ಸುಜುಕಿ ಅವಲಂಬನೆ ಮಾರುತಿಗೆ ಹೊಡೆತ

ಕಂಪೆನಿ ಕಳೆದ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಕಾರುಗಳ ಮಾರಾಟದಲ್ಲಿ ಶೇ.27 ರಷ್ಟು ಏರಿಕೆ ದಾಖಲಿಸಿದ್ದರೂ ನಿವ್ವಳ ಲಾಭದಲ್ಲಿ ಶೇ.20 ರಷ್ಟು ಕುಸಿತ ಅನುಭವಿಸಿದೆ. ಮಾರುತಿಯು ತಂತ್ರಜ್ಞಾನವನ್ನು ಬಳಸಿಕೊಳ್ಳಲು ತನ್ನ ಮಾತೃ ಕಂಪೆನಿ ಸುಜುಕಿ ಮೋಟಾರ್ಸ್ ಗೆ ನೀಡಬೇಕಾದ ದುಬಾರಿ ರಾಯಧನ ಹಾಗೂ ತಾಂತ್ರಿಕ ಶುಲ್ಕವೇ ಇದಕ್ಕೆ ಕಾರಣವಾಗಿದೆ.
ಕಂಪೆನಿ ತನ್ನ ತ್ರೈಮಾಸಿಕ ವರದಿಯಲ್ಲಿ ನೀಡಿರುವ ರಾಯಧನವನ್ನು ಬಹಿರಂಗಪಡಿಸದೆ ಇದನ್ನು ಇತರೆ ಖರ್ಚು ಎಂದು ತೋರಿಸಿದೆ. ಈ ಇತರ ಖರ್ಚು ಶೇ.42 ರಷ್ಟು ಹೆಚ್ಚಳವಾಗಿದೆ. ಕಂಪೆನಿ ದೇಶಿಯವಾಗಿ ಮಾರಾಟವಾಗುವ ಕಾರುಗಳ ಮಾರಾಟ ದರದ ಶೇ.5 ಹಾಗೂ ರಫ್ತು ಮಾಡಲಾಗುವ ವಾಹನಗಳ ಬೆಲೆಯ ಶೇ.8 ರಷ್ಟನ್ನು ರಾಯಧನವಾಗಿ ನೀಡುತ್ತಿದೆ.
ಕಂಪೆನಿಯ ನಿವ್ವಳ ಮಾರಾಟ ನಿರ್ವಹಣಾ ಲಾಭ ಶೇ7.6 ಕ್ಕೆ ಕುಸಿದಿದ್ದು ಇದು ಕಳೆದ 5 ವರ್ಷಗಳಲ್ಲೆ ಅತಿ ಕನಿಷ್ಠವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ತ್ರೈಮಾಸಿಕದಲ್ಲಿ ಕಂಪೆನಿಯ ಕಚ್ಚಾ ವಸ್ತುಗಳ ಖರೀದಿ ದರ ಶೇ25.9 ರಷ್ಟು ಹೆಚ್ಚಳವಾಗಿದೆ.
ಕಂಪೆನಿ ತನ್ನ ಖಜಾನೆ ನಿಧಿಯಿಂದ ವಿಸ್ತರಣಾ ಯೋಜನೆಗೆ 1700 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿರುವುದರಿಂದಲೂ ನಿವ್ವಳ ಆದಾಯದಲ್ಲಿ ಶೇ.53ರಷ್ಟು ಕುಸಿತ ಆಗಿದೆ. ಕಳೆದ ಬಜೆಟ್ ನಲ್ಲಿ ಸರ್ಕಾರ ಶೇ.2ರಷ್ಟು ಅಬ್ಕಾರಿ ತೆರಿಗೆಯನ್ನು ಹೆಚ್ಚಿಸಿರುವುದೂ ಕಂಪೆನಿಯ ಲಾಭ ಕಡಿಮೆಯಾಗಲು ಕಾರಣವಾಗಿದೆ.
ಮಾರುತಿ ಪ್ರತಿ ಕಾರಿಗೆ ರೂ 32,818 ರೂಪಾಯಿಗಳಷ್ಟು ತೆರಿಗೆ ಪಾವತಿಸುತ್ತಿದೆ. ಕಚ್ಚಾ ವಸ್ತುಗಳು ಹಾಗೂ ಲೋಹದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮಾತೃ ಕಂಪೆನಿಗೆ ರಾಯಧನವನ್ನು ನೀಡಬೇಕಾಗಿರುವುದರಿಂದ ಮುಂದಿನ ತಿಂಗಳುಗಳು ಮಾರುತಿಗೆ ಸವಾಲೇ ಆಗಿವೆ.
ಇದರ ಜತೆ ಸ್ಥಳೀಯ ಕಂಪೆನಿಗಳಾದ ಟಾಟಾ ಹಾಗೂ ಮಹೀಂದ್ರಾದ ಸ್ಪರ್ಧೆಯನ್ನು ಕೂಡ ಕಂಪೆನಿ ಎದುರಿಸಬೇಕಾಗಿದ್ದು, ಈ ಕಂಪೆನಿಗಳು ಯಾವುದೇ ರೀತಿಯ ರಾಯಧನ ಪಾವತಿಸುತ್ತಿಲ್ಲ.


Click it and Unblock the Notifications








