Kinetic E-Luna: ಎಲೆಕ್ಟ್ರಿಕ್ ರೂಪದಲ್ಲಿ ಕೈನೆಟಿಕ್ ಲೂನಾ ಸಿದ್ದ, ನಾಳೆಯಿಂದ ರೂ.500 ಪಾವತಿಸಿ ಬುಕ್ಕಿಂಗ್ ಮಾಡಿ
ಭಾರತದಲ್ಲಿ ಒಂದು ಕಾಲದಲ್ಲಿ ಕೈನೆಟಿಕ್ ಲೂನಾ (Kinetic Luna) ಜನಪ್ರಿಯ ಮೊಪೆಡ್ ಆಗಿತ್ತು. ವರ್ಷಗಳು ಉರುಳಿದಂತೆ ಹೊಸ ಮೋಟಾರ್‌ಸೈಕಲ್ ಮತ್ತು ಸ್ಕೂಟರ್‌ಗಳ ಪ್ರವೇಶದಿಂದ ತೀವ್ರ ಪೈಪೋಟಿ ಎದುರಾಗಿ ಮಾರುಕಟ್ಟೆಯಿಂದ ಕಣ್ಮರೆಯಾಗಿತ್ತು. ಈಗಲೂ 80-90ರ ದಶಕದವರ ನೆಚ್ಚಿನ ದ್ವಿಚಕ್ರ ವಾಹನವಾಗಿ ಅವರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.
ಕಳೆದ ಎರಡು ವರ್ಷದಿಂದ ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಭಾರೀ ಉತ್ತೇಜನ ದೊರೆಯುತ್ತಿದ್ದು, ಹಲವು ಕಂಪನಿಗಳು ನವೀನ ಮಾದರಿಯ ಇ-ಸ್ಕೂಟರ್ ಮತ್ತು ಬೈಕ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಸದ್ಯ ದೇಶದ ರಸ್ತೆಯನ್ನು ಆಳಿದ್ದ ಜನಸಾಮಾನ್ಯರ ಇಷ್ಟದ 'ಕೈನಿಟಿಕ್ ಲೂನಾ' ಎಲೆಕ್ಟ್ರಿಕ್ ರೂಪದಲ್ಲಿ ಬರಲು ಸಿದ್ದವಾಗಿದೆ. ಆಸಕ್ತ ಗ್ರಾಹಕರು, ನಾಳೆಯಿಂದ ರೂ.500 ಮುಂಗಡ ಹಣ ಪಾವತಿಸುವ ಮೂಲಕ ಈ ಮೊಪೆಡ್ ಅನ್ನು ಕಾಯ್ದಿರಿಸಬಹುದು.

ಇತ್ತೀಚೆಗೆ ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green), ಫೆಬ್ರವರಿಯ ಮೊದಲಾರ್ಧದಲ್ಲಿ ಇ-ಲೂನಾ (E-Luna)ವನ್ನು ಬಿಡುಗಡೆಗೊಳಿಸಲಾಗುವುದು. ಶುಕ್ರವಾರ (ಜನವರಿ 26)ದಿಂದ ಬುಕ್ಕಿಂಗ್ ಆರಂಭ ಮಾಡುವುದಾಗಿ ಘೋಷಿಸಿತ್ತು. ಹೊಸ ಇ-ಲೂನಾದ ಬ್ಯಾಟರಿ, ರೇಂಜ್ (ಮೈಲೇಜ್) ಹಾಗೂ ವೈಶಿಷ್ಟ್ಯವನ್ನು ಒಳಗೊಂಡ ಇನ್ನಿತರೇ ಮಾಹಿತಿಯನ್ನು ಕಂಪನಿಯು ಬಹಿರಂಗಪಡಿಸಿಲ್ಲ. ಅದರ ಬಗ್ಗೆ ಕೆಲವೇ ದಿನಗಳಲ್ಲಿ ತಿಳಿಯಲಿದೆ.
ಮುಂಬರಲಿರುವ ನೂತನ ಕೈನಿಟಿಕ್ ಇ-ಲೂನಾ (Kinetic E-Luna)ವನ್ನು ದೊಡ್ಡ ನಗರಗಳು ಮಾತ್ರವಲ್ಲದೆ ಗ್ರಾಮೀಣ ಪ್ರದೇಶದ ಜನರು ಸಹ ಉಪಯೋಗ ಮಾಡುವಂತೆ ಕಂಪನಿ ವಿನ್ಯಾಸಗೊಳಿಸಿದೆ ಎಂದು ತಿಳಿದುಬಂದಿದೆ. ಎಲೆಕ್ಟ್ರಿಕ್ ಲೂನಾ ಹೆಚ್ಚು ಗಟ್ಟಿಮುಟ್ಟಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಕಂಪನಿಯ ಹಿರಿಯ ಅಧಿಕಾರಿಗಳು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ ಪೆಟ್ರೋಲ್ ದ್ವಿಚಕ್ರ ವಾಹನಗಳಿಗೆ ಪರ್ಯಾಯವಾಗಲಿದೆ ಎನ್ನಲಾಗಿದೆ.
ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಕೈನೆಟಿಕ್ ಗ್ರೀನ್ ತನ್ನ ತಯಾರಿಕಾ ಘಟಕವನ್ನು ಹೊಂದಿದ್ದು, ಇಲ್ಲಿ ಪ್ರತಿ ತಿಂಗಳು 5,000 ಯುನಿಟ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಬಹುದು. ಮುಂಬರಲಿರುವ ಇ-ಲೂನಾ ರೂ.80,000 ಆಸುಪಾಸಿನಲ್ಲಿ ಖರೀದಿಗೆ ದೊರೆಯಬಹುದು ಎಂದು ಮೂಲಗಳಿಂದ ತಿಳಿದುಬಂದಿದೆ. 1970ರ ದಶಕದ ಆರಂಭದಲ್ಲಿ ಬಿಡುಗಡೆಯಾಗಿದ್ದ ಲೂನಾ ದ್ವಿಚಕ್ರ ವಾಹನ ಮಾರುಕಟ್ಟೆಯ ಮೊಪೆಡ್ ವಿಭಾಗದಲ್ಲಿ ಶೇಕಡ 95% ಪಾಲನ್ನು ತನ್ನಾಗಿಸಿಕೊಂಡಿತ್ತು.
ಆ ಕಾಲಘಟ್ಟದಲ್ಲಿ ಪ್ರತಿಯೊಬ್ಬರ ನೆಚ್ಚಿನ ವಾಹನವಾಗಿದ್ದವು. ಕಂಪನಿಯು ಪ್ರತಿದಿನ ಸುಮಾರು 2,000 ಯುನಿಟ್ ಲೂನಾ ಮೊಪೆಡ್ ಮಾರಾಟ ಮಾಡುತ್ತಿತ್ತು. ಆದರೆ, ಕಠಿಣ ಎಮಿಷನ್ ನಿಯಮಗಳು ಮತ್ತು ಮಾರುಕಟ್ಟೆಯಲ್ಲಿ ಎದುರಾದ ತೀವ್ರ ಸ್ಪರ್ಧೆಯಿಂದ 2000ನೇ ಇಸವಿಯಲ್ಲಿ ಲೂನಾ ಇತಿಹಾಸದ ಪುಟ ಸೇರಿತ್ತು. ಕಳೆದ ತಿಂಗಳು ಕೈನೆಟಿಕ್ ಗ್ರೀನ್ ದೇಶೀಯ ಮಾರುಕಟ್ಟೆಗೆ ಜುಲು ಎಲೆಕ್ಟ್ರಿಕ್ ಸ್ಕೂಟರ್ (Zulu Electric Scooter) ಬಿಡುಗಡೆಗೊಳಿಸುವ ಮೂಲಕ ಪುನಃ ಪ್ರವೇಶಿಸಿತು.
ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.94,990 ಎಕ್ಸ್ ಶೋರೂಂ ಬೆಲೆ ಪರಿಚಯಿಸಲಾಯಿತು. ಇದರಲ್ಲಿ 2.27 kWh ಸಾಮರ್ಥ್ಯದ ಲಿಥಿಯಂ - ಐಯಾನ್ ಬ್ಯಾಟರಿ ಪ್ಯಾಕ್, ಹಬ್ ಎಲೆಕ್ಟ್ರಿಕ್ ಮೋಟಾರ್ ಬಳಕೆ ಮಾಡಲಾಗಿದ್ದು, ಇದು 2.8 bhp ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಸಂಪೂರ್ಣ ಚಾರ್ಜ್ ನಲ್ಲಿ 104 ಕಿಲೋಮೀಟರ್ ರೇಂಜ್ ನೀಡಲಿದ್ದು, 60 kmph ಟಾಪ್ ಸ್ವೀಡ್ ಪಡೆಯಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








