Bajaj: ಸದ್ದಿಲ್ಲದೇ 2026ರ ಹೊಸ ಬಜಾಜ್ ಪಲ್ಸರ್ ಬೈಕ್ ಬಿಡುಗಡೆ.. ಬೆಲೆಯೂ ಅಗ್ಗ, ವಿಶೇಷತೆಗಳೇನು?
ಬಜಾಜ್ ಪಲ್ಸರ್ (Bajaj Pulsar) ಪ್ರಮುಖ ಬೈಕ್ ಆಗಿದ್ದು, ಯುವ ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಹಲವು ವಿಧದಲ್ಲೂ ಖರೀದಿಗೆ ಲಭ್ಯವಿದೆ. ಸದ್ಯ ಈ ಮೋಟಾರ್‌ಸೈಕಲ್‌ನ ಲೈನ್ಅಪ್‌ನ್ನು ಕಂಪನಿಯು ವಿಸ್ತರಿಸಿದೆ. ಬುಧವಾರ ಹೊಚ್ಚ ಹೊಸ 'ಪಲ್ಸರ್ 150'ನ್ನು ಬಿಡುಗಡೆಗೊಳಿಸಿದೆ. ಇದು ಸ್ಟೈಲಿಶ್ ವಿನ್ಯಾಸವನ್ನು ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಬನ್ನಿ, ಈ ಬೈಕ್‌ನ ಬೆಲೆ ಎಷ್ಟು.. ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ನೂತನ 'ಬಜಾಜ್ ಪಲ್ಸರ್ 150' ಸ್ಪರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಕನಿಷ್ಠ ರೂ.1.08 ಲಕ್ಷ ಹಾಗೂ ಗರಿಷ್ಠ ರೂ.1.15 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಎಸ್‌ಡಿ (ಸಿಂಗಲ್ ಡಿಸ್ಕ್), ಎಸ್‌ಡಿ ಯುಜಿ (ಸಿಂಗಲ್ ಡಿಸ್ಕ್ ಅಪ್‌ಗ್ರೇಡ್) ಹಾಗೂ ಟಿಡಿ ಯುಜಿ (ಟ್ವಿನ್ ಡಿಸ್ಕ್ ಅಪ್‌ಗ್ರೇಡ್) ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ.

ಈ ಮೋಟಾರ್‌ಸೈಕಲ್ ಹೊಸದಾದ 'ಗ್ರಾಫಿಕ್ಸ್'ನ್ನು ಹೊಂದಿದೆ. ಅತ್ಯುತ್ತಮವಾದ ಎಲ್‌ಇಡಿ ಹೆಡ್‌ಲ್ಯಾಂಪ್, ಎಲ್‌ಇಡಿ ಟರ್ನ್ ಇಂಡಿಕೇಟರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ನ್ನು ಪಡೆದಿದೆ. ಸ್ಪಾರ್ಕ್ಲಿ ಬ್ಲ್ಯಾಕ್ ರೆಡ್, ಸ್ಪಾರ್ಕ್ಲಿ ಬ್ಲ್ಯಾಕ್ ಬ್ಲೂ ಹಾಗೂ ಸ್ಪಾರ್ಕ್ಲಿ ಬ್ಲ್ಯಾಕ್ ಸಿಲ್ವರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ.
ಇದು ಸಾಕಷ್ಟು ವಿಶಾಲವಾಗಿದೆ. 2,035 ಮಿ.ಮೀ ಉದ್ದ, 750 ಮಿ.ಮೀ ಅಗಲ ಮತ್ತು 1,115 ಮೀ.ಮೀ ಎತ್ತರವಿದೆ. ಜೊತೆಗೆ 165 ಮೀ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,345 ಮಿಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 150 ಕೆಜಿ ತೂಕವಿದೆ.

ಹೊಸ 'ಬಜಾಜ್ ಪಲ್ಸರ್ 150' ಬೈಕ್, ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 149.5 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8,500 ಆರ್‌ಪಿಎಂನಲ್ಲಿ 13.8 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 6,500 ಆರ್‌ಪಿಎಂನಲ್ಲಿ 13.25 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 46 ರಿಂದ 50 ಕಿಲೋಮೀಟರ್‌ವರೆಗೆ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಈ ಮೋಟಾರ್‌ಸೈಕಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. 15 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಅಲಾಯ್ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ. ಸೀಟ್ ಎತ್ತರವು 785 ಮಿ.ಮೀ ಇದೆ.

ನೂತನ 'ಬಜಾಜ್ ಪಲ್ಸರ್ 150' ಪ್ರಯಾಣಿಕರಿಗೆ ಗರಿಷ್ಠ ಮಟ್ಟದಲ್ಲಿ ರಕ್ಷಣೆಯನ್ನು ಒದಗಿಸಬಲ್ಲದು. ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಪೋರ್ಕ್ ಮತ್ತು ಹಿಂಭಾಗ (ರೇರ್) ಕ್ಯಾನಿಸ್ಟರ್ & ಪ್ರಿಲೋಡ್ ಅಡ್ಜಸ್ಟರ್‌ನೊಂದಿಗೆ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸಿಂಗಲ್-ಚಾನೆಲ್ ಎಬಿಎಸ್ (ಆಂಟಿ - ಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.
ಇದಕ್ಕೆ ಸಾಲು - ಸಾಲು ಎದುರಾಳಿಗಳಿವೆ. ಹೋಂಡಾ ಯುನಿಕಾರ್ನ್ (Honda Unicorn), ಟಿವಿಎಸ್ ಅಪಾಚೆ ಆರ್‌ಟಿಆರ್ 160 (TVS Apache RTR 160) ಹಾಗೂ ಯಮಹಾ ಎಕ್ಸ್ಎಸ್ಆರ್ 155 (Yamaha XSR 155) ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.
ಒಟ್ಟಾರೆಯಾಗಿ, ಹೊಸ 'ಬಜಾಜ್ ಪಲ್ಸರ್ 150' ಬೈಕ್ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ನವೀನ ವಿನ್ಯಾಸವನ್ನು ಹೊಂದಿದ್ದು, ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೋಟಾರ್‌ಸೈಕಲ್‌ನ ವಿತರಣೆ ಶುರುವಾದ ಮೇಲೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.


Click it and Unblock the Notifications








