ಹ್ಯುಂಡೈ ಅದ್ಭುತ ಬ್ಯಾಟಿಂಗ್, ಗ್ರಾಹಕರನ್ನು ಕ್ಯಾಚ್ ಹಿಡಿಯಲು ಯತ್ನ

ಒಪ್ಪಂದದ ಪ್ರಕಾರ ಕ್ರಿಕೆಟ್ ಆಟಗಾರರು ಮತ್ತು ವಿಶ್ವಕಪ್ ಗೆ ಸಂಬಂಧಿಸಿದ ಅಧಿಕಾರಿಗಳು ಹ್ಯುಂಡೈ ವಾಹನಗಳಲ್ಲಿಯೇ ಪ್ರಯಾಣಿಸುತ್ತಾರೆ. ತನ್ನ ಬ್ರಾಂಡ್ ಜನಪ್ರಿಯಗೊಳಿಸಲು ಕಂಪನಿಗೆ ಇದು ಉತ್ತಮ ಅವಕಾಶವಾಗಿದ್ದು, ಸರಿಯಾಗಿಯೇ ಬೌಲಿಂಗ್ ಮಾಡುತ್ತಿದೆ. ಲೆಕ್ಕವಿಲ್ಲದಷ್ಟು ಕ್ರೀಡಾ ಪ್ರೇಮಿಗಳು ಟಿವಿ ಮುಂದೆ ಮಂತ್ರಮುಗ್ನರಾಗಿ ಕುಳಿತಿದ್ದಾರೆ. ಇಂತಹ ಬೃಹತ್ ಕಾರ್ಯಕ್ರಮವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಕೊರಿಯಾದ ಕಾರ್ ತಯಾರಿಕಾ ಕಂಪನಿ "ಹ್ಯುಂಡೈ".
ಇದರೊಂದಿಗೆ ಕಂಪನಿಯು ಚೆನ್ನೈ, ಮುಂಬೈ ಮತ್ತು ದೆಹಲಿಯ ಬಿಗ್ ಮಾಲ್ ಗಳಲ್ಲಿ ಕ್ರಿಕೆಟ್ ನೇರಪ್ರಸಾರ ಮಾಡುವ ಮೂಲಕ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ. ಕ್ರಿಕೆಟ್ ಟಿಕೇಟ್ ಮತ್ತು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳನ್ನೂ ಕೂಡ ಹ್ಯುಂಡೈ ಡೀಲರ್ ಗಳು ಮಾಡುತ್ತಿದ್ದಾರೆ. ಕಂಪನಿಯು ತನ್ನ ಇತ್ತೀಚಿನ ಮಾದರಿಗಳಾದ ಸಾಂತಾ ಫೆ ಮತ್ತು ಸೊನಾಟ ಕಾರ್ ಗಳನ್ನು ನವದೆಹಲಿಯ ಹೊಸ ಟಿ3 ಏರ್ ಪೋರ್ಟ್ ನಲ್ಲಿ ಇಟ್ಟಿದೆ.
ವಾಹನ ವಾಪಸ್ಸಾತಿಯಿಂದ ಕಾರ್ ಮಾರಾಟಕ್ಕೆ ಉಂಟಾದ ಹಿನ್ನಡೆ ಸರಿಪಡಿಸಲು ಕಂಪನಿಯು ವಿಶ್ವಕಪನ್ನು ಸರಿಯಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ. ಕ್ರಿಕೆಟ್ ನೋಡುವ ಯುವ ಜನತೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಕಾರ್ಯತಂತ್ರ ರೂಪಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ಕಂಪನಿಯು ಸುಮಾರು 3 ಲಕ್ಷ ರೂ.ನ ಕಾಂಪ್ಯಾಕ್ಟ್ ಕಾರ್ ಹೊರತರುವ ಯೋಜನೆಯನ್ನೂ ಹ್ಯುಂಡೈ ಹೊಂದಿದೆ.


Click it and Unblock the Notifications








