಯಲ್ಲಿ ಫ್ರೀಡಮ್ ಬೈಕ್ 200 ಕಿ.ಮೀ ಮೈಲೇಜ್ ನೀಡುತ್ತದೆ. ಇದು 2-ಲೀಟರ್ ಪೆಟ್ರೋಲ್ ಟ್ಯಾಂಕ್ ಕೂಡ ಹೊಂದಿದ್ದು, 2 ಕೆ.ಜಿ ಸಿಎನ್‌ಜಿ ಹಾಗೂ 2-ಲೀಟರ್ ಪೆಟ್ರೋಲ್‌ನಲ್ಲಿ ಒಟ್ಟು 330 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಫ್ರೀಡಮ್ 125 ಬೈಕ್ ಮೋನೊ-ಲಿಂಕ್ಡ್ ಟೈಪ್ ಸಸ್ಪೆನ್ಷನ್, ಉದ್ದವಾದ ಕ್ವಿಲ್ಟೆಡ್ ಸೀಟ್, ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಡಿಜಿಟಲ್ ಸ್ಪೀಡೋಮೀಟರ್ ಮತ್ತು ಬ್ಲೂಟೂತ್ ಸಂಪರ್ಕದೊಂದಿಗೆ ಸವಾರ ಸೌಕರ್ಯ ಮತ್ತು ಅನುಕೂಲಕ್ಕೆ ಆದ್ಯತೆ ನೀಡುತ್ತದೆ. ನಾವೀನ್ಯತೆ, ಸುರಕ್ಷತೆ ಮತ್ತು ಸೌಕರ್ಯಗಳ ಈ ಸಂಯೋಜನೆಯು ಬಯಸುವ ಪರಿಸರ ಪ್ರಜ್ಞೆಯ ಸವಾರರಿಗೆ ಫ್ರೀಡಮ್ 125 ಉತ್ತಮ ಆಯ್ಕೆಯಾಗಿದೆ.

ಈ ಹೊಸ ಬಜಾಜ್ ಫ್ರೀಡಮ್ ಸಿಎನ್‌ಜಿ ಬೈಕಿನ ಬೆಲೆಯು ರೂ.95,000 ದಿಂದ ಆರಂಭವಾಗಿ ಟಾಪ್ ಎಂಡ್ ರೂಪಾಂತರದ ಬೆಲೆಯು ರೂ.1.10 ಲಕ್ಷ(ಎಕ್ಸ್ ಶೋರೂಂ ) ದವರೆಗೆ ಇದೆ. ಹೊಸ ಬಜಾಜ್ ಫ್ರೀಡಂ 125 ಸಿಎನ್‌ಜಿ ಡೆಲಿವರಿಗಳು ಈಗ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾರಂಭವಾಗಿದ್ದು, ಉಳಿದ ರಾಜ್ಯಗಳಲ್ಲಿ ಹಂತ ಹಂತವಾಗಿ ಪ್ರಾರಂಭವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








