ಎಕೆ-47 ಗನ್ನಿಗೂ ಅಂಜದ ಟಾಟಾ ಸಫಾರಿ

ಹಳೆಯ ಸಫಾರಿಗೆ ಹೋಲಿಸಿದರೆ ನೂತನ ಆವೃತ್ತಿ ದರ ಸುಮಾರು 7 ಪಟ್ಟು ಹೆಚ್ಚು. ಅಂದರೆ ಹಳೆಯ ಸಫಾರಿಗೆ 8 ಲಕ್ಷ ರೂ. ಇದ್ದರೆ, ನೂತನ ಗುಂಡು ನಿರೋಧಕ ಕಾರಿಗೆ ಸುಮಾರು 60 ಲಕ್ಷ ರೂಪಾಯಿ ನೀಡಬೇಕಾಗುತ್ತದೆ. ಟಾಟಾ ಮೋಟರ್ಸ್ ನ ನೂತನ ಸಫಾರಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಆಗಿದ್ದು ನಮ್ಮ ದೇಶದಲ್ಲಿ ದೊರಕುವ ಅತ್ಯಂತ ಪ್ರಬಲ ಬುಲೆಟ್ ಪ್ರೂಫ್ ಕಾರಾಗಿದೆ.
ನೂತನ ಸಫಾರಿ ನೋಡಲು ಹಳೆಯ ಸಫಾರಿಗಿಂತ ಭಿನ್ನವಾಗೇನೂ ಇಲ್ಲ. ಆದರೆ ಇಂಧನ ಟ್ಯಾಂಕ್ ಸೇರಿದಂತೆ ಯಾವ ಭಾಗಕ್ಕೂ ಶಸ್ತ್ರಾಸ್ತ್ರಗಳಿಂದ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಈ ಕಾರ್ ಎನ್ಐಜೆ ಲೆವೆಲ್ 3/ ಬಿ6 ಸುರಕ್ಷತೆಯ ಫೀಚರ್ ಹೊಂದಿದೆ. ಇದರ ನೆರವಿನಿಂದ ಕಾರಿನ ಟೈರ್ ಗೆ ಅಪಾಯವಾದರೂ ಸುಮಾರು 50ರಿಂದ 60 ಕಿ.ಮೀ. ವೇಗದಲ್ಲಿ ಸುಮಾರು 50 ಕಿ.ಮೀ. ಸಾಗಬಹುದು. ಈ ಕಾರಿನ ಕಿಟಕಿ ಗಾಜುಗಳಿಗೆ ಎಕೆ 47, ಕಲಾಸ್ನಿಕೋವ್ ಮುಂತಾದ ಶಸ್ತ್ರಾಸ್ತ್ರಗಲೂ ಹಾನಿ ಮಾಡಲಾರವು. ಅಷ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿದೆ.
ಇದು ಪ್ರತಿಗಂಟೆಗೆ ಗರಿಷ್ಠ 150 ಕಿ.ಮೀ. ವೇಗವನ್ನು ಹೊಂದಿದೆ. "ಹೊಸ ಸಫಾರಿ ದರ ತುಂಬಾ ದುಬಾರಿ. ಇದು ಕೆಲವೇ ಡೀಲರ್ ಗಳ ಬಳಿ ದೊರಕುತ್ತದೆ. ಕಂಪನಿಯು ಈ ಕಾರನ್ನು ಹೆಚ್ಚು ಪ್ರಮೋಟ್ ಮಾಡದಿದ್ದರೂ ಗ್ರಾಹಕರು ಹತ್ತಿರದ ಡೀಲರ್ ಮೂಲಕ ಆರ್ಡರ್ ಮಾಡಿಕೊಳ್ಳಬಹುದು" ಎಂದು ಟಾಟಾ ಮೋಟರ್ಸ್ ಡೀಲರ್ ರೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿಯು ಇಂತಹ ಬುಲೆಟ್ ಪ್ರೂಫ್ ಕಾರೊಂದನ್ನು ಗ್ರಾಹಕರಿಗೆ ನೀಡುತ್ತಿರುವುದು ಇದೇ ಮೊದಲು.
ಕಂಪನಿಯು ಈ ಮೊದಲು ಇಂತಹ ವಾಹನಗಳನ್ನು ರಕ್ಷಣಾ ಇಲಾಖೆಗೆ ಪೂರೈಕೆ ಮಾಡುತ್ತಿತ್ತು. ಈಗಾಗಲೇ ಕಂಪನಿಯ ಇಂತಹ ವಾಹನಗಳು ವಿಶೇಷ ರಕ್ಷಣಾ ಪಡೆಗಳಲ್ಲಿ, ಕೆಲವು ಸೆಕ್ಯೂರಿಟಿ ಏಜೆನ್ಸಿಗಳಲ್ಲಿವೆ. ಕಂಪನಿಯು ಕಳೆದ ವರ್ಷ ಡಿಸ್ಕವರಿ ಮತ್ತು ರೇಂಜ್ ರೋವರ್ ಆವೃತ್ತಿಯಲ್ಲೂ ಇಂತಹ ಬುಲೆಟ್ ಫ್ರೂಫ್ ಆವೃತ್ತಿ ಹೊರತಂದಿತ್ತು. ಈ ಕಾರ್ ಗಳ ದರ ಕ್ರಮವಾಗಿ 3.75 ಕೋಟಿ ರೂ. ಮತ್ತು 4 ಕೋಟಿ ರೂ. ಆಗಿತ್ತು. ಆದರೆ ನೂತನ ಕಾರಿಗೆ ಹೆಚ್ಚಿನ ಬೇಡಿಕೆಯಿರುವ ನಿರೀಕ್ಷೆಯಿಲ್ಲ. ಮಂತ್ರಿ, ಸಚಿವರು ಮತ್ತು ಉದ್ದಿಮೆದಾರರಿಂದ ಒಂದಿಷ್ಟು ಬೇಡಿಕೆ ಬರುವ ನಿರೀಕ್ಷೆಗಳಿವೆ.


Click it and Unblock the Notifications







