ನಂಬರ್ 3.. ಆದ್ರೂ ಜನಪ್ರಿಯ Bajaj Pulsar ಬೈಕ್‌ನ್ನು ಖರೀದಿಸಲು ಗ್ರಾಹಕರು ಒಲ್ಲೆ ಎನ್ನುತ್ತಿದ್ದಾರೆ.. ಯಾಕೆ?
ಬಜಾಜ್ ಪಲ್ಸರ್ (Bajaj Pulsar) ವಿಶ್ವಾಸಾರ್ಹ ಮೋಟಾರ್‌ಸೈಕಲ್ ಆಗಿದ್ದು, ಯುವಜನರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಬೈಕ್‌ನ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಎಲ್ಲರಿಗೂ ಇಷ್ಟವಾಗುತ್ತದೆ. ಇತ್ತೀಚೆಗೆ 'ಮೇ' ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಮೋಟಾರ್‌ಸೈಕಲ್‌ಗಳ ಪಟ್ಟಿ ಪ್ರಕಟಗೊಂಡಿದ್ದು, 'ಪಲ್ಸರ್' 3ನೇ ಸ್ಥಾನದಲ್ಲಿದೆ. ಆದರೂ ಮಾರಾಟ ಸಂಖ್ಯೆ ಕುಸಿತವಾಗಿದೆ. ಇದೇ ಪಟ್ಟಿಯಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದರೆ, ಹೋಂಡಾ ಶೈನ್ ಎರಡನೇ ಸ್ಥಾನದಲ್ಲಿದೆ.
ಕಳೆದ ತಿಂಗಳು (ಮೇ-2025) ಬಜಾಜ್ ಆಟೋ ಕಂಪನಿಯು ಒಟ್ಟು 1,22,151 ಯುನಿಟ್ 'ಪಲ್ಸರ್' ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. 2024ರ ಮೇ ತಿಂಗಳಲ್ಲಿ 1,49,054 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಯನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ -4.93% ಇಳಿಕೆಯಾಗಿದೆ.

ಬಜಾಜ್ ಪಲ್ಸರ್ ಬೈಕ್ ಮಾರಾಟ ಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಕಂಪನಿಯು ಯಾವುದೇ ಸ್ಪಷ್ಟವಾದ ಕಾರಣವನ್ನು ಬಹಿರಂಗಪಡಿಸಲ್ಲ. ಆದರೂ, ಈ ಮೋಟಾರ್‌ಸೈಕಲ್‌ಗಳ ಬೆಲೆ ಕೊಂಚ ಹೆಚ್ಚಿರುವುದರಿಂದ ಗ್ರಾಹಕರು ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಪಲ್ಸರ್‌ನಂತೆಯೇ ಅತ್ಯಾಕರ್ಷಕವಾಗಿರುವ ಬೈಕ್‌ಗಳನ್ನು ಇತರೆ ಕಂಪನಿಗಳು ಕೂಡ ಮಾರಾಟಗೊಳಿಸುತ್ತಿವೆ. ಖರೀದಿದಾರರು ಅವುಗಳತ್ತ ಮುಖ ಮಾಡಿದ್ದಾರೆ. ಹೀಗಾಗಿ, ಪಲ್ಸರ್ ಮಾರಾಟ ಸಂಖ್ಯೆ ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ ಮೋಟಾರ್‌ಸೈಕಲ್ ಹಲವು ವಿಧದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಅವುಗಳಲ್ಲಿ ಪಲ್ಸರ್ 125, ಪಲ್ಸರ್ 150, ಪಲ್ಸರ್ ಎನ್160, ಪಲ್ಸರ್ ಎನ್ಎಸ್200, ಪಲ್ಸರ್ ಎನ್ಎಸ್125 ಹಾಗೂ ಪಲ್ಸರ್ ಎನ್ಎಸ್160 ಮಾಡೆಲ್‌ಗಳು ಹೆಚ್ಚು ಜನಮನ್ನಣೆ ಗಳಿಸಿವೆ.

ಬಜಾಜ್ ಪಲ್ಸರ್ 125 (Bajaj Pulsar 125):
ಇದು ರೂ.85,178 (ಎಕ್ಸ್-ಶೋರೂಂ) ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. 124.4 ಸಿಸಿ ಸಿಂಗಲ್-ಸಿಲಿಂಡರ್, ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 51 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಫುಲ್ ಡಿಜಿಟಲ್ ಕನ್ಸೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಬಜಾಜ್ ಪಲ್ಸರ್ 150 (Bajaj Pulsar 150):
ಈ ಬೈಕ್ ರೂ.1.13 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 149.5 ಸಿಸಿ ಸಿಂಗಲ್-ಸಿಲಿಂಡರ್, ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 47 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಸಿಂಗಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಬಜಾಜ್ ಪಲ್ಸರ್ ಎನ್160 (Bajaj Pulsar N160):
ಇದು ರೂ.1.32 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 164.82 ಸಿಸಿ ಸಿಂಗಲ್-ಸಿಲಿಂಡರ್, ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 59.11 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಬಜಾಜ್ ಪಲ್ಸರ್ ಎನ್ಎಸ್200 (Bajaj Pulsar NS200):
ಈ ಮೋಟಾರ್‌ಸೈಕಲ್ ರೂ.1.58 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 199 ಸಿಸಿ ಪೆಟ್ರೋಲ್ ಎಂಜಿನ್ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 40.36 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications








