Kinetic E-Luna: ಬಡವರು ಸಹ ಕೈನೆಟಿಕ್ ಇ-ಲೂನಾ ತೆಗೆದುಕೊಳ್ಳಬಹುದು.. ಯಾಕೆ ಗೊತ್ತಾ?
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 1970ರ ದಶಕದಲ್ಲಿ ಕ್ರಾಂತಿ ಸೃಷ್ಟಿಸಿದ್ದ ಕೈನೆಟಿಕ್ ಲೂನಾ (Kinetic Luna) ಎಲೆಕ್ಟ್ರಿಕ್ ರೂಪದಲ್ಲಿ ಮರುಪ್ರವೇಶಿಸಿದೆ. ನವದೆಹಲಿಯಲ್ಲಿ ಬುಧವಾರ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ 'ಇ-ಲೂನಾ'ವನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಬಿಡುಗಡೆಗೊಳಿಸಿದರು.
ಕೈನೆಟಿಕ್ ಇ-ಲೂನಾ (Kinetic E-Luna), 2 ಆಕರ್ಷಕ ರೂಪಾಂತರಗಳ ಆಯ್ಕೆಯಲ್ಲಿ ಲಭ್ಯವಿದೆ. ಅವುಗಳೆಂದರೆ ಎಕ್ಸ್1 (X1), ಎಕ್ಸ್2 (X2). ಕ್ರಮವಾಗಿ ರೂ.69,990 ಮತ್ತು ರೂ.74,900 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಗ್ರಾಹಕರು ಇ-ಲೂನಾವನ್ನು ಮಾಸಿಕ ರೂ.2,000 ಇಎಂಐ (EMI) ಪಾವತಿಯೊಂದಿಗೆ ಖರೀದಿ ಮಾಡಬಹುದು ಎಂದು ಕಂಪನಿ ಹೇಳಿದೆ.

ಈ ಮೊಪೆಡ್ ನಿರ್ವಹಣಾ ವೆಚ್ಚವು ತಿಂಗಳಿಗೆ ಕೇವಲ ರೂ.300 ಇದ್ದು, ಒಟ್ಟು ರೂ.2,500 ಕ್ಕಿಂತ ಕಡಿಮೆ ಖರ್ಚು ಬರುತ್ತದೆ. ಎಲೆಕ್ಟ್ರಿಕ್ ಲೂನಾಗೆ ಇದೇ ಧನಾತ್ಮಕ ಅಂಶವಾಗಿದ್ದು, ದೇಶದಲ್ಲಿರುವ ಹೆಚ್ಚಿನ ಸಂಖ್ಯೆಯ ಮಧ್ಯಮ ವರ್ಗದ ಜನರು ಹಾಗೂ ಬಡವರು ಕೈನೆಟಿಕ್ ಇ-ಲೂನಾವನ್ನು ಇಷ್ಟಪಟ್ಟು ಖರೀದಿಸಬಹುದು. ಸದ್ಯ, ಬೇರೆ ಯಾವ ಮೋಟಾರ್‌ಸೈಕಲ್ ಅಥವಾ ಸ್ಕೂಟರ್ ಕೊಂಡುಕೊಂಡರೂ ಐಎಂಐ ಒಳಗೊಂಡಂತೆ ನಿರ್ವಹಣಾ ವೆಚ್ಚವು ರೂ.3000ಕ್ಕಿಂತ ಹೆಚ್ಚಿದೆ.
ಈ ಹಿಂದೆ, ಕೈನೆಟಿಕ್ ಗ್ರೀನ್ ಕಂಪನಿಯೇ ತಿಳಿಸಿದಂತೆ ಈ ಎಲೆಕ್ಟ್ರಿಕ್ ಲೂನಾ 1 ಕಿಲೋಮೀಟರ್ ಕ್ರಮಿಸಲು ಕೇವಲ 10 ಪೈಸೆ ಖರ್ಚಾಗುತ್ತದೆ. ಅದೇ ರೀತಿಯಲ್ಲಿ ದಿನನಿತ್ಯ ಬಳಸುವ ಸಾಮಾನ್ಯ ಇಂಧನ ಚಾಲಿತ ಸ್ಕೂಟರ್‌ವೊಂದು ಪ್ರತಿ ಲೀ.ಗೆ 60 ಕಿಲೋಮೀಟರ್ ಮೈಲೇಜ್ ಕೊಡುತ್ತದೆ ಅಂದುಕೊಂಡರೂ ಇವತ್ತಿನ ದರಕ್ಕೆ 1 ಲೀಟರ್ ಪೆಟ್ರೋಲ್‌ಗೆ ರೂ.101 ದರವಿದ್ದು, ಕೈನೆಟಿಕ್ ಇ-ಲೂನಾವನ್ನು 60 ಕಿ.ಮೀ ಓಡಿಸಲು ರೂ.6 ಮಾತ್ರ ವ್ಯಯಿಸಬೇಕು.

ಕೈನೆಟಿಕ್ ಗ್ರೀನ್ ಸಿಇಒ ಸುಲಜ್ಜ ಫಿರೋಡಿಯಾ ಮೋಟ್ವಾನಿ ಅವರು, 'ಎಲೆಕ್ಟ್ರಿಕ್ ಲೂನಾವನ್ನು ಖರೀದಿಸಲು ಈಗಾಗಲೇ 40,000ಕ್ಕೂ ಹೆಚ್ಚು ಗ್ರಾಹಕರ ಆಸಕ್ತಿ ತೋರಿಸಿದ್ದಾರೆ' ಎಂದು ನಿನ್ನೆಯ ಸಮಾರಂಭದಲ್ಲಿ ತಿಳಿಸಿದ್ದಾರೆ. ಜನವರಿ 26ರಿಂದಲೇ ನೂತನ ಕೈನೆಟಿಕ್ ಇ-ಲೂನಾದ ಬುಕ್ಕಿಂಗ್ ಶುರುವಾಗಿದ್ದು, ಖರೀದಿದಾರರು ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ, ರೂ.500 ಮುಂಗಡ ಹಣವನ್ನು ಪಾವತಿಸಿ, ಈ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕಾಯ್ದಿರಿಸಬಹುದು.
ಶೀಘ್ರದಲ್ಲಿಯೇ ದೇಶಾದ್ಯಂತವಿರುವ ಎಲ್ಲ ಕೈನೆಟಿಕ್ ಗ್ರೀನ್ ಡೀಲರ್‌ಶಿಪ್‌ಗಳಲ್ಲಿ ನೂತನ ಇ-ಲೂನಾದ ವಿತರಣೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಎಲೆಕ್ಟ್ರಿಕ್ ಮೊಪೆಡ್ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಸೈಟ್‌ಗಳಲ್ಲಿಯೂ ಲಭ್ಯವಿರಲಿದೆ. ಮುಂಬರುವ ದಿನಗಳಲ್ಲಿ ಕಂಪನಿಯು ಇ-ಲೂನಾವನ್ನು 1.7 ಕೆಡಬ್ಲ್ಯೂಹೆಚ್ (kWh) & ದೊಡ್ಡದಾದ 3.0 ಕೆಡಬ್ಲ್ಯೂಹೆಚ್ (kWh) ಬ್ಯಾಟರಿ ಪ್ಯಾಕ್ ಆಯ್ಕೆಯಲ್ಲಿಯೂ ಪರಿಚಯಿಸಲು ಯೋಜಿಸಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿರುವ ಕೈನೆಟಿಕ್ ಇ-ಲೂನಾ ಡುಯಲ್-ಟ್ಯೂಬ್ಯುಲರ್ ಸ್ಟೀಲ್ ಚಾಸಿಸ್ ಅನ್ನು ಆಧರಿಸಿದ್ದು, 150 ಕೆಜಿ ತೂಕವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೊಪೆಡ್ 2 ಕೆಡಬ್ಲ್ಯೂಹೆಚ್ (kWh) ಸಾಮರ್ಥ್ಯ ಬ್ಯಾಟರಿ ಪ್ಯಾಕ್ ಒಳಗೊಂಡಿದ್ದು, ಪೂರ್ತಿ ಚಾರ್ಜ್ ನಲ್ಲಿ 110 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. ಗಂಟೆಗೆ 50 ಗರಿಷ್ಠ ವೇಗವನ್ನು ಪಡೆಯಲಿದೆ.
ಕೈನೆಟಿಕ್ ಇ-ಲೂನಾ ಮಲ್ಬೆರಿ ರೆಡ್, ಓಷನ್ ಬ್ಲೂ, ಪರ್ಲ್ ಯೆಲ್ಲೋ, ಸ್ಪಾರ್ಕ್ಲಿಂಗ್ ಗ್ರೀನ್ ಸೇರಿದಂತೆ 5 ಆಕರ್ಷಕ ಬಣ್ಣಗಳೊಂದಿಗೆ ಸಿಗುತ್ತದೆ. ಇದರ ಬ್ಯಾಟರಿ 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದ್ದು, ಕಾಂಬಿ ಬ್ರೇಕಿಂಗ್ ಸಿಸ್ಟಮ್, 16 - ಇಂಚಿನ ವೀಲ್ಸ್, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್ ಸೆಟಪ್, ಡಿಜಿಟಲ್ ಮೀಟರ್, ಸ್ಯಾರಿ ಗಾರ್ಡ್, ಸೈಟ್ ಸ್ಟಾಂಡ್ ಸೆನ್ಸರ್, ಸೇಫ್ಟಿ ಲಾಕ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








