TVS: ಯುವಕರು ಕುಣಿದು ಕುಪ್ಪಳಿಸುವುದು ಪಕ್ಕಾ.. ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 ಬಿಡುಗಡೆ.. ಬೆಲೆ ಎಷ್ಟು, ಹೇಗಿದೆ?
ನಂಬಿಕೆ ಮತ್ತೊಂದು ಹೆಸರೇ ಟಿವಿಎಸ್ (TVS Motor) ಮೋಟಾರ್ ಎಂದು. ಅಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿದೆ. ಇಂದು (ಬುಧವಾರ) ನಡೆದ ಅದ್ದೂರಿ ಸಮಾರಂಭದಲ್ಲಿ ಕಂಪನಿಯು ಹೊಚ್ಚ ಹೊಸ 'ಅಪಾಚೆ ಆರ್‌ಟಿಎಕ್ಸ್ 300' ಹೆಸರಿನ ಮೋಟಾರ್‌ಸೈಕಲ್‌ನ್ನು ಬಿಡುಗಡೆಗೊಳಿಸಿದೆ. ಈ ಬೈಕ್ ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಬನ್ನಿ, ನೂತನ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಸ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 (TVS Apache RTX 300) ಬೈಕ್, ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.1.99 ಲಕ್ಷ ಹಾಗೂ ಗರಿಷ್ಠ ರೂ.2.29 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬೇಸ್, ಟಾಪ್ ಹಾಗೂ ಬಿಟಿಒ (ಬಿಲ್ಟ್ ಟು ಆರ್ಡರ್) ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಈ ಮೋಟಾರ್‌ಸೈಕಲ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ವಿಶೇಷವಾಗಿ ಯುವ ಖರೀದಿದಾರರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಕಣ್ಣಿನ ಆಕಾರಕ್ಕೆ ಹೋಲಿಕೆಯಾಗಬಲ್ಲ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು, ಟ್ಯಾಂಕ್ ಗಾರ್ಡ್, ಸ್ಪ್ಲಿಟ್ ಸೀಟ್ ಹಾಗೂ ನಕಲ್ ಗಾರ್ಡ್‌ಗಳನ್ನು ಒಳಗೊಂಡಿದೆ. ವೈಪರ್ ಗ್ರೀನ್, ಲೈಟ್ನಿಂಗ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ.
ಇದು ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 299 ಸಿಸಿ ಲಿಕ್ವಿಡ್-ಆಯಿಲ್ ಕೋಲ್ಡ್, ಸಿಂಗಲ್-ಸಿಲಿಂಡರ್ ಆರ್‌ಟಿ-ಎಕ್ಸ್‌ಡಿ4 ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 9,000 ಆರ್‌ಪಿಎಂನಲ್ಲಿ 35.5 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 7,000 ಆರ್‌ಪಿಎಂನಲ್ಲಿ 28.5 ಎನ್‌ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.
ನೂತನ ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300 ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ 5 ಇಂಚಿನ ಫುಲ್ ಕಲರ್ ಟಿಎಫ್‌ಟಿ ಡಿಸ್ಪ್ಲೇಯನ್ನು ಹೊಂದಿದೆ. ಇದು ಸ್ಪೀಡ್, ಕಾಲ್, ಎಸ್‌ಎಂಎಸ್ ಅಲರ್ಟ್, ಸೆಗ್ಮೆಂಟ್-ಫಸ್ಟ್ ಮ್ಯಾಪ್ ಮಿರರಿಂಗ್ ಹಾಗೂ ಗೋಪ್ರೋ ಕಂಟ್ರೋಲ್ ಸೇರಿದಂತೆ ಹೆಚ್ಚಿನವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ. ಜೊತೆಗೆ ಯುಎಸ್‌ಬಿ ಫೋನ್ ಚಾರ್ಜರ್ ಮತ್ತು ಬೈ-ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ನ್ನು ಪಡೆದಿದೆ.
ಈ ಮೋಟಾರ್‌ಸೈಕಲ್ ಟೂರ್, ರ‍್ಯಾಲಿ, ಅರ್ಬನ್ ಹಾಗೂ ರೈನ್ ಎಂಬ 4 ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. 180 ಕೆಜಿ ತೂಕವಿದೆ. 12.5-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಸೀಟ್ ಎತ್ತರವು 835 ಮಿ.ಮೀ ಹಾಗೂ ಗ್ರೌಂಡ್ ಕ್ಲಿಯರೆನ್ಸ್ 200 ಮಿ.ಮೀ ಇದೆ.
ಇದು ಸುರಕ್ಷತೆಗೂ ಹೆಸರುವಾಸಿಯಾಗಿದೆ. ಪ್ರಯಾಣಿಕರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) 41 ಎಂಎಂ ಇನ್ವರ್ಟೆಡ್ ಫೋರ್ಕ್ ಹಾಗೂ ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟೇಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಡುಯಲ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 3-ಲೆವೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) & 2-ಲೆವೆಲ್ ಟ್ರಾಕ್ಷನ್ ಕಂಟ್ರೋಲ್‌ನ್ನು ಒಳಗೊಂಡಿದೆ. ರಸ್ತೆಯ ಮೇಲೆ ಬಿಗಿಯಾದ ಹಿಡಿತ ಒದಗಿಸಲು 110/80-19 ಮತ್ತು 150/70-17 ಅಳತೆಯ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.
ಒಟ್ಟಾರೆ ಹೊಸ 'ಟಿವಿಎಸ್ ಅಪಾಚೆ ಆರ್‌ಟಿಎಕ್ಸ್ 300' ಬೈಕ್ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಅತಿ ಶೀಘ್ರದಲ್ಲೇ ವಿತರಣೆಗಳು ಶುರುವಾಗುವ ನಿರೀಕ್ಷೆಯಿದೆ. ಇದಕ್ಕೆ ಕೆಟಿಎಂ 250 ಅಡ್ವೆಂಚರ್, ಯೆಜ್ಡಿ ಅಡ್ವೆಂಚರ್ ಹಾಗೂ ಸುಜುಕಿ ವಿ-ಸ್ಟ್ರೋಮ್ ಎಸ್‌ಎಕ್ಸ್‌ಗಳು ಪ್ರಬಲವಾದ ಎದುರಾಳಿಯಾಗಬಲ್ಲವು. ಮುಂಬರುವ ದಿನಗಳಲ್ಲಿ ಈ ಮೋಟಾರ್‌ಸೈಕಲ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








