ಆಕ್ಟಿವಾ ಸ್ಕೂಟರ್.. ಶೈನ್ ಬೈಕ್‌ಗಾಗಿ ಮುಗಿಬಿದ್ದ ಗ್ರಾಹಕರು.. ಒಂದೇ ತಿಂಗಳಲ್ಲಿ 4.72 ಲಕ್ಷ ಟೂ ವೀಲರ್‌ಗಳು ಮಾರಾಟ!
ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ (Honda Motorcycle & Scooter India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ಕಂಪನಿ ಮಾರಾಟಗೊಳಿಸುವ ಸ್ಕೂಟರ್ ಹಾಗೂ ಬೈಕ್‌ಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಕಂಪನಿಯು ನವೆಂಬರ್ ತಿಂಗಳ ಮಾರಾಟದ ಅಂಕಿಅಂಶದ ವರದಿಯನ್ನು ಪ್ರಕಟಿಸಿದ್ದು, ಉತ್ತಮವಾದ ಪ್ರಗತಿ ಸಾಧಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಕಳೆದ ತಿಂಗಳು (ನವೆಂಬರ್ - 2024) ಹೋಂಡಾ ಕಂಪನಿಯು ಒಟ್ಟು 4,72,476 ಯುನಿಟ್ (ದೇಶೀಯ ಮಾರಾಟ - ವಿದೇಶಕ್ಕೆ ರಫ್ತು) ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸಿದೆ. 2023ರ ಇದೇ ಅವಧಿಯಲ್ಲಿ ಮಾರಾಟ ಮಾಡಿದ 4,47,849 ಯುನಿಟ್‌ಗಳಿಗೆ ಹೋಲಿಸಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 5.56% ಬೆಳವಣಿಗೆಯಾಗಿದೆ.

ಆದರೆ, ತಿಂಗಳಿಂದ ತಿಂಗಳ (MoM) ಮಾರಾಟ ಮಾತ್ರ ಶೇಕಡ ಸರಿ ಸುಮಾರು 20.91% ಕುಸಿತ ಕಂಡಿದೆ. ದಸರಾ ಹಾಗೂ ದೀಪಾವಳಿ ಹಬ್ಬದ ಹಿನ್ನೆಲೆ, ಅಕ್ಟೋಬರ್‌ನಲ್ಲಿ 5,97,711 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ಹೋಂಡಾ ಮೋಟಾರ್‌ಸೈಕಲ್ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಂಡಿತ್ತು.
ಆಕ್ಟಿವಾ ಸ್ಕೂಟರ್ ಹಾಗೂ ಶೈನ್ ಮೋಟಾರ್‌ಸೈಕಲ್ ನೆರವಿನಿಂದ ದೇಶೀಯ ದ್ವಿಚಕ್ರ ವಾಹನಗಳ ಮಾರಾಟ ಸ್ಪರ್ಧಾತ್ಮಕವಾಗಿ ಹೆಚ್ಚಳಗೊಂಡಿದೆ. ಈ ನವೆಂಬರ್‌ನಲ್ಲಿ 4,32,888 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2023ರ ನವೆಂಬರ್‌ನಲ್ಲಿ ಮಾರಲ್ಪಟ್ಟ 4,20,677 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ (YoY) ಶೇಕಡ 2.90% ಪ್ರಗತಿಯಾಗಿದೆ.

ಹೋಂಡಾ ಕಂಪನಿಯು ವಿದೇಶಕ್ಕೂ ದೊಡ್ಡ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಿದೆ. ಹೋದ ತಿಂಗಳು (ನವೆಂಬರ್ - 2024) 39,861 ಯುನಿಟ್‌ಗಳನ್ನು ಹಲವು ದೇಶಗಳಿಗೆ ರವಾನಿಸಿದೆ. 2023ರ ಇದೇ ಅವಧಿಯಲ್ಲಿ 27,172 ಯುನಿಟ್ ದ್ವಿಚಕ್ರ ವಾಹನಗಳನ್ನು ರಫ್ತು ಮಾಡಲಾಗಿತ್ತು. ಅದಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ (YoY) ಶೇಕಡ 46.70% ಅಭಿವೃದ್ಧಿ ಸಾಧಿಸಲಾಗಿದೆ.
ಹೋಂಡಾ ಕಂಪನಿ ಈ ಪರಿಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಕಾರಣವಾಗಿರುವ ಆಕ್ಟಿವಾ (Activa) ಸ್ಕೂಟರ್ ಬಗ್ಗೆ ಹೇಳುವುದಾದರೆ, ಇದು ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಆಕ್ಟಿವಾ 125 ಸ್ಕೂಟರ್ ರೂ.84,085 ರಿಂದ ರೂ.92,257 ಬೆಲೆಯನ್ನು ಹೊಂದಿದೆ. ಆಕ್ಟಿವಾ 6ಜಿ ಸ್ಕೂಟರ್ ರೂ.79,624 ರಿಂದ ರೂ.84,624 (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಹೋಂಡಾ ಶೈನ್ (Honda Shine) ಮೋಟಾರ್‌ಸೈಕಲ್ ಸಹ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗಿದೆ. ಇದು ಎರಡು ವಿಧದಲ್ಲಿ ಲಭ್ಯವಾಗುತ್ತದೆ. ಶೈನ್ 125 ಬೈಕ್ ರೂ.82,551 ರಿಂದ ರೂ.86,551 ದರವನ್ನು ಪಡೆದಿದೆ. ಮತ್ತೊಂದು ಶೈನ್ 100 ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದ್ದು, ರೂ.66,600 ಎಕ್ಸ್ ಶೋರೂಂ ದರವನ್ನು ಒಳಗೊಂಡಿದೆ.
ಒಟ್ಟಾರೆ, ಕಳೆದ ನವೆಂಬರ್‌ನಲ್ಲಿ ಯಾವುದೇ ಹಬ್ಬಗಳು ಇಲ್ಲದಿದ್ದರೂ ಆಕ್ಟಿವಾ ಸ್ಕೂಟರ್ ಹಾಗೂ ಶೈನ್ ಮೋಟಾರ್‌ಸೈಕಲ್ ನೆರವಿನಿಂದ ಹೋಂಡಾ ಕಂಪನಿ ಉತ್ತಮ ಸಂಖ್ಯೆಯಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ಡಿಸೆಂಬರ್‌ನಲ್ಲಿಯೂ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ. ಇದರಿಂದ ಯಾವ ಪ್ರಮಾಣದಲ್ಲಿ ಯಶಸ್ಸು ಸಾಧಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications