ಹೋಂಡಾ ಬಿಟ್ಟ ಹೀರೋಗೆ ಸೂಕ್ತ ಜೋಡಿ ಬೇಕಿದೆ

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹೀರೋ ಹೋಂಡ(HHML)ದ ಮುಖ್ಯ ಹಣಕಾಸು ಅಧಿಕಾರಿ ರವಿ ಸೂದ್ಅವರು ಯೂರೋಪ್ ಹಾಗೂ ಜಪಾನ್ ಹೊರತುಪಡಿಸಿ ಕೆಲ ಕಂಪೆನಿಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಹೇಳಿದರು. ಕಳೆದ 26 ವರ್ಷಗಳಿಂದ ಸಹಯೋಗದಲ್ಲಿದ್ದ ಹೋಂಡಾ ಹಾಗೂ ಹೀರೋ ಸಮೂಹ ಕಳೆದ ಡಿಸೆಂಬರ್ ನಲ್ಲಿ ಸಹಯೋಗವನ್ನು ಕಡಿದುಕೊಂಡಿವೆ.
ಹೋಂಡಾ ಸಮೂಹ ಹೊಂದಿದ್ದ ಶೇ 26 ರಷ್ಟು ಪಾಲನ್ನು ಹೀರೋ ಸಮೂಹ 3841 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ವ್ಯವಹಾರ ಸಂಬಂಧ ಕಡಿದುಕೊಳ್ಳುವದಕ್ಕೂ ಮುನ್ನ ಹೋಂಡಾ ತಯಾರಿಕಾ ತಂತ್ರಜ್ಞಾನವನ್ನು ಹೀರೋಗೆ ನೀಡಿದೆ. ಕಂಪೆನಿಯ ಡೆಹ್ರಾಡೂನ್ ಸಂಶೋಧನೆ ಹಾಗೂ ಅಭಿವೃದ್ದಿ ಘಟಕದಲ್ಲಿ 175 ಇಂಜಿನಿಯರುಗಳು ಕೆಲಸ ಮಾಡುತ್ತಿದ್ದು, ತಂತ್ರಜ್ಞಾನ ಹಾಗೂ ವಿನ್ಯಾಸವನ್ನು ಮೇಲ್ದರ್ಜೆಗೇರಿಸಲು ಪಾಲುದಾರನ ಹುಡುಕಾಟ ನಡೆದಿದೆ ಎಂದೂ ಸೂದ್ ಹೇಳಿದರು.
ಸಾಮಾನ್ಯವಾಗಿ ಮಾರಾಟದ ಶೇ 1.2 ರಿಂದ 1.5 ರಷ್ಟು ಮೊತ್ತವನ್ನು ಸಂಶೋಧನೆಗೆ ಎಲ್ಲಾ ಕಂಪೆನಿಗಳೂ ಬಳಸಿಕೊಳ್ಳುತ್ತಿದ್ದು ಅದರಂತೆ ಕಂಪೆನಿ ಈ ವರ್ಷ 250 ಕೋಟಿ ರೂಪಾಯಿಗಳನ್ನು ಸಂಶೋಧನೆಗೆ ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು. ಅಲ್ಲದೆ ಕಂಪೆನಿ ಹೋಂಡಾದೊಂದಿಗೆ ಹೊಸ ಪರವಾನಗಿ ಒಪ್ಪಂದ ಮಾಡಿಕೊಳ್ಳುವ ಕುರಿತೂ ಪರಿಶೀಲಿಸುತ್ತಿದ್ದು ಇದರಿಂದ ಜೂನ್ 2014ರವರೆಗೆ ಹೊಸ ಉತ್ಪಾದನೆಗಳನ್ನು ಪಡೆಯಬಹುದಾಗಿದೆ ಎಂದು ರವಿ ಹೇಳಿದರು.
ಕಂಪೆನಿ 2011-12ನೇ ಸಾಲಿನಲ್ಲಿ 6.15 ಮಿಲಿಯನ್ ದ್ವಿಚಕ್ರ ವಾಹನಗಳ ಮಾರಾಟ ಗುರಿಯನ್ನು ಹಾಕಿಕೊಂಡಿದ್ದು ಡೆಹ್ರಾಡೂನ್, ಗುರ್‌ಗಾಂವ್ ಮತ್ತು ಹರಿದ್ವಾರಗಳಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಕಂಪೆನಿ ಆಫ್ರಿಕಾ, ದಕ್ಷಿಣ ಏಷ್ಯಾ ಹಾಗೂ ಲ್ಯಾಟಿನ್ ಅಮೇರಿಕ ದೇಶಗಳಲ್ಲಿ ವಾಹನಗಳ ರಫ್ತು ಮಾಡಲು ಯೋಜನೆ ಹಾಕಿಕೊಂಡಿದೆ.


Click it and Unblock the Notifications








