330 Km ಮೈಲೇಜ್.. 90,000 ಬೆಲೆ, ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್ ಮಾರಾಟದಲ್ಲಿ ನೂತನ ದಾಖಲೆ!
ಬಜಾಜ್ ಫ್ರೀಡಂ 125 (Bajaj Freedom 125) ವಿಶ್ವದ ಮೊದಲ ಸಿಎನ್‌ಜಿ ಮೋಟಾರ್‌ಸೈಕಲ್ ಆಗಿದೆ. ಇದು ಹೆಚ್ಚು ಅತ್ಯಾಧುನಿಕವಾದ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿ ಸಿಗುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದಕ್ಕೆ ತಕ್ಕಂತೆ ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಬಜಾಜ್ ಕಂಪನಿಯು ಇದೇ ಫ್ರೀಡಂ ಬೈಕ್ ಮಾರಾಟದಲ್ಲಿ ಹೊಸದೊಂದು ದಾಖಲೆಯನ್ನು ನಿರ್ಮಿಸಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ವಾಹನ್ ಪೋರ್ಟಲ್ ಪ್ರಕಾರ, ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಆಟೋ ಬರೋಬ್ಬರಿ 50,047 ಯುನಿಟ್ 'ಫ್ರೀಡಂ' ಸಿಎನ್‌ಜಿ ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. ಈ ಮೂಲಕ ನೂತನ ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ. 2024ರ ಜುಲೈ 5 ರಂದು ಈ ಬೈಕ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. 9 ತಿಂಗಳು ಕಳೆಯುವ ಮೊದಲೇ ಅರ್ಧ ಲಕ್ಷ ಮಾರಾಟಗೊಂಡ ಬೈಕ್ ಎಂಬ ಖ್ಯಾತಿಗೂ ಪಾತ್ರವಾಗಿದೆ.

ರಾಜ್ಯವಾರು ಮಾರಾಟ ವಿವರ: ದೇಶದ ಪ್ರಮುಖ 10 ರಾಜ್ಯಗಳಲ್ಲಿ ಈ ಬಜಾಜ್ ಫ್ರೀಡಂ 125 ಸಿಎನ್‌ಜಿ ಮೋಟಾರ್‌ಸೈಕಲ್ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಅದರಲ್ಲಿ ಮಹಾರಾಷ್ಟ್ರ 9,591 ಯುನಿಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದೆ. 8,797 ಯುನಿಟ್ ಮಾರಾಟಗೊಳಿಸುವ ಮೂಲಕ ಗುಜರಾತ್ ಎರಡನೇ ಸ್ಥಾನದಲ್ಲಿದೆ.
ಉಳಿದಂತೆ ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶ (5,428 ಯುನಿಟ್), ನಾಲ್ಕನೇ ಸ್ಥಾನದಲ್ಲಿ ಮಧ್ಯಪ್ರದೇಶ (4,647 ಯುನಿಟ್), ಐದನೇ ಸ್ಥಾನದಲ್ಲಿ ಕರ್ನಾಟಕ (3,540 ಯುನಿಟ್) ರಾಜ್ಯವಿದೆ. ಆ ನಂತರದ ಆರನೇ ಸ್ಥಾನದಲ್ಲಿ ರಾಜಸ್ಥಾನ (3,276 ಯುನಿಟ್), ಏಳನೇ ಸ್ಥಾನದಲ್ಲಿ ನವ ದೆಹಲಿ (3,160 ಯುನಿಟ್‌ಗಳು), ಎಂಟನೇ ಸ್ಥಾನದಲ್ಲಿ ಬಿಹಾರ (2,404 ಯುನಿಟ್), ಒಂಬತ್ತನೇ ಸ್ಥಾನದಲ್ಲಿ ಹರಿಯಾಣ (2,289 ಯುನಿಟ್) ಹಾಗೂ ಹತ್ತನೇ ಸ್ಥಾನದಲ್ಲಿ ತಮಿಳುನಾಡು (2,147 ಯುನಿಟ್) ಇದೆ.
ಬಜಾಜ್ ಫ್ರೀಡಂ 125 ವಿಶೇಷತೆಗಳೇನು: ಈ ಸಿಎನ್‌ಜಿ ಬೈಕ್ ರೂ.90,272 ರಿಂದ ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಡ್ರಮ್, ಡ್ರಮ್ ಎಲ್ಇಡಿ & ಡಿಸ್ಕ್ ಎಲ್ಇಡಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ರೇಸಿಂಗ್ ರೆಡ್ ಹಾಗೂ ಸೈಬರ್ ವೈಟ್ ಒಳಗೊಂಡಂತೆ ವಿವಿಧ ಬಣ್ಣಗಳ ಆಯ್ಕೆಯನ್ನು ಪಡೆದಿದೆ.
ನೂತನ ಬಜಾಜ್ ಫ್ರೀಡಂ ಮೋಟಾರ್‌ಸೈಕಲ್, 125 ಸಿಸಿ ಸಾಮರ್ಥ್ಯದ ಏರ್-ಕೂಲ್ಡ್ ಸಿಂಗಲ್-ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್‌ನ್ನು ಹೊಂದಿದೆ. ಇದರೊಟ್ಟಿಗೆ 5-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, ತಲಾ 2 ಲೀಟರ್/ ಕೆಜಿಯ ಪೆಟ್ರೋಲ್ & ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಒಟ್ಟಾರೆಯಾಗಿ 330 ಕಿ.ಮೀ ಮೈಲೇಜ್ ನೀಡುತ್ತದೆ.
ಈ ಹೊಸ ಫ್ರೀಡಂ 125 ಬೈಕ್ ಎಲ್ಇಡಿ ಹೆಡ್‌ಲೈಟ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಎಲ್‌ಸಿಡಿ ಡಿಸ್‌ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ನ್ನು ಪಡೆದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








