ಈ ದಿನ ಹೊಸ BMW ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ.. ಕಾರನ್ನು ಮೀರಿಸುವ ವೈಶಿಷ್ಟ್ಯಗಳು.. ಬೆಲೆ ಎಷ್ಟಿರಲಿದೆ?
ಜರ್ಮನಿ ಮೂಲದ ಬಿಎಂಡಬ್ಲ್ಯೂ (BMW) ಐಷಾರಾಮಿ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಅದರ ಅಂಗಸಂಸ್ಥೆಯಾಗಿರುವ ಬಿಎಂಡಬ್ಲ್ಯೂ ಮೊಟೊರಾಡ್ (BMW Motorrad), ಭಾರತದ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ಹಲವು ಪ್ರೀಮಿಯಂ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ, ಕಂಪನಿಯು ಹೊಚ್ಚ ಹೊಸ 'ಸಿಇ 02' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅಕ್ಟೋಬರ್ 1ರಂದು ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಈಗಾಗಲೇ, ಹೊಸ ಬಿಎಂಡಬ್ಲ್ಯೂ ಸಿಇ 02 (BMW CE 02) ಎಲೆಕ್ಟ್ರಿಕ್ ಸ್ಕೂಟರ್ ಬುಕ್ಕಿಂಗ್ ಶುರುವಾಗಿದೆ. ಇದು ರೂ.4 ರಿಂದ ರೂ.6 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಕೂಟರ್‌ನ್ನು ತಮಿಳುನಾಡಿನ ಟಿವಿಎಸ್ ಮೋಟಾರ್ (TVS Motor) ಉತ್ಪಾದನಾ ಘಟಕದಲ್ಲಿ ಸಿದ್ಧಪಡಿಸಲಾಗುತ್ತಿದೆ. ವಿಶೇಷವಾಗಿ ದೇಶೀಯ ಮಾರುಕಟ್ಟೆಯಲ್ಲಿ ಇವೆರೆಡು ಕಂಪನಿಗಳು ವ್ಯಾಪಾರ ಪಾಲುದಾರಿಕೆ ಹೊಂದಿವೆ.

ನೂತನ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ 3.92 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 108 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರಲ್ಲಿರುವ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ 15 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 55 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಸ್ಕೂಟರ್ ಫ್ಲೋ ಮತ್ತು ಸರ್ಫ್ ಎಂಬ ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಬರೋಬ್ಬರಿ 142 ಕೆಜಿ ತೂಕವಿದ್ದು, ಸೀಟ್ ಹೈಟ್ (ಆಸನ ಆಯ್ಕೆ) 745 ಎಂಎಂ ಇದೆ. 95 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 3 ಸೆಕೆಂಡುಗಳಲ್ಲಿ 0 ರಿಂದ 50 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.
ಹೊಸ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು (ಡೇಟೈಮ್ ರನ್ನಿಂಗ್ ಲೈಟ್‌ಗಳು), ಸೈಡ್ ಇಂಡಿಕೇಟರ್‌ಗಳು, 3.5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಮತ್ತು ಯುಎಸ್‌ಬಿ-ಸಿ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. 1.5 ಕೆಡಬ್ಲ್ಯೂ ಚಾರ್ಜರ್ ಬಳಕೆಯಲ್ಲಿ ಈ ಸ್ಕೂಟರ್ ಬ್ಯಾಟರಿ ಪ್ಯಾಕ್, 3.5 ಗಂಟೆಯಲ್ಲಿ 0 ರಿಂದ 100% ಚಾರ್ಜ್ ಆಗುತ್ತದೆ.
ಈ ಐಷಾರಾಮಿ ಎಲೆಕ್ಟ್ರಿಕ್ ಸ್ಕೂಟರ್, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಪಡೆದಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಟ್ಟಿಗೆ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಎಎಸ್‌ಸಿ (ಆಟೋಮೆಟಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು ಆರ್‌ಎಸ್‌ಸಿ (ರೆಕ್ಯುಪರೇಟಿವ್ ಸ್ಟೆಬಿಲಿಟಿ ಕಂಟ್ರೋಲ್) ಅನ್ನು ಹೊಂದಿದೆ.
ನೂತನ ಬಿಎಂಡಬ್ಲ್ಯೂ ಸಿಇ 02 ಎಲೆಕ್ಟ್ರಿಕ್ ಸ್ಕೂಟರ್ ಮುಂಭಾಗ (ಫ್ರಂಟ್) 2.50x14 ಮತ್ತು ಹಿಂಭಾಗ (ರೇರ್) 3.5x14 ಇಂಚಿನ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಹಾಗೆಯೇ 120/80-14 ಹಾಗೂ 150/70-14 ಅಳತೆಯ ಟೈಯರ್‌ಗಳನ್ನು ಪಡೆದಿದೆ. ಒಟ್ಟಾರೆಯಾಗಿ, ಕಾರಿನಂತಹ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಹೊಂದಿದ್ದು, ಬಿಡುಗಡೆಯಾದ ಮೇಲೆ ಗ್ರಾಹಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications