Bajaj: ಬಿಡುಗಡೆಗೂ ಮೊದಲೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ ಬಜಾಜ್ ಪಲ್ಸರ್ ಬೈಕ್.. ಬೆಲೆಯೂ ಅಗ್ಗ! ವಿಶೇಷತೆಗಳೇನು?
ಬಜಾಜ್ ಪಲ್ಸರ್ (Bajaj Pulsar) ಜನಪ್ರಿಯ ಮೋಟಾರ್‌ಸೈಕಲ್ ಆಗಿದ್ದು, ಹಲವು ವಿಧದಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಸದ್ಯ ಈ ಬೈಕ್‌ನ ಲೈನ್ಅಪ್‌ನ್ನು ಕಂಪನಿಯು ವಿಸ್ತರಿಸುತ್ತಿದೆ. ನವೀಕರಿಸಿದ 'ಪಲ್ಸರ್ 150'ನ್ನು ಬಿಡುಗಡೆಗೊಳಿಸಲು ಕಂಪನಿಯು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನೂತನ ಮೋಟಾರ್‌ಸೈಕಲ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಿಗೆ ಸದ್ದಿಲ್ಲದೇ 2026ರ ಹೊಚ್ಚ ಹೊಸ 'ಬಜಾಜ್ ಪಲ್ಸರ್ 150' ಬೈಕ್‌ನ್ನು ತಲುಪಿಸುವ ಕಾರ್ಯಕ್ಕೆ ಕಂಪನಿಯು ಚಾಲನೆ ನೀಡಿದೆ. ಅದಕ್ಕೆ ಸಂಬಂಧಿಸಿದ ಒಂದಷ್ಟು ಪೋಸ್ಟ್‌ಗಳು ಆನ್‌ಲೈನ್‌ನಲ್ಲಿಯೂ ಕಾಣಿಸಿಕೊಂಡಿವೆ. ಈ ನೂತನ ಬೈಕ್, ಡಿಸೆಂಬರ್ 19 ರಿಂದ 20 ರವರೆಗೆ ನಡೆಯುವ ಇಂಡಿಯಾ ಬೈಕ್ ವೀಕ್ - 2025 (IBW - 2025) ಕಾರ್ಯಕ್ರಮದಲ್ಲಿ ಮಾರಾಟಕ್ಕೆ ಬರುವ ಎಲ್ಲ ಸಾಧ್ಯತೆಯಿದೆ.

ಈ ನವೀಕೃತ 'ಬಜಾಜ್ ಪಲ್ಸರ್ 150' ಮೋಟಾರ್‌ಸೈಕಲ್, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿ ದೊರೆಯುವ ನಿರೀಕ್ಷೆಯಿದೆ. ಪ್ರಸ್ತುತ ಲಭ್ಯವಿರುವ ಮಾಡೆಲ್, ರೂ.1.05 ಲಕ್ಷ (ಎಕ್ಸ್-ಶೋರೂಂ - ನವದೆಹಲಿ) ದರವನ್ನು ಪಡೆದಿದೆ. ಹೊಸ ಬೈಕ್, ರೂ.2,500 ದಿಂದ ರೂ.3,000 ಹೆಚ್ಚುವರಿ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.
2026ರ 'ಬಜಾಜ್ ಪಲ್ಸರ್ 150' ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಅದು ನೋಡುಗರ ಕಣ್ಣು ಕುಕ್ಕುವಂತಿದೆ. ಮರುವಿನ್ಯಾಸ ಮಾಡಲ್ಪಟ್ಟ ಫ್ಯಾಸಿಯಾವನ್ನು ಪಡೆದಿದ್ದು, ಹೊಸದಾದ ಗ್ರಾಫಿಕ್ಸ್ ಕೂಡ ಇದೆ. ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್ ಲ್ಯಾಂಪ್ ಹಾಗೂ ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಒಳಗೊಂಡಿದೆ. ಜೊತೆಗೆ ಆಕರ್ಷಕವಾದ ಬಣ್ಣಗಳ ಆಯ್ಕೆಯಲ್ಲಿಯೂ ಸಿಗಬಹುದು ಎನ್ನಲಾಗಿದೆ.
ನೂತನ ಬೈಕ್ ಪವರ್‌ಟ್ರೇನ್‌ನಲ್ಲಿ ಯಾವುದೇ ಬದಲಾವಣಿಗಳಿರುವುದಿಲ್ಲ. 149.5 ಸಿಸಿ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದೆ. 14 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 13 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಒಳಗೊಂಡಿರಲಿದೆ. 5-ಗೇರ್‌ಬಾಕ್ಸ್‌ನ್ನು ಪಡೆದಿರಲಿದೆ. 46 ರಿಂದ 50 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡಬಹುದು ಎಂದು ಹೇಳಲಾಗಿದೆ.
ಈ ಮೋಟಾರ್‌ಸೈಕಲ್ 2,055 ಮಿ.ಮೀ ಉದ್ದ, 765 ಮೀ.ಮೀ ಅಗಲ ಹಾಗೂ 1,060 ಮೀ.ಮೀ ಎತ್ತರವಿದೆ. 165 ಮೀ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,320 ಮಿಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸೀಟ್ ಎತ್ತರವು 785 ಮೀ.ಮೀ ಇದೆ. ಬರೋಬ್ಬರಿ 148 ಕೆಜಿ ತೂಕವಿದೆ.
ಇದರಲ್ಲೂ ಈಗಿರುವ ಮಾಡೆಲ್‌ನಂತೆ 'ಎಲ್‌ಸಿಡಿ ಕನ್ಸೋಲ್' ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹಾಗೆಯೇ ಮುಂದುವರಿಸುವ ಸಾಧ್ಯತೆಯಿದೆ. 17 ಇಂಚಿನ ಅಲಾಯ್ ವೀಲ್‌ಗಳು ಹಾಗೂ 90/ 110 ಸೆಕ್ಷನ್ ಟೈರ್‌ಗಳನ್ನು ಒಳಗೊಂಡಿದೆ. 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಹೊಸ 2026ರ 'ಬಜಾಜ್ ಪಲ್ಸರ್ 150' ಬೈಕ್ ಸವಾರರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) 31 ಮಿ.ಮೀ ಟೆಲಿಸ್ಕೋಪಿಕ್ ಪೋರ್ಕ್ ಹಾಗೂ ಹಿಂಭಾಗ (ರೇರ್) ಕ್ಯಾನಿಸ್ಟರ್ & ಪ್ರಿಲೋಡ್ ಅಡ್ಜಸ್ಟರ್‌ನೊಂದಿಗೆ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಂಗಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ, ನೂತನ 'ಬಜಾಜ್ ಪಲ್ಸರ್ 150' ಮೋಟಾರ್‌ಸೈಕಲ್ ಬಿಡುಗಡೆಯಾಗುತ್ತಿದೆ ಎಂಬ ವಿಚಾರವು ದೇಶೀಯ ಗ್ರಾಹಕರಿಗೆ ಹೆಚ್ಚಿನ ಸಂತಸವನ್ನು ತಂದಿದೆ. ಇದು ಅತುತ್ತಮವಾಗಿದ್ದು, ವಿವಿಧ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಈ ಬೈಕ್ ಮಾರಾಟಕ್ಕೆ ಬಂದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








