TVS: ಪ್ರತಿಸ್ಪರ್ಧಿಗಳಿಗೆ ನಡುಕ.. ಹೊಸ ಅವತಾರದಲ್ಲಿ ಬರುತ್ತೆ ಟಿವಿಎಸ್ ಜುಪಿಟರ್?
ಹೊಸೂರು ಮೂಲದ ಟಿವಿಎಸ್ ಮೋಟಾರ್ (TVS Motor) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಕೈಗೆಟುಕುವ ಬೆಲೆಯಲ್ಲಿ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಟಿವಿಎಸ್ ನೂತನ ದ್ವಿಚಕ್ರ ವಾಹನ ಬಿಡುಗಡೆ ಸಂಬಂಧ ಟೀಸರ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಬಾಗಿಕೊಂಡಿರುವ ಎಲ್‌ಇಡಿ ಡಿಆರ್‌ಎಲ್‌ನ್ನು ನೋಡಬಹುದು. ಹಲವರು ಇದೊಂದು ಸ್ಕೂಟರ್ ಆಗಿದೆ ಎಂದು ಊಹಿಸುತ್ತಿದ್ದಾರೆ. ಆದಾಗ್ಯೂ ಖಚಿತ ವಿವರಗಳು ಲಭ್ಯವಾಗಿಲ್ಲ.
ಟಿವಿಎಸ್ ಮೋಟಾರ್, ಜುಪಿಟರ್ 110 (Jupiter 110) ಸ್ಕೂಟರ್‌ನ್ನು ನವೀಕರಿಸುತ್ತಿದೆ. ಶೀಘ್ರದಲ್ಲಿಯೇ ಹೊಸ ರೂಪದಲ್ಲಿ ಮಾರುಕಟ್ಟೆಗೆ ತರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದರ ವಿನ್ಯಾಸದಲ್ಲಿ ಒಂದಷ್ಟು ಬದಲಾವಣೆ ಮಾಡಿರುವ ನಿರೀಕ್ಷೆಯಿದೆ. ಜೊತೆಗೆ ಯುವ ಗ್ರಾಹಕರನ್ನು ಸೆಳೆಯಲು ಕೆಲವೊಂದು ನೂತನ ವೈಶಿಷ್ಟ್ಯಗಳನ್ನು ಸಹ ಪರಿಚಯಿಸಬಹುದು ಎನ್ನಲಾಗಿದೆ.

ವಿನ್ಯಾಸದ ಹೊರತಾಗಿ, ಹೊಸ ಸ್ಕೂಟರ್ ಎಂಜಿನ್ ಹಾರ್ಡ್‌ವೇರ್‌ನಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಲಾಗಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಒಳಗೊಂಡಿರುವ ಸಾಧ್ಯತೆಯಿದೆ. ಸುರಕ್ಷತೆಗಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಟಿವಿಎಸ್ ಜುಪಿಟರ್ ಅತ್ಯುತ್ತಮವಾದ ಸ್ಕೂಟರ್ ಆಗಿದೆ. 2024ರ ಜೂನ್ ತಿಂಗಳ ಪ್ರಮುಖ ಸ್ಕೂಟರ್‌ಗಳ ಮಾರಾಟ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೋಂಡಾ ಆಕ್ಟಿವಾ ಮೊದಲ ಸ್ಥಾನದಲ್ಲಿದೆ. ಜೂನ್ನಲ್ಲಿ 72,100 ಯುನಿಟ್ 'ಜುಪಿಟರ್' ಮಾದರಿಗಳು ಮಾರಾಟವಾಗಿವೆ. 2023ರ ಜೂನ್ ತಿಂಗಳಲ್ಲಿ ಮಾರಾಟ ಮಾಡಿದ 64,252 ಯುನಿಟ್‌ಗೆ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಶೇಕಡ 12.21% ಬೆಳವಣಿಗೆಯಾಗಿದೆ.

ಪ್ರಸ್ತುತ, ದೇಶೀಯವಾಗಿ ಟಿವಿಎಸ್ ಜುಪಿಟರ್ ಸ್ಕೂಟರ್ 125 ಹಾಗೂ 110 ಸಿಸಿ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ನೂತನ ಜುಪಿಟರ್ 125 ರೂ.89,155 ದಿಂದ ರೂ.99,805 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಪಡೆದಿದ್ದು, 8.2 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 10.5 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 57.27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.
ಈ ಟಿವಿಎಸ್ ಜುಪಿಟರ್ 125 ಪ್ರಿಸ್ಟಿನ್ ವೈಟ್, ಇಂಡಿಬ್ಲೂ, ಡಾನ್ ಆರೆಂಜ್ ಒಳಗೊಂಡಂತೆ ಹಲವು ಬಣ್ಣಗಳೊಂದಿಗೂ ದೊರೆಯುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಿಸ್ಕ್ ಮತ್ತು ಡ್ರಮ್ ಬ್ರೇಕ್‌ನ್ನು ಒಳಗೊಂಡಿದೆ. 12-ಇಂಚಿನ ಅಲಾಯ್ ವೀಲ್‌ಗಳು ಮತ್ತು 90/90-12 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ.
ಟಿವಿಎಸ್ ಜುಪಿಟರ್ 110 ಸ್ಕೂಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತದೆ. ಇದು ರೂ.77,431 ದಿಂದ ರೂ.93,026 ಎಕ್ಸ್ ಶೋರೂಂ ದರವನ್ನು ಪಡೆದಿದೆ. 109.7 ಸಿಸಿ ಪೆಟ್ರೋಲ್ ಎಂಜಿನ್ ಒಳಗೊಂಡಿದ್ದು, 7.88 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 8.8 ಎನ್ಎಂ ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








