Royal Enfield: ಹೊಸ ಬಣ್ಣದೊಂದಿಗೆ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?
ರಾಯಲ್ ಎನ್‌ಫೀಲ್ಡ್ ಹಂಟರ್ 350 (Royal Enfield Hunter 350) ವಿಶ್ವಾಸಾರ್ಹ ಬೈಕ್ ಆಗಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬೇಸ್ (ರೆಟ್ರೊ), ಮಿಡ್ (ಡ್ಯಾಪರ್) ಹಾಗೂ ಟಾಪ್ (ರೆಬೆಲ್) ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ. ಸದ್ಯ, ಈ ಮೋಟಾರ್‌ಸೈಕಲ್‌ನ್ನು ಹೊಸ ಬಣ್ಣದ ಆಯ್ಕೆಯಲ್ಲಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್, ನವೀನವಾದ ಗ್ರ್ಯಾಫೈಟ್ ಗ್ರೇ (Graphite Grey) ಬಣ್ಣದೊಂದಿಗೆ ಮಾರಾಟಕ್ಕೆ ಬಂದಿದ್ದು, ಮಿಡ್ (ಡ್ಯಾಪರ್) ರೂಪಾಂತರದೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಈ ಮೊದಲು ಇದೇ ರೂಪಾಂತರ ರಿಯೊ ವೈಟ್ ಮತ್ತು ಡ್ಯಾಪರ್ ಗ್ರೇ ಬಣ್ಣ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತಿತ್ತು.

ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾಗಿರುವ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್, ರೂ.1.77 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಗ್ರಾಹಕರು, ಸಮೀಪದ ಕಂಪನಿಯ ಡೀಲರ್‌ಶಿಪ್ ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು.
ಈ ಬೈಕ್‌ನ ವಿನ್ಯಾಸದಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್ ಹಾಗೂ ಎಲ್ಇಡಿ ಟರ್ನ್ ಸಿಗ್ನಲ್‌ಗಳನ್ನು ಹೊಂದಿದೆ. 2,055 ಎಂಎಂ ಉದ್ದ, 810 ಎಂಎಂ ಅಗಲ ಮತ್ತು 1,070 ಎಂಎಂ ಎತ್ತರವಿ ಕೂಡ ಇದೆ. 160 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,370 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.
ಇದು ಬಲಿಷ್ಠವಾದ ಪವರ್‌ಟ್ರೇನ್‌ನ್ನು ಹೊಂದಿದೆ. 349 ಸಿಸಿ ಜೆ-ಸಿರೀಸ್ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್, ಏರ್-ಆಯಿಲ್ ಕೂಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 6,100 ಆರ್‌ಪಿಎಂನಲ್ಲಿ 20.2 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 4,000 ಆರ್‌ಪಿಎಂನಲ್ಲಿ 27 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 36 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.
ನೂತನ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮೋಟಾರ್‌ಸೈಕಲ್ ಅನಲಾಗ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈಪ್-ಸಿ ಯುಎಸ್‌ಬಿ ಫಾಸ್ಟ್ ಚಾರ್ಜರ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಲಿಪ್-ಅಸಿಸ್ಟ್ ಕ್ಲಚ್ ಹಾಗೂ ಟ್ರಿಪ್ಪರ್ ನ್ಯಾವಿಗೇಷನ್ ಪಾಡ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. 181 ಕೆಜಿ ತೂಕವಿದ್ದು, 13-ಲೀಟರ್ ಸಾಮರ್ಥ್ಯವಿರುವ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.
ಈ ಬೈಕ್ ಮುಂಭಾಗ (ಫ್ರಂಟ್), ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) 6-ಸ್ಟೆಪ್ ಅಡ್ಜಸ್ಟಬಲ್ ಪ್ರಿಲೋಡ್ ಟ್ವಿನ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮತ್ತು ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಅಲಾಯ್ ವೀಲ್‌ಗಳು, 110/70-17" 54ಪಿ & 140/70-17" 66ಪಿ ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಇದಕ್ಕೆ ಬಜಾಜ್ ಅವೆಂಜರ್ 160 ಸ್ಟ್ರೀಟ್, ಬಜಾಜ್ ಪಲ್ಸರ್ ಎನ್ಎಸ್400ಝಡ್, ಟಿವಿಎಸ್ ರೋನಿನ್, ಜಾವಾ 350, ಬಜಾಜ್ ಡೊಮಿನಾರ್ 250, ಹಾರ್ಲೆ ಡೇವಿಡ್ಸನ್ ಎಕ್ಸ್440, ಯಮಹಾ ಎಫ್‌ಜಡ್-ಎಕ್ಸ್, ಜಾವಾ 42 ಹಾಗೂ ಬಜಾಜ್ ಅವೆಂಜರ್ ಕ್ರೂಸ್ 220 ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ. ಮುಂಬರುವ ದಿನಗಳಲ್ಲಿ ನೂತನ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಯಾಗಿರುವ ಈ 'ಹಂಟರ್ 350' ಬೈಕ್ ಭಾರೀ ಸಂಖ್ಯೆಯಲ್ಲಿಯೂ ಮಾರಾಟಗೊಂಡರೂ ಅಚ್ಚರಿಯಿಲ್ಲ.


Click it and Unblock the Notifications








