ಕರ್ನಾಟಕದ ಎಥರ್‌ನಿಂದ ಮಹಾರಾಷ್ಟ್ರದಲ್ಲಿ 3ನೇ ಉತ್ಪಾದನಾ ಘಟಕ: ವಿಪಕ್ಷದಿಂದ ಟೀಕೆ.. ಸಚಿವರ ಪ್ರತಿಕ್ರಿಯೆ ಏನು?
ಕರ್ನಾಟಕ (Karnataka) ಇವಿ ಹಬ್ ಆಗಿದ್ದು, ದೇಶದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆಗಳಾದ ಓಲಾ ಎಲೆಕ್ಟ್ರಿಕ್, ಎಥರ್ ಎನರ್ಜಿ, ಸಿಂಪಲ್ ಎನರ್ಜಿ ಹಾಗೂ ಅಲ್ಟ್ರಾವೈಲೆಟ್ ಬೆಂಗಳೂರಿನಲ್ಲಿ ಮುಖ್ಯ ಕಚೇರಿಯನ್ನು ಹೊಂದಿವೆ. ಆದರೆ, ಇವಿ (EV - Electric Vehicle) ಉತ್ಪಾದನಾ ಕೇಂದ್ರವಾಗಬೇಕೆಂಬ ರಾಜ್ಯದ ಕನಸು ಭಗ್ನವಾಗುತ್ತಿದೆ. ಎಥರ್ ಎನರ್ಜಿ (Ather Energy) ತನ್ನ ಮೂರನೇ ತಯಾರಿಕಾ ಘಟಕವನ್ನು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಆರಂಭಿಸಲು ಮುಂದಾಗಿದೆ. ಇದನ್ನು ವಿಪಕ್ಷ ಬಿಜೆಪಿ ಟೀಕಿಸಿದ್ದು, ಸ್ಥಳೀಯ ಕಂಪನಿಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಒತ್ತಾಯಿಸಿದೆ.
ಈ ಬಗ್ಗೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ (Arvind Bellad), ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. 'ಕರ್ನಾಟಕ ಮೂಲದ ಎಥರ್ ಎನರ್ಜಿ ರಾಜ್ಯದ ಬದಲಿಗೆ ಮಹಾರಾಷ್ಟ್ರದಲ್ಲಿ 3ನೇ ಉತ್ಪಾದನಾ ಘಟಕವನ್ನು ಪ್ರಾರಂಭಿಸಲು ಯೋಜಿಸಿರುವುದು ನಿರಾಶಾದಾಯಕವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಜಿ ಪಾಟೀಲ್ ಅವರು ಈ ಕೂಡಲೇ ಎಥರ್‌ನೊಂದಿಗೆ ಮಾತುಕತೆ ನಡೆಸಿ, ಕರ್ನಾಟಕದಲ್ಲಿಯೇ ತಯಾರಿಕಾ ಘಟಕ ಸ್ಥಾಪಿಸುವಂತೆ ಮನವೊಲಿಸಬೇಕು' ಎಂದಿದ್ದಾರೆ.

'ಹುಬ್ಬಳ್ಳಿ-ಧಾರವಾಡ, ಟಾಟಾ ಮಾರ್ಕೊಪೋಲೊದಂತಹ ಅಸ್ತಿತ್ವದಲ್ಲಿರುವ ಉತ್ಪಾದನಾ ಘಟಕವನ್ನು ಹೊಂದಿದ್ದು, ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಈ ಅವಕಾಶವನ್ನು ಕಳೆದುಕೊಳ್ಳಬೇಡಿ' ಎಂದು ಅರವಿಂದ ಬೆಲ್ಲದ ತಮ್ಮ ಎಕ್ಸ್ (ಟ್ವಿಟರ್)ನಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್‌ನ್ನು ಉದ್ಯಮಿ ಮೋಹನ್‌ದಾಸ್ ಪೈ ಹಂಚಿಕೊಂಡಿದ್ದು, 'ನಿಜ.. ಎಥರ್, ಓಲಾ, ಕೇನ್ಸ್ ರಾಜ್ಯದಿಂದ ದೂರ ಸರಿದಿವೆ. ಕರ್ನಾಟಕವು ಮೊದಲಿಗೆ ಇವಿ ನೀತಿಯನ್ನು ರೂಪಿಸಿತು. ಆದರೆ, ಜಾರಿಗೊಳಿಸಲು ವಿಫಲವಾಯಿತು' ಎಂದು ಹೇಳಿದ್ದಾರೆ.
ಈ ಕುರಿತಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ (M.B.Patil) ಅವರು ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. '2022ರಲ್ಲಿ ಎಥರ್ ಎನರ್ಜಿ 50 ಎಕರೆ ಸ್ಥಳವನ್ನು ಕೇಳಿತ್ತು. ಅಂದಿನ ಬಿಜೆಪಿ ಸರ್ಕಾರ ಜಾಗವನ್ನು ನೀಡಲಿಲ್ಲ. ಹಾಗಾಗಿ, ಇದು ಬಿಜೆಪಿಯ ತಪ್ಪು. ನಾವು ಭೂಮಿ ಕೊಡುವ ಬಗ್ಗೆ ಕಂಪನಿಯೊಂದಿಗೆ ಮಾತನಾಡುತ್ತಿದ್ದೇವೆ' ಎಂದು ಟೀಕೆಗಳಿಗೆ ಉತ್ತರಿಸಿದ್ದಾರೆ.

ಎಥರ್ ಎನರ್ಜಿಯು ಹೊಸ ಉತ್ಪಾದನಾ ಘಟಕವನ್ನು ಮಹಾರಾಷ್ಟ್ರದ ಔರಂಗಾಬಾದ್ ಸಮೀಪ ಬಿಡ್ಕಿನ್‌ನಲ್ಲಿ 100 ಎಕರೆ ಪ್ರದೇಶದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ಇದಕ್ಕಾಗಿ ರೂ.1,000 ಕೋಟಿ ಹೂಡಿಕೆ ಮಾಡಲು ಕಂಪನಿಯು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ಎರಡು ತಯಾರಿಕಾ ಘಟಕಗಳಿದ್ದು, ಸ್ಕೂಟರ್‌ನ್ನು ಜೋಡಿಸುವುದು ಹಾಗೂ ಬ್ಯಾಟರಿಯನ್ನು ಉತ್ಪಾದಿಸಲಾಗುತ್ತದೆ.
ಎಥರ್ ಎನರ್ಜಿ 2024ರ ಹಣಕಾಸು ವರ್ಷದಲ್ಲಿ ರೂ.1,753.8 ಕೋಟಿ ಆದಾಯವನ್ನು ಗಳಿಸಿತ್ತು. ಪ್ರಸ್ತುತ ಕಂಪನಿಯು ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಎಥರ್ 450ಎಕ್ಸ್ ( Ather 450X) ರೂ.1.41 ಲಕ್ಷದಿಂದ ರೂ.1.55 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 3.7 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 150 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ.
ಎಥರ್ ರಿಜ್ಟಾ (Ather Rizta) ಎಲೆಕ್ಟ್ರಿಕ್ ಸ್ಕೂಟರ್ ರೂ.1.10 ಲಕ್ಷದಿಂದ ರೂ.1.45 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಸಿಗುತ್ತದೆ. ಭರ್ತಿ ಚಾರ್ಜ್‌ನಲ್ಲಿ 160 ಕಿ.ಮೀ ಓಡುತ್ತದೆ. ಎಥರ್ 450ಎಸ್ (Ather 450S) ರೂ.1.26 ಲಕ್ಷ ಬೆಲೆಯನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 115 ಕಿ.ಮೀ ಕ್ರಮಿಸುತ್ತದೆ. ಎಥರ್ 450 ಅಪೆಕ್ಸ್ (Ather 450 Apex) ರೂ.1.95 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. ಸಂಪೂರ್ಣ ಚಾರ್ಜ್‌ನಲ್ಲಿ 157 ರೇಂಜ್ ಕೊಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications