ಅತಿಕಡಿಮೆ ಬೆಲೆ: ನೂತನ ಹೋಂಡಾ ಆಕ್ಟಿವಾ ಇ-ಸ್ಕೂಟರ್ ಬಗ್ಗೆ ಮತ್ತೊಂದು ಟೀಸರ್.. ಈ ವಿಷಯ ಕನ್ಫರ್ಮ್!
ಭಾರತದ ಮಾರುಕಟ್ಟೆಯಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುವ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಹೋಂಡಾ ಆಕ್ಟಿವಾ (Honda Activa) ಪಾತ್ರವಾಗಿದೆ. ಪುರಷರು ಹಾಗೂ ಮಹಿಳೆಯರಿಗೆ ಇಷ್ಟದ ಸ್ಕೂಟರ್ ಆಗಿದ್ದು, ದಿನಬಳಕೆಗಾಗಿ ಹಲವರು ಆಕ್ಟಿವಾ ಸ್ಕೂಟರ್‌ನ್ನು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ಕಾರಣಕ್ಕೆ ದಶಕಗಳಿಂದ ನಂಬರ್ 1 ಸ್ಥಾನದಲ್ಲಿ 'ಆಕ್ಟಿವಾ' ಮುಂದುವರಿದಿದೆ. ಇದೇ ಸ್ಕೂಟರ್‌ನ್ನು ಎಲೆಕ್ಟ್ರಿಕ್ ಅವತಾರದಲ್ಲಿ ಮಾರಾಟಕ್ಕೆ ತರಲು ಕಂಪನಿಯು ಸಿದ್ಧತೆ ಮಾಡಿಕೊಳ್ಳಲಿದ್ದು, ಆಕ್ಟಿವಾ ಇವಿ ಎಂದು ಹೇಳಲಾಗಿರುವ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಅನಾವರಣಗೊಳಿಸಲು ನವೆಂಬರ್ 27 ರಂದು ದಿನಾಂಕವನ್ನು ನಿಗದಿಪಡಿಸಿದೆ.
ಹೋಂಡಾ ಕಂಪನಿಯು ಆಕ್ಟಿವಾ ಇವಿ ಕುರಿತಂತೆ ಗ್ರಾಹಕರ ಕುತೂಹಲ ಹೆಚ್ಚಿಸಲು ಸಾಮಾಜಿಕ ಜಾಲತಾಣದಲ್ಲಿ ಟೀಸರ್‌ಗಳನ್ನು ಬಿಡುಗಡೆಗೊಳಿಸುತ್ತಿದೆ. ಗುರುವಾರ ಮತ್ತೊಂದು ಹೊಸ ಟೀಸರ್ ವಿಡಿಯೋ ಹಂಚಿಕೊಂಡಿದೆ. ಸುಮಾರು 15 ಸೆಕೆಂಡುಗಳ ಪುಟ್ಟ ವಿಡಿಯೋ ಇದಾಗಿದ್ದು, ನೂತನ ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗಪಡಿಸಲಾಗಿದೆ.

ಹೊಸ ಹೋಂಡಾ ಆಕ್ಟಿವಾ ಇವಿ (Honda Activa EV), ಬದಲಾಯಿಸಬಹುದಾದ ಬ್ಯಾಟರಿಗಳನ್ನು (Removable Batteries) ಹೊಂದಿದ್ದು, ಸೀಟ್ ಕೆಳಭಾಗದಲ್ಲಿ 2 ಬ್ಯಾಟರಿ ಪ್ಯಾಕ್ ಇರುವುದನ್ನು ಕಾಣಬಹುದು. ಹಾಗೆಯೇ ಚಾರ್ಜಿಂಗ್ ಸ್ಟೇಷನ್‌ನಿಂದ ವ್ಯಕ್ತಿಯೊಬ್ಬ ಭರ್ತಿ ಚಾರ್ಜ್ ಆಗಿರುವ ಬ್ಯಾಟರಿಯೊಂದನ್ನು ಹೊರ ತೆಗೆದುಕೊಂಡು ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗೆ ಹಾಕುತ್ತಿರುವುದನ್ನು ಕೂಡ ಟೀಸರ್ ವಿಡಿಯೋದಲ್ಲಿ ತೋರಿಸಲಾಗಿದೆ.
ಈ ಹಿಂದೆ ಬಿಡುಗಡೆಗೊಳಿಸಲಾಗಿದ್ದ ಟೀಸರ್‌ನಲ್ಲಿ ಹೊಸ ಹೋಂಡಾ ಆಕ್ಟಿವಾ ಇವಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದುಕೊಂಡಿದ್ದನ್ನು ನೋಡಬಹುದಾಗಿತ್ತು. ಇದು ಮಾತ್ರವಲ್ಲದೆ, ಸ್ಟ್ಯಾಂಡರ್ಡ್ & ಸ್ಪೋರ್ಟ್ ರೈಡಿಂಗ್ ಮೋಡ್‌ಗಳನ್ನು ಹೊಂದಿರುವುದನ್ನು ಸಹ ಕಾಣಬಹುದಾಗಿತ್ತು. ಜೊತೆಗೆ ಸ್ಟ್ಯಾಂಡರ್ಡ್ ಮೋಡ್‌ನಲ್ಲಿ ಸಂಪೂರ್ಣ ಚಾರ್ಜ್‌ನಲ್ಲಿ 104 ಕಿಲೋಮೀಟರ್ ಓಡುತ್ತದೆ ಎಂಬುದನ್ನು ಟೀಸರ್‌ನಲ್ಲಿ ತೋರಿಸಲಾಗಿತ್ತು.

ನೂತನ ಹೋಂಡಾ ಆಕ್ಟಿವಾ ಇ-ಸ್ಕೂಟರ್ ಶಕ್ತಿಯುತವಾಗಿರುವ ಎಲೆಕ್ಟ್ರಿಕ್ ಮೋಟಾರ್ ಪಡೆದಿರುವ ಸಾಧ್ಯತೆಯಿದ್ದು, 6 ಕೆಡಬ್ಲ್ಯೂ ಅಶ್ವ ಶಕ್ತಿ (ಹಾರ್ಸ್ ಪವರ್) ಉತ್ಪಾದಿಸಲಿದೆ ಎಂದು ತಿಳಿದುಬಂದಿದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ. ಪರ್ಲ್ ಜುಬಿಲಿ ವೈಟ್ & ಪ್ರೀಮಿಯಂ ಸಿಲ್ವರ್ ಮೆಟಾಲಿಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಬಹುದು ಎಂದು ಹೇಳಲಾಗಿದೆ.
ಈ ಆಕ್ಟಿವಾ ಇವಿ ಸವಾರರ ಸುರಕ್ಷತೆಗಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಹೊಂದಿರಲಿದ್ದು, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿರುವ ನಿರೀಕ್ಷೆಯಿದೆ. 2025 ರಲ್ಲಿ ನೂತನ ಆಕ್ಟಿವಾ ಇವಿ ಮಾರಾಟಕ್ಕೆ ಬರಲಿದ್ದು, ರೂ.1 ಲಕ್ಷದಿಂದ ರೂ.1.20 ಲಕ್ಷ (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುವ ಸಾಧ್ಯತೆಯೂ ಹೆಚ್ಚಿದೆ.

ಇನ್ನು, ಹೊಚ್ಚ ಹೊಸ ಹೋಂಡಾ ಆಕ್ಟಿವಾ ಇ-ಸ್ಕೂಟರ್ ಮೇಲೆ ಗ್ರಾಹಕರು ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿರುವುದು ಟೀಸರ್ ವಿಡಿಯೋದಿಂದ ಬಹಿರಂಗಗೊಳ್ಳುತ್ತಿದೆ. ನೂತನ ಆಕ್ಟಿವಾ ಇವಿ ಮಾರಾಟಕ್ಕೆ ಬಂದ ಮೇಲೆ ದೇಶೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಒಂದು ರೀತಿಯ ಅಲೆ ಸೃಷ್ಟಿಯಾಗುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications