2025ರ ಹೋಂಡಾ ಆಕ್ಟಿವಾ 125 ಸ್ಕೂಟರ್ ಖರೀದಿಸಬೇಕೇ.. ಡೌನ್-ಪೇಮೆಂಟ್, ಆನ್-ರೋಡ್ ದರ.. EMI ವಿವರಗಳು!
ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ ನಂ.1 ಸ್ಕೂಟರ್ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ 'ಆಕ್ಟಿವಾ' ಜನಪ್ರಿಯ ಸ್ಕೂಟರ್ ಆಗಿ ಹೊರಹೊಮ್ಮಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಇತ್ತೀಚೆಗೆ ಹೋಂಡಾ ಕಂಪನಿಯು 2025ರ 'ಆಕ್ಟಿವಾ 125' ಸ್ಕೂಟರ್‌ನ್ನು ಬಿಡುಗಡೆ ಮಾಡಿದೆ. ಇದು ನವೀನವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ನಾವಿಲ್ಲಿ ಈ ಸ್ಕೂಟರ್‌ನ ಆನ್-ರೋಡ್ ಬೆಲೆ (On-Road Price), ಡೌನ್-ಪೇಮೆಂಟ್ (Down-Payment) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ನವದೆಹಲಿಯಲ್ಲಿ 2025ರ ನೂತನ ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್, ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಡಿಎಲ್ಎಕ್ಸ್ (DLX) ರೂಪಾಂತರ, ರೂ.1.08 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿದೆ. ರೂ.20 ಸಾವಿರ ಡೌನ್-ಪೇಮೆಂಟ್ ಪಾವತಿ ಮಾಡಿ ಈ ಸ್ಕೂಟರ್‌ನ್ನು ಮನೆಗೆ ತಂದರೆ, ರೂ.88,000 ವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 3 ವರ್ಷಕ್ಕೆ ತಿಂಗಳಿಗೆ ರೂ.2,800 ವರೆಗೆ ಇಎಂಐ ಕಟ್ಟಬೇಕು.

ಹೋಂಡಾ ಆಕ್ಟಿವಾ 125 ಸ್ಕೂಟರ್‌ನ ಹೆಚ್-ಸ್ಮಾರ್ಟ್ (H-Smart) ರೂಪಾಂತರ ಕೂಡ ರೂ.1.08 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ಇದನ್ನು ರೂ.25 ಸಾವಿರ ಡೌನ್-ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.82,000 ವರೆಗೆ ಸಾಲ ಬಾಕಿಯಿರುತ್ತದೆ. ಅದಕ್ಕೆ ಶೇಕಡ 8% ಬಡ್ಡಿ ಹಾಕಿ 3 ವರ್ಷದ ಅವಧಿಗೆ ರೂ.2,600 ವರೆಗೆ ಇಎಂಐ ಪಾವತಿಸಬೇಕು.
ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರ್ ವಿಶೇಷತೆಗಳೇನು: ಇದು ಹೊರಭಾಗದಲ್ಲಿ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಸೈರನ್ ಬ್ಲೂ ಮತ್ತು ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಬರೋಬ್ಬರಿ 110 ಕೆಜಿ ತೂಕವಿದ್ದು, 5.3 ಲೀಟರ್‌ನ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.

ಈ ಸ್ಕೂಟರ್ ಒಬಿಡಿ2ಬಿ 123.92 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಸರಿ ಸುಮಾರು 47 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡಬಲ್ಲದು ಎಂದು ಹೇಳಲಾಗಿದೆ.
ನೂತನ ಹೋಂಡಾ ಆಕ್ಟಿವಾ 125 ಸ್ಕೂಟರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಟಿಎಫ್‌ಟಿ ಕನ್ಸೋಲ್ (4.2-ಇಂಚು) ಟರ್ನ್-ಬೈ-ಟರ್ನ್ ನ್ಯಾವಿಗೇಶನ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಸೆಟಪ್, ಕಾಲ್/ ಎಸ್ಎಂಎಸ್ ಅಲರ್ಟ್ & ಐಡಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್ ಒಳಗೊಂಡನಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ.
ಹೊಸ ಆಕ್ಟಿವಾ 125 ಸ್ಕೂಟರ್ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂದೆ (ರೇರ್) ಸಿಂಗಲ್-ಸೈಡೆಡ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ 1260 ಎಂಎಂ ವೀಲ್‌ಬೇಸ್ & 162 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿದೆ.
ಒಟ್ಟಾರೆಯಾಗಿ ದಿನಬಳಕೆಗಾಗಿ ನೂತನ ಸ್ಕೂಟರ್‌ವೊಂದನ್ನು ಖರೀದಿಸಲು ಹುಡುಕಾಟ ನಡೆಸುತ್ತಿರುವವರಿಗೆ 'ಹೋಂಡಾ ಆಕ್ಟಿವಾ 125' ಉತ್ತಮವಾದ ಆಯ್ಕೆಯಾಗಲಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ಬಹುತೇಕರ ನೆಚ್ಚಿನ ದ್ವಿಚಕ್ರ ವಾಹನವಾಗಲಿದೆ ಎಂದು ಕಂಪನಿ ಸಹ ನಿರೀಕ್ಷಿಸಿದೆ. ಮುಂಬರುವ ದಿನಗಳಲ್ಲಿ ಈ ಆಕ್ಟಿವಾಗೆ ದೇಶೀಯ ಗ್ರಾಹಕರಿಗೆ ಯಾವ ರೀತಿಯ ಬೇಡಿಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ನಿಮ್ಮ ಗಮನಕ್ಕೆ.. ಈ ಹೋಂಡಾ ಆಕ್ಟಿವಾ 125 ಸ್ಕೂಟರ್ ಆನ್-ರೋಡ್ ದರ ಹಾಗೂ ಸಾಲದ ಆಯ್ಕೆಗಳು ರಾಜ್ಯದಿಂದ ರಾಜ್ಯಕ್ಕೆ ಬೇರೆಯಿರಲಿದ್ದು, ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications