ಜುಲೈ 1ಕ್ಕೆ ಹೊಸ Hero Electric Scooter ಬಿಡುಗಡೆ.. ರೂ.65,000 ಬೆಲೆ, 100+ Km ರೇಂಜ್?
ಬಹುನಿರೀಕ್ಷಿತ ಹೀರೋ ವಿಡಾ ವಿಎಕ್ಸ್2 (Hero Vida VX2) ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದು ಜುಲೈ 1 ರಂದು ಮಾರಾಟಕ್ಕೆ ಬರಲಿದ್ದು, ಹಲವು ಹೊಸತನಗಳಿಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ. ಅತಿ ಕಡಿಮೆ ಬೆಲೆಗೂ ಲಭ್ಯವಾಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಬಹುದು ಎನ್ನಲಾಗಿದೆ. ಬನ್ನಿ, ಹೊಚ್ಚ ಹೊಸ 'ವಿಡಾ ವಿಎಕ್ಸ್2' ಇ-ಸ್ಕೂಟರ್‌ನ ಅಂದಾಜು ಬೆಲೆ ಎಷ್ಟಿರಲಿದೆ.. ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮಿಸುವ ದೂರವೆಷ್ಟು?, ಜೊತೆಗೆ ಯಾವೆಲ್ಲ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಬೆಲೆ (Price): ನೂತನ ಹೀರೋ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ಭಾರೀ ಕಡಿಮೆ ಬೆಲೆಗೆ ಮಾರಾಟಕ್ಕೆ ಬರುವ ಸಾಧ್ಯತೆಯಿದೆ. ಇದು ರೂ.65,000 ರಿಂದ ರೂ.70,000 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆಯಾಗಬಹುದು ಎಂದು ಹೇಳಲಾಗಿದೆ. ಈ ಸ್ಕೂಟರ್‌ನ್ನು ಕಂಪನಿಯು ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಯೋಜನೆಯಡಿ ಪರಿಚಯಿಸಲು ಸಜ್ಜಾಗಿದೆ.

ಬ್ಯಾಟರಿ-ಆಸ್-ಎ-ಸರ್ವಿಸ್ ಎಂದರೇನು: 'ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕೊಂಡುಕೊಳ್ಳುವ ಗ್ರಾಹಕರು, ಖಾಲಿಯಾಗಿರುವ ಬ್ಯಾಟರಿ ಪ್ಯಾಕ್‌ನ್ನು ಹೀರೋದ ಚಾರ್ಜಿಂಗ್ ಸ್ಟೇಷನ್‌ನಲ್ಲಿ ನಿಗದಿಪಡಿಸುವ ಜಾಗದಲ್ಲಿ ಇಡಬೇಕು. ಆ ಬಳಿಕ, ಮೊದಲೇ ಭರ್ತಿಯಾದ ಬ್ಯಾಟರಿ ಪ್ಯಾಕ್‌ನ್ನು ತೆಗೆದುಕೊಳ್ಳುವುದಾಗಿದೆ. ಅದಕ್ಕಾಗಿ ತಿಂಗಳಿಗೆ ಇಂತಿಷ್ಟು ಶುಲ್ಕ ವಿಧಿಸಲಾಗುತ್ತದೆ. ಗ್ರಾಹಕರು ಪಾವತಿ ಮಾಡಬೇಕಾಗುತ್ತದೆ.
ವಿನ್ಯಾಸ (Design): ಹೊಸ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್ ತುಂಬಾ ಅಚ್ಚುಕಟ್ಟಾಗಿರುವ ವಿನ್ಯಾಸವನ್ನು ಹೊಂದಿದೆ. ಈಗಾಗಲೇ ಶೋರೂಂನಲ್ಲೂ ಕಾಣಿಸಿಕೊಂಡಿದೆ. ಆ ಫೋಟೋಗಳನ್ನು ಸೂಕ್ಮವಾಗಿ ಗಮನಿಸಿದಾಗ ನೂತನ ಎಲೆಕ್ಟ್ರಿಕ್ ಸ್ಕೂಟರ್ ಎಲ್ಇಡಿ - ಹೆಡ್‌ಲ್ಯಾಂಪ್, ಸಿಗ್ನೇಚರ್ ಎಲ್ಇಡಿ ಟೈಲ್ ಲ್ಯಾಂಪ್, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು ಹಾಗೂ ಡುಯಲ್ - ಟೋನ್ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿರುವುದನ್ನು ಕೂಡ ಗುರುತಿಸಬಹುದು.

ಕಾರ್ಯಕ್ಷಮತೆ (Performance): ಈ ಎಲೆಕ್ಟ್ರಿಕ್ ಸ್ಕೂಟರ್ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. 2.2 ಮತ್ತು 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನ್ನು ಹೊಂದಿರಲಿದೆ. ಪೂರ್ತಿ ಚಾರ್ಜ್‌ನಲ್ಲಿ 100 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ನೀಡಬಹುದು ಎಂದು ಹೇಳಲಾಗಿದೆ.
ವೈಶಿಷ್ಟ್ಯಗಳು (Features): ನೂತನ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವ ನಿರೀಕ್ಷೆಯಿದೆ. ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಯುಎಸ್‌ಬಿ - ಚಾರ್ಜಿಂಗ್ ಪೋರ್ಟ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಹೊಂದಿರಬಹುದು ಎನ್ನಲಾಗಿದೆ. ಹಾಗೆಯೇ ಹಲವು ಆಕರ್ಷಕ ಬಣ್ಣಗಳೊಂದಿಗೂ ಖರೀದಿಗೆ ದೊರೆಯುವ ಎಲ್ಲ ಸಾಧ್ಯತೆಗಳಿವೆ.

ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಎಲೆಕ್ಟ್ರಿಕ್ ಸ್ಕೂಟರ್ ಸವಾರರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸಲಿದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್ - ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿರಲಿದೆ. ಇದರೊಂದಿಗೆ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿರಬಹುದು ಎಂದು ಅಂದಾಜಿಸಲಾಗಿದೆ.
ಒಟ್ಟಾರೆಯಾಗಿ, ಹೊಸ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್ ಟಿವಿಎಸ್ ಐಕ್ಯೂಬ್, ಓಲಾ ಎಸ್1 ಏರ್ ಹಾಗೂ ಬಜಾಜ್ ಚೇತಕ್‌ಗಳಿಂದ ಪ್ರಬಲವಾದ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಇದು ಕೈಗೆಟುಕುವ ಬೆಲೆಯಲ್ಲಿಯೂ ಸಿಗುವ ಸಾಧ್ಯತೆಯಿದೆ. ಹೀಗಾಗಿ, ಬಿಡುಗಡೆಯಾದ ಮೇಲೆ ದೊಡ್ಡ ಸಂಖ್ಯೆಯೂ ಮಾರಾಟವಾಗಬಹುದು. ಜೊತೆಗೆ ಕಂಪನಿಗೂ ಹೆಚ್ಚಿನ ಲಾಭ ತಂದುಕೊಂಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.


Click it and Unblock the Notifications








