Ola: ಲೀಕ್ ಆಗಿದೆ ಹೊಸ ಓಲಾ ಎಲೆಕ್ಟ್ರಿಕ್ ಬೈಕ್ ಡಿಸೈನ್: ಹಲವು ವಿಶೇಷತೆಗಳು ಬಹಿರಂಗ!
ಬೆಂಗಳೂರು ಮೂಲದ ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಓಲಾ ಎಲೆಕ್ಟ್ರಿಕ್, ಸದ್ಯ ಇವಿ ವಾಹನ ಮಾರಾಟದಲ್ಲಿ ದೇಶದ ನಂ.1 ಸ್ಥಾನದಲ್ಲಿದೆ. ಬ್ಯಾಟರಿ ಸಂಬಂಧಿತ ದೂರುಗಳು, ಕಳಪೆ ಗುಣಮಟ್ಟ, ಸರ್ವಿಸ್ ಲೋಪ ಹೀಗೆ ಹಲವು ದೂರುಗಳ ನಡುವೆಯೂ ಕಂಪನಿ ಒಂದೊಂದನ್ನೇ ಸುಧಾರಿಸುತ್ತಾ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ನಿರ್ಮಾಣದಲ್ಲಿ ತೊಡಗಿದೆ.
ಓಲಾ ಎಲೆಕ್ಟ್ರಿಕ್ ಭವಿಷ್ಯಕ್ಕಾಗಿ ದೊಡ್ಡ ಯೋಜನೆಗಳನ್ನೇ ಹೊಂದಿದ್ದು, ಇದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಪ್ರಮುಖವಾಗಿದೆ. ಕಂಪನಿಯು ಒಂದು ವರ್ಷದ ಹಿಂದೆಯೇ ಈ ಬಗ್ಗೆ ಪ್ರಕಟಣೆಗಳನ್ನು ನೀಡಿತ್ತು. ಅವುಗಳಲ್ಲಿ ಕೆಲವು ಕಾನ್ಸೆಪ್ಟ್ ಮಾಡಲ್‌ಗಳನ್ನು ಅನಾವರಣಗೊಳಿಸಿತ್ತು. ಆದರೆ ಈವರೆಗೆ ಅವುಗಳ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಓಲಾ ಪರಿಚಯಿಸಲು ಯೋಜಿಸಿರುವ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳಲ್ಲಿ ಒಂದರ ವಿನ್ಯಾಸ ಪೇಟೆಂಟ್ ಸೋರಿಕೆಯಾಗಿದೆ. ಈ ಓಲಾ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ನ ಚಿತ್ರಗಳು ಎಂಟ್ರಿ ಲೆವೆಲ್ ಬೈಕ್ ಆಗಿರಬಹುದು ಎಂದು ಸೂಚಿಸುತ್ತಿದ್ದು, ಹಾರ್ಡ್ ವೇರ್ ಮತ್ತು ಇತರ ವಿವರಗಳಿಂದ ಇದು ಸ್ಪಷ್ಟವಾಗಿದೆ.

ಸೋರಿಕೆಯಾದ ಚಿತ್ರಗಳ ಪ್ರಕಾರ, ಮುಂಬರಲಿರುವ ಹೊಸ ಓಲಾ ಎಲೆಕ್ಟ್ರಿಕ್ ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದ್ರೆ ಹೆಚ್ಚಾಗಿ ಫ್ಲಾಟ್ ಪ್ಯಾನೆಲ್‌ಗಳು ಮತ್ತು ತೀಕ್ಷ್ಣವಾದ ಕ್ರೀಸ್ ಲೈನ್‌ಗಳೊಂದಿಗೆ ಫ್ಯೂಚಿರಿಸ್ಟಿಕ್ ಆಗಿ ಕಾಣುತ್ತಿದೆ. ಎರ್ಗೊನಾಮಿಕ್ಸ್‌ಗೆ ಸಂಬಂಧಿಸಿದಂತೆ, ಇದು ಸಿಂಗಲ್ ಪೀಸ್ ಸೀಟ್ ಮತ್ತು ನೇರವಾದ ಸವಾರಿ ಸ್ಥಾನವನ್ನು ಹೊಂದಿದೆ.
ಈ ಎಲೆಕ್ಟ್ರಿಕ್ ಬೈಕ್ 17 - ಇಂಚಿನ ಅಲಾಯ್ ವೀಲ್‌ಗಳಂತೆ ಕಾಣುವ ಟೈರ್‌ಗಳನ್ನು ಹೊಂದಿದೆ. ಇದರ ಗಾತ್ರವು ಸಾಮಾನ್ಯ ಇಂಧನ ಚಾಲಿತ ಪ್ರಯಾಣಿಕ ವಾಹನಗಳಂತೆಯೇ ಕಾಣುತ್ತಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ವಿಶೇಷವಾಗಿ ದಕ್ಷತೆ(Efficiency)ಯು ಅತ್ಯಂತ ಮಹತ್ವದ ಪಾತ್ರ ವಹಿಸುವುದರಿಂದ ಇದಕ್ಕೆ ನೀಡಲಾದ ಕಿರಿದಾದ ಟೈರ್‌ಗಳು ಹೆಚ್ಚಿನ ರೇಂಜ್ ನೀಡಲು ಸಹಕರಿಸಬಹುದು.

ಚಿತ್ರಗಳಲ್ಲಿ ಕಾಣುವಂತೆ ಬ್ಯಾಟರಿ ಮತ್ತು ಮೋಟರ್ ಅನ್ನು ಒಂದೇ ಘಟಕದಲ್ಲಿ ಇರಿಸಲಾಗಿದೆ ಎಂದು ತೋರುತ್ತಿದೆ. ಈ ಮೋಟಾರ್‌ಸೈಕಲ್‌ನಲ್ಲಿ ತೂಕವನ್ನು ಓಲಾ ಹೇಗೆ ಸರಿದೂಗಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬೈಕಿನ ಪರ್ಫಾಮೆನ್ಸ್ ಮತ್ತು ರೇಂಜ್ ಬಗ್ಗೆ ಇನ್ನೂ ಮಾಹಿತಿ ತಿಳಿದಿಲ್ಲ. ಆದರೆ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಹೋಗುವ ಅದೇ ವೇಗದ ಸಾಮರ್ಥ್ಯವನ್ನು ಈ ಎಲೆಕ್ಟ್ರಿಕ್ ಬೈಕ್ ಹೊಂದಿರುತ್ತದೆ. ಅಂದರೇ ಕನಿಷ್ಠ 100 ಕಿ.ಮೀ ವೇಗವನ್ನು ಹೊಡೆಯುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಬ್ಯಾಟರಿಯು ಯೋಗ್ಯ ರೇಂಜ್ ನೀಡಬೇಕು ಮತ್ತು ಅದನ್ನು ವೇಗವಾಗಿ ಚಾರ್ಜ್ ಮಾಡುವ ಅವಕಾಶವೂ ಇರಬಹುದು.
ಈ ಬೈಕ್ ಹಿಂಭಾಗದಲ್ಲಿ ಸಾಂಪ್ರದಾಯಿಕ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ. ಸರಳವಾದ ಬಾಕ್ಸ್ - ಸೆಕ್ಷನ್ ಸ್ವಿಂಗ್ ಆರ್ಮ್ ಅನ್ನು ಸಹ ಇಲ್ಲಿ ಕಾಣಬಹುದು. ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನಲ್ಲಿ ಓಲಾ ಹೊಸ ಎಲೆಕ್ಟ್ರಿಕ್ ಮೋಟರ್ ಮತ್ತು ಬ್ಯಾಟರಿಯನ್ನು ಅಳವಡಿಸುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಇಂಧನ ಚಾಲಿತ ವಾಹನಗಳಲ್ಲಿ ಕಾಣುವ ಎಂಜಿನ್ ಜಾಗದಲ್ಲಿ ಓಲಾ ಬ್ಯಾಟರಿಯನ್ನು ಇಡಬಹುದು.

ಓಲಾ ಎಲೆಕ್ಟ್ರಿಕ್' ಭಾರತದಲ್ಲಿ ಈ ಎಲೆಕ್ಟ್ರಿಕ್ ಬೈಕ್ ಅನ್ನು ಯಾವಾಗ ಬಿಡುಗಡೆ ಮಾಡಲು ಯೋಜಿಸಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಇದು ಬಿಡುಗಡೆಯಾದ್ರೆ, ಪ್ರಸ್ತುತ ಮಾರಾಟದಲ್ಲಿರುವ ಟಾರ್ಕ್ ಕ್ರಾಟೋಸ್ ಆರ್ (Tork Kratos R) ಮತ್ತು ರಿವೋಲ್ಟ್ ಆರ್‌ವಿ 400 (Revolt RV400)ಗೆ ಪೈಪೋಟಿ ನೀಡಲಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








