ಕಾರ್ ಗ್ರಾಹಕ ಎಚ್ಚರ, ದರ 25 ಸಾವಿರ ರೂ. ಹೆಚ್ಚಳ

ಆದರೆ ಈ ವರ್ಷದ ಯುಗಾದಿ ತಿಂಗಳಲ್ಲಿ ಕಂಪನಿಗಳು ಹೊಸ ಕಾರ್ ಖರೀದಿಸಬೇಕೆಂದು ಅಂದುಕೊಂಡಿರುವ ಗ್ರಾಹಕನಿಗೆ ದರ ಏರಿಕೆಯ ಬರೆಯನ್ನು ಎಳ್ಳುಬೆಲ್ಲದ ನಡುವೆ ನೀಡಲಿವೆ. ಕೆಲವು ಕಾರ್ ಕಂಪನಿಗಳು ಸುಮಾರು 25 ಸಾವಿರ ರೂ.ಗಿಂತಲೂ ಹೆಚ್ಚು ದರ ಹೆಚ್ಚಿಸುವ ಸಾಧ್ಯತೆಯಿದೆ. ಮಾರುತಿ ಸ್ವಿಫ್ಟ್, ಹೋಂಡಾ ಜಾಝ್ ಮತ್ತು ಹ್ಯುಂಡೈ ಐ10 ಕಾರ್ ದರಗಳು 10 ಸಾವಿರ ರೂ. ಹೆಚ್ಚಾಗಲಿದೆ. ಆದರೆ ಸ್ಕೋಡಾ ಸೂಪರ್ಬ್ ಮತ್ತು ಟೊಯೊಟಾ ಕೊರೊಲಾ ದರಗಳು 25 ಸಾವಿರ ರೂ.ಗಿಂತಲೂ ಜಾಸ್ತಿಯಾಗಲಿದೆ.
ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನಲೆಯಲ್ಲಿ ಕಾರ್ ದರ ಹೆಚ್ಚಿಸುವುದು ಅನಿವಾರ್ಯವೆಂದು ಮಾರುತಿ ಕಂಪನಿಯ ವ್ಯವಸ್ಥಾಪಕರು ಹೇಳಿದ್ದಾರೆ. ಸ್ಟೀಲ್ ಮತ್ತು ರಬ್ಬರ್ ದರ ಏರಿಕೆಯಿಂದ ವಾಹನ ಬಿಡಿಭಾಗ ಪೂರೈಕೆ ದಾರರ ಗುತ್ತಿಗೆಯನ್ನು ನವೀಕರಿಸುವ ಸಮಯದಲ್ಲಿ ಕಂಪನಿಗೆ ಹೆಚ್ಚು ಹೊರೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಉತ್ಪಾದನೆ ವೆಚ್ಚ ಹೆಚ್ಚಳದ ಕಾರಣ ನೀಡಿ ಮಾರುತಿ ಸುಜುಕಿ ಇತ್ತೀಚೆಗೆ ಕಾರ್ ದರಗಳನ್ನು ಶೇ. 2.4ರಷ್ಟು ಹೆಚ್ಚಿಸಿತ್ತು.
ಉತ್ಪಾದನೆ ವೆಚ್ಚ ಹೆಚ್ಚಳದ ನಡುವೆಯೂ ವಾಹನ ದರ ಸಮತೋಲನಕ್ಕೆ ಮತ್ತು ದರ ಹೆಚ್ಚಳ ಮಾಡದಿರಲು ಕಂಪನಿಗಳು ಸಾಧ್ಯವಿದಷ್ಟು ಸರ್ಕಸ್ ಮಾಡುತ್ತಿವೆ. ಇತ್ತೀಚಿನ ತಿಂಗಳಲ್ಲಿ ತಾಮ್ರ, ಅಲ್ಯುಮಿನಿಯಂ ದರಗಳು ಶೇ. 20ರಿಂದ ಶೇ. 45ರಷ್ಟು ಏರಿಕೆ ಕಂಡಿವೆ. ಕಚ್ಚಾ ಸಾಮಗ್ರಿಗಳ ದರ ಏರಿಕೆಯಿಂದಾಗಿ ಈ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಹೀರೋ ಹೋಂಡಾ ಮತ್ತು ಮಾರುತಿ ಸುಜುಕಿ ನಿವ್ವಳ ಲಾಭ ಶೇ. 20ರಷ್ಟು ಇಳಿಕೆ ಕಂಡಿತ್ತು. ಹೆಚ್ಚಿನ ವಾಹನಗಳು ಕಂಪನಿಗಳು ದರ ಏರಿಕೆ ಮಾಡುವ ಪ್ರಕ್ರಿಯೆಯಲ್ಲಿವೆ ಎಂದು ಉದ್ಯಮ ಮೂಲಗಳು ಸ್ಪಷ್ಟಪಡಿಸಿವೆ.
ಮುಂದಿನ ತಿಂಗಳು ಕಂಪನಿಯು ವಾಹನ ದರ ಪರಿಷ್ಕರಿಸಲಿದೆ ಎಂದು ಹ್ಯುಂಡೈ ಮೋಟರ್ ಇಂಡಿಯಾದ ಹಿರಿಯ ಕಾರ್ಯನಿರ್ವಹಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಸರಕಾರ ಅಬಕಾರಿ ಸುಂಕವನ್ನು ಶೇ. 2ರಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿ ವಾಹನ ಕಂಪನಿಗಳು ದರ ಏರಿಕೆಯ ದಾರಿ ನೋಡುತ್ತಿವೆ. 2008ರ ಡಿಸೆಂಬರ್ ನಿಂದಲೇ ಇಂತಹ ದರ ಹೆಚ್ಚಿಸುವ ಅನಿವಾರ್ಯತೆ ತಲೆದೋರಿರುವುದಾಗಿ ಭಾವಿಸಿರುವ ಕಂಪನಿಗಳು ತಮ್ಮಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ ಎನ್ನುತ್ತಿವೆ.


Click it and Unblock the Notifications