Hero: ಭಾರತದ ಹೀರೋ ಮತ್ತೊಂದು ವಿದೇಶಿ ಮಾರುಕಟ್ಟೆಗೆ ಲಗ್ಗೆ.. ಇದೇ ನಮ್ಮ ಮಣ್ಣಿನ ತಾಕತ್ತು!
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಹೀರೋ ಮೋಟೋಕಾರ್ಪ್ (Hero MotoCorp) ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ವಿವಿಧ ಅತ್ಯಾಕರ್ಷಕ ಮೋಟಾರ್‌ಸೈಕಲ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ ಹೀರೋ ಕಂಪನಿಯು ಟೆರ್ರಾಫಿರ್ಮಾ ಮೋಟಾರ್ಸ್ ಕಾರ್ಪೊರೇಷನ್ (TMC) ಸಹಯೋಗದಲ್ಲಿ ಫಿಲಿಪೈನ್ (Philippine) ಮಾರುಕಟ್ಟೆ ಪ್ರವೇಶಿಸಿದೆ. ಈ ಮೂಲಕ ಜಾಗತಿಕ ವಿಸ್ತರಣೆ ಕಾರ್ಯತಂತ್ರದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಫಿಲಿಪೈನ್ಸ್‌ನ ಜನಪ್ರಿಯ ಆಟೋಮೊಬೈಲ್ ಉದ್ಯಮ ಸಂಸ್ಥೆಯಾಗಿ 'ಟೆರ್ರಾಫಿರ್ಮಾ ಮೋಟಾರ್ಸ್ ಕಾರ್ಪೊರೇಷನ್' ಹೆಸರುವಾಸಿಯಾಗಿದೆ. ಪಾಲುದಾರಿಕೆಯ ಭಾಗವಾಗಿ ಹೀರೋದ ದ್ವಿಚಕ್ರ ವಾಹನ (Two Wheeler)ಗಳನ್ನು ಸ್ಥಳೀಯವಾಗಿ ಜೋಡಿಸುವುದು (Assembling) ಮತ್ತು ಗ್ರಾಹಕರಿಗೆ ವಿತರಣೆ (Distributing) ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಈ ಸಂಬಂಧ 2022ರ ಅಕ್ಟೋಬರ್‌ನಲ್ಲಿ ಟೆರ್ರಾಫಿರ್ಮಾ ಹಾಗೂ ಹೀರೋ ಒಡಂಬಡಿಕೆ ಮಾಡಿಕೊಂಡಿದ್ದವು. ಈಗ ಕಾರ್ಯರೂಪಕ್ಕೆ ಬಂದಿದೆ.

ಫಿಲಿಪೈನ್ಸ್‌ನ ಲಗುನಾದಲ್ಲಿ ಟೆರ್ರಾಫಿರ್ಮಾ ಅತ್ಯಾಧುನಿಕ ಜೋಡಣಾ ಘಟಕ (Assembly Unit) ಮತ್ತು ಬಿಡಿಭಾಗಗಳ ಸಂಗ್ರಹಣಾ ಘಟಕ (Parts Warehouse Unit)ವನ್ನು ಹೊಂದಿದೆ. ಇದು 6,000 ಚದರ ಮೀಟರ್ ವಿಸ್ತಿರ್ಣದಲ್ಲಿದ್ದು, ವಾರ್ಷಿಕ 150,000 ಯುನಿಟ್ ದ್ವಿಚಕ್ರ ವಾಹನಗಳನ್ನು ನಿರ್ವಹಣೆ ಮಾಡಬಹುದು. ಹೀರೋ ಕಂಪನಿ ಎಕ್ಸ್‌ಪಲ್ಸ್ 200 4ವಿ, ಹಂಕ್ 160ಆರ್ 4ವಿ ಬೈಕ್‌ಗಳು ಮತ್ತು ಜೂಮ್ 110 ಸ್ಕೂಟರ್ ಮಾರಾಟವನ್ನು ಕೂಡ ಫಿಲಿಪೈನ್ಸ್‌ನಲ್ಲಿ ಆರಂಭಿಸಿದೆ.
ಈ ಬಗ್ಗೆ ಹೀರೊ ಮೋಟೊಕಾರ್ಪ್‌ನ ಸಿಇಒ ನಿರಂಜನ್ ಗುಪ್ತಾ ಪ್ರತಿಕ್ರಿಯೆ ನೀಡಿ, ಸಂತಸ ಹಂಚಿಕೊಂಡಿದ್ದಾರೆ. 'ಫಿಲಿಪೈನ್ಸ್‌ನಲ್ಲಿನ ಮಾರುಕಟ್ಟೆ ವಿಸ್ತರಣೆ ನಮ್ಮ ಜಾಗತಿಕ ಹೆಜ್ಜೆ ಗುರುತನ್ನು ಪ್ರತಿಬಿಂಬಿಸುತ್ತದೆ' ಎಂದು ಹೇಳಿದ್ದಾರೆ. ಪ್ರಸ್ತುತ, ಹೀರೋ 48 ದೇಶದಲ್ಲಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಭಾರತ ಮತ್ತು ಜರ್ಮನಿಯಲ್ಲಿ ತಂತ್ರಜ್ಞಾನ ಕೇಂದ್ರ (Tech Centres)ಗಳನ್ನು ಹೊಂದಿದೆ. ಜೊತೆಗೆ ಕೊಲಂಬಿಯಾ ಹಾಗೂ ಬಾಂಗ್ಲಾದೇಶದಲ್ಲಿಯೂ ಉತ್ಪಾದನಾ ಘಟಕಗಳಿವೆ.

ಹೀರೋ ಫಿಲಿಪೈನ್ಸ್‌ನಲ್ಲಿ ಬಿಡುಗಡೆಗೊಳಿಸಿರುವ ಜೂಮ್ 110 (Xoom 110) ಸ್ಕೂಟರ್, ದೇಶೀಯ ಮಾರುಕಟ್ಟೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಇದು ರೂ.75,761 ದಿಂದ ರೂ.85,400 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 110.9 ಸಿಸಿ, ಏರ್-ಕೋಲ್ಡ್ ಫ್ಯುಯೆಲ್ ಇಂಜೆಕ್ಷನ್ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 8.15 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 8.70 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ.
ಈ ಹೀರೋ ಜೂಮ್ 110 45 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಫುಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಪ್ರೊಜೆಕ್ಟರ್ ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ನ್ನು ಹೊಂದಿದೆ.
ಭಾರತದಲ್ಲಿ ಹೀರೋ ಎಕ್ಸ್‌ಪಲ್ಸ್ 200 4ವಿ (Hero XPulse 200 4V) ಬೈಕ್ ಸಹ ಲಭ್ಯವಿದ್ದು, ರೂ.1.47 ಲಕ್ಷದಿಂದ ರೂ.1.55 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 199.6 ಸಿಸಿ ಸಿಂಗಲ್-ಸಿಲಿಂಡರ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 51.59 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.
ದೇಶೀಯ ಮಾರುಕಟ್ಟೆಯಲ್ಲಿ ಹೀರೋ ಹಂಕ್ 160ಆರ್ 4ವಿ ಬೈಕ್, 'ಹೀರೋ ಎಕ್ಸ್‌ಟ್ರೀಮ್ 160ಆರ್ 4ವಿ' ಹೆಸರಿನಲ್ಲಿ ಗ್ರಾಹಕರಿಗೆ ಸಿಗುತ್ತದೆ. ರೂ.1.40 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. 163.2 ಸಿಸಿ, ಏರ್/ಆಯಿಲ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 16.9 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 14.6 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








