ವಿಶ್ವ ತಿರುಗಿ ನೋಡುವಂತೆ ಮಾಡಿದ ಕನ್ನಡಿಗರು: ಬೆಂಗಳೂರಿನಿಂದ ವಿದೇಶಕ್ಕೆ ಇ-ಬೈಕ್‌ಗಳು ರಫ್ತು.. ಅದ್ದೂರಿ ಚಾಲನೆ!
ಬೆಂಗಳೂರು ಇವಿ (ಎಲೆಕ್ಟ್ರಿಕ್ ವೆಹಿಕಲ್) ಹಬ್ ಆಗಿ ಬದಲಾಗುತ್ತಿದೆ. ರಾಜಧಾನಿಯಲ್ಲಿ ಓಲಾ ಎಲೆಕ್ಟ್ರಿಕ್, ಸಿಂಪಲ್ ಎನರ್ಜಿ ಹಾಗೂ ಎಥರ್ ಎನರ್ಜಿಯಂತಹ ಅನೇಕ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಪ್ರಧಾನ ಕಚೇರಿ ಹೊಂದಿದ್ದು, ದೇಶಾದ್ಯಂತ ಹಲವು ಇ-ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಇದಕ್ಕೆ ಕನ್ನಡಿಗರು ಕಟ್ಟಿ ಬೆಳೆಸಿದ ಅಲ್ಟ್ರಾವೈಲೆಟ್ (Ultraviolette) ಕಂಪನಿ ಕೂಡ ಹೊರತಾಗಿಲ್ಲ. ಎಫ್77 (F77) ಸ್ಪೋರ್ಟ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಮೂಲಕ ಸಾವಿರಾರು ಸಂಖ್ಯೆಯ ಯುವ ಗ್ರಾಹಕರ ಮನಸ್ಸನ್ನು ಗೆದ್ದಿದೆ.
ಅಲ್ಟ್ರಾವೈಲೆಟ್ ಕಂಪನಿಯು ವಿದೇಶಕ್ಕೆ ಹೊಸ ಎಫ್77 ಎಲೆಕ್ಟ್ರಿಕ್ ಬೈಕ್‌ಗಳನ್ನು ರಫ್ತು ಮಾಡಲು ಸಿದ್ದವಾಗಿದ್ದು, ಮಂಗಳವಾರ ಜಿಗಣಿಯಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಅದ್ದೂರಿಯಾಗಿ 'ಫ್ಲ್ಯಾಗ್-ಆಫ್' ಕಾರ್ಯಕ್ರಮ ಏರ್ಪಡಿಸಿತ್ತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಯುರೋಪ್ ಮಾರುಕಟ್ಟೆಗೆ ರಫ್ತು ಮಾಡುತ್ತಿರುವ ಮೊದಲ ಬ್ಯಾಚ್‌ನ 'ಎಫ್77' ಎಲೆಕ್ಟ್ರಿಕ್ ಬೈಕ್‌ಗಳಿಗೆ ಹಸಿರು ನಿಶಾನೆ ತೋರಿಸಿದರು.

ಇದೇ ಸಮಾರಂಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕೂಡ ಹಾಜರಿದ್ದರು. ಆ ಬಳಿಕ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಫ್ತು ಮಾಡಲಾಗುತ್ತಿರುವ ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳನ್ನು ಯುರೋಪ್ ಒಕ್ಕೂಟಕ್ಕೆ ಸೇರಿರುವ ಜರ್ಮನಿ, ಇಟಲಿ, ಟರ್ಕಿ ಹಾಗೂ ಸ್ಪೇನ್ ದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ನೂತನ ಅಲ್ಟ್ರಾವೈಲೆಟ್ ಎಫ್77 (Ultraviolette F77) ಎಲೆಕ್ಟ್ರಿಕ್ ಬೈಕ್ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇದರ ಸ್ಟ್ಯಾಂಡರ್ಡ್ ಎಫ್77 ರೂಪಾಂತರ ರೂ.2,99,000 ಹಾಗೂ ಎಫ್77 ರೆಕಾನ್ ರೂಪಾಂತರ (ವೇರಿಯೆಂಟ್) ರೂ.3,99,000 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಇವುಗಳು ಏರ್‌ಸ್ಟ್ರೈಕ್, ಲೇಸರ್ ಮತ್ತು ಶ್ಯಾಡೋ ಎಂಬ 3 ಬಣ್ಣದ ಆಯ್ಕೆಯಲ್ಲಿಯೂ ಲಭ್ಯವಿವೆ.

ಹೊಸ ಅಲ್ಟ್ರಾವೈಲೆಟ್ ಎಫ್77 ಸ್ಟ್ಯಾಂಡರ್ಡ್ ರೂಪಾಂತರ, 7.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಇದರ ಮೋಟಾರ್ 36.7 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುತ್ತದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 7.8 ಸೆಕೆಂಡುಗಳಲ್ಲಿ 0-100 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಸಂಪೂರ್ಣ ಚಾರ್ಜ್‌ನಲ್ಲಿ 211 ಕಿಲೋಮಿಟರ್ ರೇಂಜ್ (ಮೈಲೇಜ್) ನೀಡುತ್ತದೆ.
ಅಲ್ಟ್ರಾವೈಲೆಟ್ ಎಫ್77 ರೆಕಾನ್ ರೂಪಾಂತರ, 10.3 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 323 ಕಿಲೋಮೀಟರ್ ಓಡುತ್ತದೆ. ಈ ಎಲೆಕ್ಟ್ರಿಕ್ ಬೈಕ್ ಒಳಗೊಂಡಿರುವ ಎಲೆಕ್ಟ್ರಿಕ್ ಮೋಟಾರ್, 36.7 ಪಿಎಸ್ ಅಶ್ವ ಶಕ್ತಿ ಹಾಗೂ 100 ಎನ್ಎಂ ಟಾರ್ಕ್ ಹೊರಹಾಕುತ್ತದೆ. 155 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

ಈ ಅಲ್ಟ್ರಾವೈಲೆಟ್ ಎಫ್77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ರೂಪಾಂತರಗಳು 5-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟಲ್ ಕನ್ಸೋಲ್, ಎಲ್ಇಡಿ ಲೈಟಿಂಗ್, ರೈಡ್ ಅನಾಲಿಟಿಕ್ಸ್, ನ್ಯಾವಿಗೇಷನ್, ಜಿಯೋಫೆನ್ಸಿಂಗ್, ಕ್ರ್ಯಾಶ್ ಡಿಟೆಕ್ಷನ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿವೆ. ಸುರಕ್ಷತೆ ಸಲುವಾಗಿ ಡಿಸ್ಕ್ ಬ್ರೇಕ್‌ಗಳು ಮತ್ತು ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








