ಬಡವರ ಬಂಡಿ.. ಹೀರೋ ಸ್ಪ್ಲೆಂಡರ್ ಪ್ರತಿಸ್ಪರ್ಧಿ 2025ರ ಹೋಂಡಾ ಶೈನ್ 100 ಬೈಕ್ ಬಿಡುಗಡೆ.. ಅತಿ ಕಡಿಮೆ ಬೆಲೆ!
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂಬಿಕಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಂದು 2025ರ ಹೊಚ್ಚ ಹೊಸ ಶೈನ್ 100 (Shine 100) ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಈ ಬೈಕ್, ಕಾರ್ಯಕ್ಷಮತೆ ಹಾಗೂ ವಿನ್ಯಾಸದಲ್ಲಿ ಕೆಲವೊಂದು ಸಣ್ಣ - ಪುಟ್ಟ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಅದ್ದೂರಿಯಾಗಿಯೂ ಮಾರಾಟಕ್ಕೆ ಬಂದಿದೆ. ಬನ್ನಿ.. ಈ ನೂತನ ಮೋಟಾರ್‌ಸೈಕಲ್‌ನ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ.
ಹೊಸ ಹೋಂಡಾ ಶೈನ್ 100 (Honda Shine 100) ಬೈಕ್, ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಯಾಗಿದೆ. ಇದು ರೂ.68,767 ಎಕ್ಸ್-ಶೋರೂಂ (ನವದೆಹಲಿ) ದರವನ್ನು ಪಡೆದಿದ್ದು, ಮಧ್ಯಮ ವರ್ಗದ ಜನರು ತಮ್ಮ ದಿನನಿತ್ಯದ ಬಳಕೆಗಾಗಿ ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ.

ಈ ಬೈಕ್, ಬಹುತೇಕ ಹಳೆಯ ಮಾಡೆಲ್‌ನಂತೆಯೇ ವಿನ್ಯಾಸವನ್ನು ಹೊಂದಿದೆ. ಆದರೆ, ಸ್ಟೈಲಿಂಗ್ ಸಲುವಾಗಿ ಹೊಸದಾಗಿರುವ 'ಗ್ರಾಫಿಕ್ಸ್'ನ್ನು ಪಡೆದಿದೆ. ಬ್ಲ್ಯಾಕ್ ವಿತ್ ರೆಡ್, ಬ್ಲ್ಯಾಕ್ ವಿತ್ ಬ್ಲೂ, ಬ್ಲ್ಯಾಕ್ ವಿತ್ ಆರೆಂಜ್, ಬ್ಲ್ಯಾಕ್ ವಿತ್ ಗ್ರೇ ಮತ್ತು ಬ್ಲ್ಯಾಕ್ ವಿತ್ ಗ್ರೀನ್ ಎಂಬ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.
ನೂತನ ಹೋಂಡಾ ಶೈನ್ 100 ಮೋಟಾರ್‌ಸೈಕಲ್ ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ಮೇಲ್ದರ್ಜೆರಿಸಿದ 98.98 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 7,500 ಆರ್‌ಪಿಎಂನಲ್ಲಿ 7.28 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 5,000 ಆರ್‌ಪಿಎಂನಲ್ಲಿ 8.04 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 65 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ.

ಈ ಶೈನ್ 100 ಬೈಕ್, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಬಲ್ಬ್ ಟರ್ನ್ ಇಂಡಿಕೇಟರ್‌ಗಳು, ಟ್ವಿನ್ - ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ - ಸ್ಟ್ಯಾಂಡ್ ಸೆನ್ಸರ್, ಸಿಂಗಲ್ - ಪೀಸ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಹೋಂಡಾ ಶೈನ್ 100 ಮೋಟಾರ್‌ಸೈಕಲ್ ಸವಾರರ ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಇದರೊಟ್ಟಿಗೆ ಡ್ರಮ್ ಬ್ರೇಕ್‌ಗಳನ್ನು ಹೊಂದಿದ್ದು, ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ.
2025ರ ಹೋಂಡಾ ಶೈನ್ 125 ಮೋಟಾರ್‌ಸೈಕಲ್ ಕೂಡ ಖರೀದಿಗೆ ಲಭ್ಯ: ಇದು ರೂ.84,493 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 123.94 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 55 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications