ಸುಜುಕಿಯಿಂದ ಇಂಟ್ರುಡರ್ ದುಬಾರಿ ಬೈಕ್ ಲಾಂಚ್
ಭಾರತೀಯ ವಾಹನ ಮಾರುಕಟ್ಟೆ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ಗಮನಿಸುತ್ತಿರುವ ಬಹುತೇಕ ಎಲ್ಲ ವಾಹನ ತಯಾರಕ ಸಂಸ್ಥೆಗಳು ಈ ಹಬ್ಬದ ಸಂದರ್ಭದಲ್ಲಿ ವಿಶೇಷ ಹಾಗೂ ಸೀಮಿತ ಆವೃತ್ತಿಗಳನ್ನು ಲಾಂಚ್ ಮಾಡುತ್ತಿವೆ.
ಇದಕ್ಕೊಂದು ಸೇರ್ಪಡೆಯೆಂಬಂತೆ ಜಪಾನ್‌ನ ದೈತ್ಯ ವಾಹನ ತಯಾರಕ ಸಂಸ್ಥೆಯಾದ ಸುಜುಕಿ ಮೋಟಾರ್ ಸೈಕಲ್ ಇಂಡಿಯಾ, ನೂತನ ಇಂಟ್ರುಡರ್ ಎಂ1800ಆರ್ ಬಿ.ಒ.ಎಸ್.ಎಸ್ ವಿಶೇಷ ಆವೃತ್ತಿಯನ್ನು ದೇಶದಲ್ಲಿ ಲಾಂಚ್ ಮಾಡಿದೆ.
ಈ ಮುಖಾಂತರ ದೇಶದಲ್ಲಿ ಸ್ಟೈಲಿಷ್, ಪವರ್‌ಫುಲ್ ಹಾಗೂ ನಿರ್ವಹಣಾ ಬೈಕ್ ಉತ್ಪಾದಿಸುದರಲ್ಲಿ ಹೆಸರುವಾಸಿಯಾಗಿರುವ ಸುಜುಕಿ, ಈ ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಸಂಖ್ಯೆಯ ಮಾರಾಟ ವೃದ್ಧಿ ಸಾಧಿಸುವ ಗುರಿ ಹೊಂದಿದೆ.

ನೂತನ ಸುಜುಕಿ ಇಂಟ್ರುಡರ್ ಎಂ1800ಆರ್ ವಿಶೇಷ ಆವೃತ್ತಿಯ ದೆಹಲಿ ಎಕ್ಸ್ ಶೋ ರೂಂ ದರ 16.45 ಲಕ್ಷ ರು.ಗಳಾಗಿವೆ. ಅಂದರೆ ಸಾಮಾನ್ಯ ಆವೃತ್ತಿಗಿಂತಲೂ ರು. 50,000ದಷ್ಟು ದುಬಾರಿಯೆನಿಸಲಿದೆ.

ಹಳದಿ ಹಾಗೂ ಕಪ್ಪು ವರ್ಣದ ಟು ಟೋನ್ ಕಲರ್ ಸ್ಕೀಮ್‌ಗಳಲ್ಲಿ ಆಗಮನವಾಗಿರುವುದು ಸುಜುಕಿ ಇಂಟ್ರುಡರ್ ಬಿ.ಒ.ಎಸ್.ಎಸ್ ಆವೃತ್ತಿಯ ಪ್ರಮುಖ ಆಕರ್ಷಣೆಯಾಗಿದೆ. ಕಪ್ಪು ಹೊಳಪು ನೀಡಿರುವ ಎಂಜಿನ್, 5 ಸ್ಪೋಕ್ ಅಲಾಯ್ ವೀಲ್ ಹಾಗೂ ಎಕ್ಸಾಸ್ಟ್ ಸಹ ಇತರ ಪ್ರಮುಖ ಆಕರ್ಷಣೆಯಾಗಿದೆ.

ಇನ್ನು ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದು 1.8 ಲೀಟರ್ ಫೋರ್ ಸ್ಟ್ರೋಕ್ ಟ್ವಿನ್ ಸಿಲಿಂಡರ್ ಡಿಒಎಚ್‌ಸಿ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 125 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ 5 ಸ್ಪೀಡ್ ಗೇರ್ ಬಾಕ್ಸ್ ಹೊಂದಿರಲಿದೆ.

ಸುಜುಕಿ ಇಂಟ್ರುಡರ್ ಕರ್ಬ್ ವೇಟ್ 347 ಕೆ.ಜಿ ಆಗಿದ್ದು 1710ಎಂಎಂ ವೀಲ್ ಬೇಸ್ ಪಡೆದುಕೊಂಡಿದೆ. ಹಾಗೆಯೇ ಸುವ್ಯವಸ್ಥಿತವಾದ ಹೆಡ್‌ಲೈಟ್ ಕವರ್, ಸ್ಟೈಲಿಷ್ ಸೈಡ್ ಸ್ಟ್ಯಾಂಡ್, ಎಲ್‌ಇಡಿ ಟೈಲ್ ಲೈಟ್ ಮತ್ತು ಪವರ್‌ಫುಲ್ ವಿ ಟ್ವಿನ್ ಎಂಜಿನ್ ಇತರ ಪ್ರಮುಖ ಆಕರ್ಷಣೆಯಾಗಿದೆ.

ಸುಜುಕಿ ಪಾಲಿಗೆ ಇಂಟ್ರುಡರ್ ಭಾರತದಲ್ಲಿ ಹೆಚ್ಚಿನ ಯಶಸ್ಸನ್ನು ಸಾಧಿಸಿತ್ತು. ಬಾಲಿವುಡ್ ಸೆಲೆಬ್ರಿಟಿ ಸಲ್ಮಾನ್ ಖಾನ್ ಬಳಿಯೂ ಇಂಟ್ರುಡರ್ ಬೈಕಿದೆ. ಇದು ತನ್ನ ಶಕ್ತಿ, ಕ್ಲಾಸ್, ಸ್ಪೀಡ್ ಹಾಗೂ ದಕ್ಷತೆಗೆ ವಿಮರ್ಶಕರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.

ಅಂದ ಹಾಗೆ ಇಂಟ್ರುಡರ್ ಎಂ1800ಆರ್ ಲಾಂಚ್ ಮಾಡುವ ಮೂಲಕ ಸುಜುಕಿ ದೇಶದಲ್ಲಿ ತನ್ನ ಬೈಕ್ ಸಾನಿಧ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ಜಿಎಸ್‌ಎಕ್ಸ್-ಆರ್1000/ಝಡ್, ಬಂದಿತ್ 1250ಎಸ್‌ಎ, ಹಯಾಬುಸಾ/ಎಲ್‌ಇ ಮತ್ತು ಎಂ800 ಸುಜುಕಿಯಿಂದ ದೇಶದಲ್ಲಿ ಲಭ್ಯವಾಗುವ ಇತರ ಆವೃತ್ತಿಗಳಾಗಿದೆ.


Click it and Unblock the Notifications








