ರೂ.46,000.. 65 Km ಮೈಲೇಜ್, ಆದ್ರೂ ಹಳ್ಳಿಗರ ಐರಾವತ ಹೆಚ್ಚು ಮಾರಾಟ ಆಗ್ತಿಲ್ಲ.. ಯಾಕೆ?
ಟಿವಿಎಸ್ ಎಕ್ಸ್ಎಲ್ 100 (TVS XL 100) ಜನಪ್ರಿಯ ಮೊಪೆಡ್ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದಶಕಗಳಿಂದ ಯಶಸ್ವಿಯಾಗಿ ಮಾರಾಟಗೊಳಿಸಲಾಗುತ್ತಿದೆ. ಇದು ವಿಶ್ವಾಸಾರ್ಹತೆ ಹಾಗೂ ಕೈಗೆಟುಕುವ ಬೆಲೆಯಿಂದಲೇ ಮನೆ ಮಾತಾಗಿದ್ದು, ಗ್ರಾಮೀಣ ಭಾಗದ ಜನರು ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿ ಈ 'ಮೇ' ತಿಂಗಳು 'ಎಕ್ಸ್ಎಲ್' ಮಾರಾಟ ಸಂಖ್ಯೆಯು ಸ್ವಲ್ಪ ಮಟ್ಟಿಗೆ ಕುಸಿತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಮೇ-2025) ಟಿವಿಎಸ್ ಮೋಟಾರ್, ಬರೋಬ್ಬರಿ 37,264 ಯುನಿಟ್ 'ಎಕ್ಸ್ಎಲ್ 100' ಮೊಪೆಡ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. ಆದರೂ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕನಿಷ್ಠ ಪಕ್ಷ -7.75% ಇಳಿಮುಖವಾಗಿದೆ. 2024ರ ಮೇನಲ್ಲಿ 40,394 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು.

ಟಿವಿಎಸ್ ಎಕ್ಸ್ಎಲ್ 100 ಮೊಪೆಡ್ ಮಾರಾಟ ಸಂಖ್ಯೆಯು ದಿನದಿಂದ ದಿನಕ್ಕೆ ಕುಸಿತವಾಗಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಹೆಚ್ಚು - ಕಮ್ಮಿ ಈ ಮೊಪೆಡ್‌ನ ಬೆಲೆಗೆ ಇತರೆ ಕಂಪನಿಗಳ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳು ಖರೀದಿಗೆ ಲಭ್ಯವಿವೆ. ಗ್ರಾಹಕರು ಅವುಗಳನ್ನು ಕೊಳ್ಳುವತ್ತ ಮನಸ್ಸು ಮಾಡಿದ್ದಾರೆ. ಜೊತೆಗೆ ಒಂದಷ್ಟು ವೈಶಿಷ್ಟ್ಯಗಳ ಕೊರತೆಯೂ ಇದೆ. ಹೀಗಾಗಿ ಎಕ್ಸ್ಎಲ್ ಮಾರಾಟ ಪ್ರಮಾಣವು ಇಳಿಕೆಯಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಟಿವಿಎಸ್ ಎಕ್ಸ್ಎಲ್ 100 ವಿಶೇಷತೆಗಳೇನು:
ಈ ಮೊಪೆಡ್ ಅತಿ ಕಡಿಮೆ ಬೆಲೆಗೆ ಗ್ರಾಹಕರ ಖರೀದಿಗೆ ಲಭ್ಯವಿದ್ದು, ರೂ.46,954 ರಿಂದ ರೂ.62,905 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಹೆವಿ ಡ್ಯೂಟಿ, ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್, ಹೆವಿ ಡ್ಯೂಟಿ ಐ-ಟಚ್‌ಸ್ಟಾರ್ಟ್ ವಿನ್ ಎಡಿಷನ್ ಹಾಗೂ ಕಂಫರ್ಟ್ ಐ-ಟಚ್‌ಸ್ಟಾರ್ಟ್ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ನೂತನ ಎಕ್ಸ್ಎಲ್ ಮೊಪೆಡ್ ತುಂಬಾ ಅಚ್ಚುಕಟ್ಟಾದ ಸರಳವಾದ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರ ಸೆಳೆಯುತ್ತಿದೆ. ಬ್ಲೂ, ಗ್ರೀನ್, ರೆಡ್ ಹಾಗೂ ಬ್ಲ್ಯಾಕ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿದೆ. ಇದು 1,858 ಎಂಎಂ ಉದ್ದ, 670 ಎಂಎಂ ಅಗಲ ಹಾಗೂ 1,060 ಎಂಎಂ ಎತ್ತರವು ಇದೆ.
ಹೊಸ ಟಿವಿಎಸ್ ಎಕ್ಸ್ಎಲ್ 100 ಬೆಲೆಗೆ ತಕ್ಕಂತೆ ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 99.7 ಸಿಸಿ, ಸಿಂಗಲ್ - ಸಿಲಿಂಡರ್ ಏರ್ ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 6000 ಆರ್‌ಪಿಎಂನಲ್ಲಿ 4.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 3500 ಆರ್‌ಪಿಎಂನಲ್ಲಿ 6.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. 65 ಕಿ.ಮೀ ವರೆಗೂ ಮೈಲೇಜ್ ನೀಡುತ್ತದೆ.

ಇದು ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಸ್ಪ್ಲಿಟ್ ಸೀಟ್, ಹಾಗೂ ಎಂಜಿನ್ ಕಿಲ್ ಸ್ವಿಚ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆಯೇ ಈ ಮೊಪೆಡ್ 89 ಕೆಜಿ ತೂಕವಿದ್ದು, 4 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಜೊತೆಗೆ 130 ಕೆಜಿ ಲಗೇಜ್ ತೆಗೆದುಕೊಂಡು ಹೋಗಲು ಸಾಧ್ಯವಾಗುವಂತೆ ಸಿದ್ಧಪಡಿಸಲಾಗಿದೆ.
ನೂತನ ಎಕ್ಸ್ಎಲ್ 100 ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಡುಯಲ್ - ಶಾಕ್ ಅಬ್ಸಾರ್ಬರ್ ಸಸ್ಪೆಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಸವಾರರ ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. 16-ಇಂಚಿರುವ ಸ್ಪೋಕ್ ವೀಲ್‌ಗಳನ್ನು ಹೊಂದಿದ್ದು, 2.5-ಇಂಚಿರುವ ಟೈಯರ್‌ಗಳನ್ನು ತನ್ನದಾಗಿಸಿಕೊಂಡಿದೆ. ಸದ್ಯ, ಇದಕ್ಕೆ ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಯಿಲ್ಲ ಎಂದು ಹೇಳಬಹುದು.


Click it and Unblock the Notifications








