ಬಿಡುಗಡೆಯಾಗಿ ಕೇವಲ 18 ತಿಂಗಳಷ್ಟೇ.. ಗ್ರಾಹಕರು ಖರೀದಿಸುತ್ತಿಲ್ಲ, ಹೀರೋದ ಈ ಜನಪ್ರಿಯ ಬೈಕ್‌ನ ಮಾರಾಟ ಸ್ಥಗಿತ?
ಹೀರೋ ಮೋಟೋಕಾರ್ಪ್ (Hero MotoCorp) ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನದೇಯಾದ ಛಾಪನ್ನು ಮೂಡಿಸಲು ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿ ಅಮೆರಿಕದ ಹಾರ್ಲೆ-ಡೇವಿಡ್ಸನ್ (Harley-Davidson) ಪಾಲುದಾರಿಕೆಯಲ್ಲಿ 'ಮಾವ್ರಿಕ್ 440' ಹೆಸರಿನ ಬೈಕ್‌ನ್ನು ಅಭಿವೃದ್ಧಿಪಡಿಸಿತ್ತು. ಇದನ್ನು 2024ರ ಆರಂಭದಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಅದ್ದೂರಿಯಾಗಿ ಮಾರಾಟಕ್ಕೆ ತರಲಾಗಿತ್ತು. ಆದರೂ ಗ್ರಾಹಕರನ್ನು ಸೆಳೆಯುವಲ್ಲಿ ಅಂದುಕೊಂಡ ಮಟ್ಟಿಗೆ ಸಫಲವಾಗಿಲ್ಲ.
ಹೀರೋ ಮಾವ್ರಿಕ್ 440 (Hero Mavrick 440) ಮೋಟಾರ್‌ಸೈಕಲ್‌ನ್ನು ದಿನದಿಂದ ದಿನಕ್ಕೆ ಖರೀದಿ ಮಾಡಲು ಗ್ರಾಹಕರು ಕೂಡ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಬಿಡುಗಡೆಯಾಗಿ ಕೇವಲ 18 ತಿಂಗಳಾಗಿದ್ದರೂ ಈ ಬೈಕ್‌ನ ಮಾರಾಟವನ್ನು ಸ್ಥಗಿತಗೊಳಿಸಲು ಕಂಪನಿಯು ತೀರ್ಮಾನಿಸಿದೆ ಎಂದು ವರದಿಯಾಗಿದೆ. ಕಳೆದ 3 ತಿಂಗಳಿನಿಂದಲೂ ಕಂಪನಿಯು ಯಾವುದೇ ಮಾವ್ರಿಕ್ 440 ಮೋಟಾರ್‌ಸೈಕಲ್‌ನ್ನು ತಯಾರಿಕೆಯು ಮಾಡಿಲ್ಲ ಎನ್ನಲಾಗಿದೆ.

ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳಲ್ಲಿ 'ಹೀರೋ ಮಾವ್ರಿಕ್ 440' ಬೈಕ್‌ಗಾಗಿ ಕಂಪನಿಯು ಬುಕ್ಕಿಂಗ್ ಪಡೆಯುವುದನ್ನು ನಿಲ್ಲಸಿದೆ ಎಂದು ಹೇಳಲಾಗಿದೆ. 2024ರ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ಒಟ್ಟು 3,214 ಯುನಿಟ್ ಮಾವ್ರಿಕ್ 440 ಮೋಟಾರ್‌ಸೈಕಲ್‌ನ್ನು ಮಾರಾಟ ಮಾಡಲಾಗಿತ್ತು. ಅದೇ ರೀತಿಯಲ್ಲಿ 2025ರ ಜನವರಿಯ ಹೊತ್ತಿಗೆ ಕೇವಲ 50 ಯುನಿಟ್‌ಗಳನ್ನು ಮಾರಲಾಗಿದೆ. ಏಪ್ರಿಲ್‌ನಿಂದ ಒಂದೇ ಒಂದು ಬೈಕ್ ಮಾರಾಟಗೊಂಡಿಲ್ಲ.
ಹೀರೋ ಮಾವ್ರಿಕ್ 440 ವಿಶೇಷತೆಗಳೇನು:
ಇದು ಹಾರ್ಲೆ-ಡೇವಿಡ್ಸನ್ ಎಕ್ಸ್440 (Harley-Davidson X440) ಮೋಟಾರ್‌ಸೈಕಲ್ ಆಧಾರಿತವಾಗಿದ್ದು, ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಿದೆ. ರೂ.2.60 ಲಕ್ಷದಿಂದ ರೂ.2.91 ಲಕ್ಷ (ಎಕ್ಸ್-ಶೋರೂಂ - ಬೆಂಗಳೂರು) ದರವನ್ನು ಪಡೆದಿದೆ. ಬೇಸ್, ಮಿಡ್ ಹಾಗೂ ಟಾಪ್ ಎಂಬ ಮೂರು ವಿಧದಲ್ಲಿ ಲಭ್ಯವಿದೆ.
ಈ ಬೈಕ್ ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದ್ದು, ರೆಟ್ರೋ ಲುಕ್‌ನ್ನು ಒಳಗೊಂಡಿದೆ. ಮುಸ್ಕ್ಯುಲರ್ ಫ್ಯುಯೆಲ್ ಟ್ಯಾಂಕ್, ಪ್ರೊಜೆಕ್ಟರ್ ಹೆಡ್‌ಲೈಟ್, ರೌಂಡ್ ಇಂಡಿಕೇಟರ್ ಹಾಗೂ 'ಹೆಚ್' ಆಕಾರಕ್ಕೆ ಹೋಲಿಕೆಯಾಗಲ್ಲ ಡಿಆರ್‌ಎಲ್‌ಗಳನ್ನು ಪಡೆದಿದೆ. ಆರ್ಕ್ಟಿಕ್ ವೈಟ್, ಫಿಯರ್ಲೆಸ್ ರೆಡ್, ಸೆಲೆಸ್ಟಿಯಲ್ ಬ್ಲೂ, ಫ್ಯಾಂಟಮ್ ಬ್ಲ್ಯಾಕ್ ಹಾಗೂ ಎನಿಗ್ಮಾ ಬ್ಲ್ಯಾಕ್ ಎಂಬ 5 ಬಣ್ಣಗಳನ್ನು ತನ್ನದಾಗಿಸಿಕೊಂಡಿದೆ.
ನೂತನ ಮಾವ್ರಿಕ್ 440 ಬೈಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 440 ಸಿಸಿ ಆಯಿಲ್/ ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 26 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 37 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 32 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ಇದು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದಿದೆ. ಡಿಜಿಟಲ್ ಸ್ಪೀಡೋಮೀಟರ್, ಟೈಪ್-ಸಿ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಸ್ಪ್ಲಿಟ್ ಸೀಟ್‌ನ್ನು ಹೊಂದಿದೆ. 2100 ಎಂಎಂ ಉದ್ದ, 868 ಎಂಎಂ ಅಗಲ ಹಾಗೂ 1112 ಎಂಎಂ ಎತ್ತರವು ಇದೆ. 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1388 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 191 ಕೆಜಿ ತೂಕವಿದ್ದು, 13.5 ಲೀಟರ್ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ.
ಈ ಮೋಟಾರ್‌ಸೈಕಲ್ ಸುರಕ್ಷತೆಗೂ ಹೆಸರುವಾಸಿಯಾಗಿದೆ. ಮುಂಭಾಗ (ಫ್ರಂಟ್) 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗ (ರೇರ್) 7-ಸ್ಟೆಪ್ ಅಡ್ಜಸ್ಟೇಬಲ್ ಟ್ವಿನ್ ಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡುಯಲ್ ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಬಲ್ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ. ಇದಕ್ಕೆ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್‌ಗಳು ಪ್ರಬಲವಾದ ಎದುರಾಳಿಯಾಗಿವೆ.


Click it and Unblock the Notifications








