ಟೊಯೊಟಾ ಇಟಿಯೊಸ್ ಲಿವಾ 2011: ಫುಲ್ ರಿವ್ಯೂ ಇಲ್ಲಿದೆ

ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಆಕರ್ಷಕವಾಗಿ ಲಿವಾ ಕಾಣುತ್ತದೆ. ಯಾಕೆಂದರೆ ಅದರ ಬಾಡಿಯಲ್ಲಿರುವ ಕರ್ವ್ ಗೆರೆಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. ದೇಶದ ರಸ್ತೆಗೆ ಸೂಕ್ತವಾಗುವಂತೆ ಭಾರತದ ಕಿರ್ಲೊಸ್ಕರ್ ನೆರವಿನಿಂದ ಟೊಯೊಟಾ ಈ ಕಾರನ್ನು ರೂಪಿಸಿದೆ. ಇದರ ಆಕರ್ಷಕ ಲುಕ್, ಟ್ರೆಂಡಿ, ಆರಾಮದಾಯಕತೆಯ ಇಂಟಿರಿಯರ್ ಮತ್ತು ಶಕ್ತಿಶಾಲಿ ಎಂಜಿನ್ ಇಷ್ಟವಾಗುತ್ತದೆ.
ನೂತನ ಟೊಯೊಟಾ ಇಟಿಯೋಸ್ ಲಿವಾ ಕಾರು ಫೋರ್ಡ್ ಫಿಗೊ, ಹ್ಯುಂಡೈ ಐ20, ಷೆವರ್ಲೆ ಅವಿಯೋ ಯುವಿಎ, ಮಾರುತಿ ರಿಟ್ಜ್, ಮಾರುತಿ ಎ-ಸ್ಟಾರ್ ಮತ್ತು ಫಿಯೆಟ್ ಪುಂಟೊಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ. ನೂತನ ಕಾರಿನ ಫುಲ್ ರಿವ್ಯೂ ನೋಡೋಣ.
ಎಂಜಿನ್ ಮತ್ತು ವಿಶೇಷತೆಗಳು
ನೂತನ ಹ್ಯಾಚ್ ಬ್ಯಾಕ್ ಲಿವಾ ಶಕ್ತಿಶಾಲಿ 1197 ಸಿಸಿಯ 16 ಕವಾಟದ ಡಿಒಎಚ್ ಸಿ ಪೆಟ್ರೊಲ್ ಎಂಜಿನ್ ಹೊಂದಿದೆ. ಇದು 5600 ಆರ್ ಪಿಎಂಗೆ 78.9 ಹಾರ್ಸ್ ಪವರ್ ನೀಡುತ್ತದೆ. ಈ ಕಾರು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ.
ಎಕ್ಸ್ ಟಿರಿಯರ್ ಹೇಗಿದೆ?
ಸೆಡಾನ್ ಕಾರು ಎಟಿಯೋಸ್ ನಂತೆಯೇ ಲಿವಾದ ಹೊರವಿನ್ಯಾಸ ಆಕರ್ಷಕವಾಗಿದೆ. ಎದುರಿನ ಆಕರ್ಷಕ ವಿನ್ಯಾಸ ಮಗುವಿನ ಮುಗುಳ್ನಗೆಯಂತೆ ಭಾಸವಾದರೆ ಅಚ್ಚರಿಯಿಲ್ಲ. ನೋಡಲು ಆಕರ್ಷಕ ಚೆಲುವೆಯಂತೆ ಫಿಟ್ ಆಗಿ ಕಾಣುತ್ತದೆ. ಅದರ ಏರೋ ಡೈನಾಮಿಕ್ ಬಾಡಿ ಕಾರಿಗೆ ಸ್ಪೋರ್ಟಿ ಲುಕ್ ನೀಡಿದೆ.
ಇಂಟಿರಿಯರ್ ಗೆ ಇಣುಕಿ
ಸ್ಥಳಾವಕಾಶ ಮತ್ತು ಟ್ರೆಂಡಿ ಫೀಚರ್ ಗಳಿಂದ ಇಂಟಿರಿಯರ್ ಲಕ್ಷುರಿ ಕಾರಿನಂತೆ ಕಾಣುತ್ತದೆ. 5 ಜನರು ಆರಾಮವಾಗಿ ಕುಳಿತುಕೊಳ್ಳಬಹುದು. 5 ಡೋರಿನ ಈ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಸಾಕಷ್ಟು ಲಗೇಜ್ ಸ್ಥಳಾವಕಾಶವಿದೆ. ಇದರ ಡ್ಯಾಷ್ ಬೋರ್ಡ್ ಕೂಡ ಇಷ್ಟವಾಗುವಂತ್ತಿದೆ.
ಆರಾಮದಾಯಕತೆ
ಕಂಫರ್ಟ್ ವಿಷ್ಯದಲ್ಲಿ ಲಿವಾ ಇಷ್ಟವಾಗುತ್ತದೆ. ಹೆಚ್ಚು ಒತ್ತಡವಿಲ್ಲದೇ ಡ್ರೈವ್ ಮಾಡಲು ಸೂಕ್ತವಾಗಿದೆ. 2 ಡಿನ್ ಡಿವಿಡಿ ಆಡಿಯೋ ಸಿಸ್ಟಮ್, ಏರ್ ಫಿಲ್ಟರ್ ಇರುವ ಏರ್ ಕಂಡಿಷನರ್ ಇತ್ಯಾದಿಗಳು ಆರಾಮದಾಯಕ ಸವಾರಿಗೆ ಹೆಚ್ಚು ಸಾಥ್ ನೀಡುತ್ತವೆ. ಇದರೊಂದಿಗೆ ರಿಮೋಟ್ ಸೆಂಟ್ರಲ್ ಲಾಕಿಂಗ್, ರಿಮೋಟ್ ಬೂಟ್, ಹಿಂದಿನ ವೈಪರ್, ಬಣ್ಣದ ಗ್ಲಾಸ್, ಮಡುಚಬಹುದಾದ ಹಿಂದಿನ ಸೀಟು, ಇಂಧನ ಟ್ಯಾಂಕ್ ಮುಚ್ಚಳವನ್ನು ರಿಮೋಟ್ ಮೂಲಕ ತೆರೆಯುವ ಸೌಲಭ್ಯ ಸೇರಿದಂತೆ ಹಲವು ಫೀಚರ್ ಗಳಿವೆ.
ದಕ್ಷತೆ ಮತ್ತು ಸುರಕ್ಷತೆ
ಇದು ಶಕ್ತಿಶಾಲಿ ಎಂಜಿನ್ ಹೊಂದಿರುವುದರಿಂದ ದಕ್ಷತೆಯ ಕಾರು ಕೂಡ ಹೌದು. ಸುರಕ್ಷತೆಯ ಸವಾರಿಗೆ ಸೂಕ್ತವಾಗುವಂತೆ
ಡ್ಯೂಯಲ್ ಎಸ್ಆರ್ಎಸ್ ಏರ್ ಬ್ಯಾಗ್ ಇದೆ. ಇದು ಕಾರಿನ ಮುಂಭಾಗಕ್ಕೆ ಅಪಘಾತವಾದರೆ ಎದುರು ಕೂತವರನ್ನು ಸೇಫಾಗಿಸುವ ಫೀಚರ್ ಹೊಂದಿದೆ. ರಸ್ತೆಯ ಮೇಲೆ ಗಮನವಿರಿಸಿಕೊಂಡೇ ಸೆಂಟರ್ ಮೀಟರ್ ವೀಕ್ಷಿಸಬಹುದು. ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಇಬಿಡಿ(ಎಲೆಕ್ಟ್ರಾನಿಕ್ ಬ್ರೇಕ್ ಒತ್ತಡ ವಿತರಕ) ಇತ್ಯಾದಿಗಳು ಸುರಕ್ಷತೆಯ ಸವಾರಿಗೆ ಸೂಕ್ತವಾಗಿದೆ.
ಮೈಲೇಜ್ ಮತ್ತು ದರ
ಕಂಪನಿ ಹೇಳುವ ಪ್ರಕಾರ ಟೊಯೊಟಾ ಎಟಿಯೋಸ್ ಲಿವಾ ಪ್ರತಿಲೀಟರ್ ಇಂಧನಕ್ಕೆ 18.31 ಕಿ.ಮೀ. ಮೈಲೇಜ್ ನೀಡುತ್ತದೆ. ದೆಹಲಿ ಎಕ್ಸ್ ಶೋರೂಂನಲ್ಲಿ ಇದರ ದರ 3.99 ಲಕ್ಷ ರು. ನಿಂದ 5.99 ಲಕ್ಷ ರು.ವರೆಗಿದೆ.


Click it and Unblock the Notifications








