ಮಾರುತಿ ಸುಜುಕಿಗೆ ಮಾರಾಟ ಆದಾಯ ಏರಿಕೆ ನಿರೀಕ್ಷೆ

"ಈಗ ಕಂಪನಿಯ ಕಾರ್ ಗಳಿಗೆ ಬೇಡಿಕೆ ಅತ್ಯುತ್ತಮವಾಗಿದೆ. ಅದರಲ್ಲೂ ಮೊದಲ ಮೂರು ತ್ರೈಮಾಸಿಕದಲ್ಲಿ ಕಂಪನಿ ಆದಾಯ ಗಣನೀಯವಾಗಿ ಏರಿಕೆ ಕಂಡಿದೆ. ಈ ತ್ರೈಮಾಸಿಕದಲ್ಲೂ ಕಂಪನಿಯ ಮಾರಾಟ ಏರಿಕೆ ಕಾಣುವ ನಿರೀಕ್ಷೆಯಿದ್ದು, ಒಟ್ಟಾರೆಯಾಗಿ ಶೇ. 25ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆಯಿದೆ" ಎಂದು ಮಾರುತಿ ಸುಜುಕಿ ಇಂಡಿಯಾದ ಮುಖ್ಯ ಹಣಕಾಸು ಅಧಿಕಾರಿ ಅಜಯ್ ಸೇಥ್ ಹೇಳಿದ್ದಾರೆ.
ಕಂಪನಿಯು 2009-10ರ ಆರ್ಥಿಕ ವರ್ಷದಲ್ಲಿ ಒಟ್ಟು 30,119.77 ಕೋಟಿ ರೂ. ಆದಾಯ ಗಳಿಸಿತ್ತು. ಈ ಆರ್ಥಿಕ ವರ್ಷದ ಮೊದಲ 9 ತಿಂಗಳಲ್ಲಿ ಕಂಪನಿಯ ಆದಾಯ 27,310.35 ಕೋಟಿ ರೂ.ಗೆ ತಲುಪಿದ್ದು ಶೇ. 26.33ರಷ್ಟು ಏರಿಕೆ ಕಂಡಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಮಾರುತಿ ಆದಾಯ 21,617.65 ಕೋಟಿ ರೂ. ಆಗಿತ್ತು. ಪ್ರಯಾಣಿಕ ವಾಹನ ಸೆಗ್ಮೆಂಟ್ ಕಳೆದ ಆರ್ಥಿಕ ವರ್ಷಕ್ಕಿಂತ ಶೇ. 12ರಿಂದ ಶೇ. 14ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.
ಈಗ ಕಂಪನಿಯ ಶೇ. 54.2ರಷ್ಟು ಪಾಲನ್ನು ಸುಜುಕಿ ಹೊಂದಿದೆ. ಕಂಪನಿಯ ಗುರ್ ಗಾಂವ್ ಘಟಕ ವಾರ್ಷಿಕ 8.5 ಲಕ್ಷ ಯೂನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಮಾನೆಸರ್ ಘಟಕದಲ್ಲಿ ವಾರ್ಷಿಕವಾಗಿ ಸುಮಾರು 3.5 ಲಕ್ಷ ವಾಹನಗಳನ್ನು ಉತ್ಪಾದಿಸಲಾಗುತ್ತದೆ. ನೂತನ ಎರಡು ಘಟಕ ನಿರ್ಮಾಣಕ್ಕಾಗಿ ಸುಮಾರು 3,625 ಕೋಟಿ ರೂ. ಹೂಡಿಕೆ ಮಾಡುವುದಾಗಿ ಕಂಪನಿ ಇತ್ತೀಚೆಗೆ ಪ್ರಕಟಿಸಿತ್ತು.


Click it and Unblock the Notifications








