ಪಾಕಿಸ್ತಾನಿಗೆ ಟಾಟಾ ನ್ಯಾನೊ ಸವಾರಿ ಭಾಗ್ಯವಿದೆಯೇ?!

ಪಾಕಿಸ್ತಾನದ ಬಿಸಿನೆಸ್ ಹೌಸ್"ಇಂಟರ್ ನ್ಯಾಷನಲ್ ಮಲ್ಟಿ ಗ್ರೂಪ್ ಕಂಪನಿಸ್(ಐಎಂಜಿಸಿ) ನ್ಯಾನೊ ಕಾರಿನ ಕುರಿತು ಆಸಕ್ತಿ ತೋರಿದೆ. ಎಣ್ಣೆ ಮತ್ತು ಸಿನಿಮಾ ಆಮದು ಮಾಡಿಕೊಳ್ಳುವಂತೆ ಭಾರತದ ನ್ಯಾನೊ ಕಾರುಗಳನ್ನು ಮತ್ತು ಸಿಎನ್ ಜಿ ಬಸ್ ಗಳನ್ನು ಆಮದು ಮಾಡಿಕೊಳ್ಳಲು ಐಎಂಜಿಸಿ ಬಯಸಿದೆ. ಆದರೆ ಅದಕ್ಕೆ ಉಭಯ ದೇಶಗಳ ವಾಣಿಜ್ಯ ನೀತಿಗಳು ತೊಡರುಗಾಲು ಹಾಕುತ್ತಿದೆ.
"ಸಿಎನ್ ಜಿ ಬಸ್ ಗಳನ್ನು ಆಮದು ಮಾಡಿಕೊಳ್ಳುವ ಕುರಿತು ಟಾಟಾ ಗ್ರೂಪ್ ಗೆ ಈಗಾಗಲೇ ಪತ್ರ ಬರೆದಿದ್ದೇವೆ, ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಣಿಜ್ಯ ನೀತಿ ಒಂದಿಷ್ಟು ಸಡಿಲಗೊಂಡರೆ ಟಾಟಾ ನ್ಯಾನೊ ಕಾರುಗಳನ್ನು ಪಾಕಿಸ್ತಾನದಲ್ಲಿ ಪರಿಚಯಿಸಲಿದ್ದೇವೆ" ಎಂದು ಐಎಂಜಿಸಿ ಜಾಗತಿಕ ಮಟ್ಟದ ಚೇರ್ಮನ್ ಅಹ್ಮದ್ ರಶೀದ್ ಹೇಳಿದ್ದಾರೆ.
ಪಾಕಿಸ್ತಾನದ ವಾಣಿಜ್ಯ ನೀತಿ ಕೂಡ ನ್ಯಾನೊ ಆಮದಿಗೆ ಅಡ್ಡಿಯಾಗಿದೆ. ಅಲ್ಲಿನ ಸದ್ಯದ ನೀತಿಯ ಪ್ರಕಾರ ಕೇವಲ ಕೆಲವು ಸಂಖ್ಯೆಯಲ್ಲಿ ಮಾತ್ರ ವಾಹನಗಳನ್ನು ಆಮದು ಮಾಡಿಕೊಳ್ಳಬಹುದು. ಹೆಚ್ಚು ಸಂಖ್ಯೆಯಲ್ಲಿ ಬೇಕಿದ್ದರೆ ಪಾಕಿಸ್ತಾನದಲ್ಲಿಯೇ ಅಸೆಂಬಲ್ ಘಟಕ ಸ್ಥಾಪಿಸಬೇಕಾಗುತ್ತದೆ.
ಪಾಕಿಸ್ತಾನದಲ್ಲಿ ಜಂಟಿ ಉದ್ಯಮ ಮತ್ತು ಹೂಡಿಕೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೀತಿಗಳು ಅವಕಾಶ ನೀಡುವುದಿಲ್ಲ. ಮುಂದೆ ಉಭಯ ದೇಶಗಳ ನಡುವೆ ವಾಣಿಜ್ಯ ನೀತಿಗಳು ಸಡಿಲವಾದರೆ ಮಾತ್ರ ಆಮದು ರಫ್ತು ಪ್ರಕ್ರಿಯೆ ನಡೆಯಬಹುದು. ಪಾಕಿಸ್ತಾನಿಯರಿಗೆ ನ್ಯಾನೊ ಸವಾರಿ ಸಾಧ್ಯವಾಗಬಹುದು.


Click it and Unblock the Notifications








