ಫೋರ್ಡ್ ಕಾರುಗಳಿಗೆ ಹೆಚ್ಚಿದ ಬೇಡಿಕೆ, ಹೊಸ ಘಟಕ ಹುಡುಕಾಟ

ಫೋರ್ಡ್ ಇಂಡಿಯಾ ಇತ್ತೀಚೆಗೆ ಮಧ್ಯಮ ಗಾತ್ರದ ಸೆಡಾನ್ ಕಾರು ನ್ಯೂ ಫಿಯೆಸ್ಟಾ ಹೊರತಂದಿತ್ತು. ಇದರ ಉತ್ಪಾದನೆಗಾಗಿ ಚೆನ್ನೈ ಘಟಕದಲ್ಲಿ ಎರಡು ಪಾಳಿಯಲ್ಲಿ ನೌಕರರು ಅವಿರತ ಶ್ರಮಿಸುತ್ತಿದ್ದಾರೆ. ಬೇಡಿಕೆಯ ನಿಯಮಕ್ಕೆ ತಕ್ಕಂತೆ ಪೂರೈಕೆ ಮಾಡಲು ಕಂಪನಿಯು ಶ್ರಮಿಸುತ್ತಿದೆ.
ಕಂಪನಿಯ ಫಿಗೊ ಕಾರುಗಳಿಗೆ ಅತ್ಯಧಿಕ ಬೇಡಿಕೆಯಿದೆ. ಜೂನ್ ತಿಂಗಳಲ್ಲಿ ಬಿಡಿಭಾಗಗಳ ಕೊರತೆಯಿಂದ ಕೇವಲ 5,700 ಫಿಗೊ ಕಾರುಗಳನ್ನು ಉತ್ಪಾದಿಸಿದೆ. 8 ಹೊಸ ಕಾರುಗಳನ್ನು ಹೊರತರುವ ಯೋಜನೆಯೂ ಕಂಪನಿಗಿದೆ. ಆದರೆ ಕಂಪನಿಯ ಉತ್ಪಾದನಾ ಘಟಕಗಳ ಸಾಮರ್ಥ್ಯ ಸಾಕಾಗುತ್ತಿಲ್ಲ. ಹೊಸ ಘಟಕ ನಿರ್ಮಾಣಕ್ಕಾಗಿ ಹಲವು ರಾಜ್ಯಗಳನ್ನು ಸುತ್ತಾಡುತ್ತಿದೆ.
"ನಾವು ಇನ್ನಷ್ಟು ಫಿಗೊ ಕಾರುಗಳನ್ನು ಉತ್ಪಾದಿಸಬೇಕಿತ್ತು. ಆದರೆ ಹಲವು ಸಮಸ್ಯೆಗಳಿಂದ ಉತ್ಪಾದನೆ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾರ ಮೈಕೆಲ್ ಬೊನೆಹ್ಮಾಮ್ ಹೇಳಿದ್ದಾರೆ.
ಇದೀಗ ಗ್ರಾಹಕರ ಮನಸ್ಥಿತಿಯೂ ಬದಲಾಗಿದೆ. ಹೆಚ್ಚು ಜನರು ಡೀಸಲ್ ಕಾರುಗಳನ್ನು ಕೇಳುತ್ತಿದ್ದಾರೆ. ಫೋರ್ಡ್ ಕಂಪನಿಯು ಡೀಸಲ್ ಆವೃತ್ತಿಗಳನ್ನು ಹೊರತರುತ್ತಿದೆ. ಕಂಪನಿಯ ಒಟ್ಟಾರೆ ಕಾರು ಬೇಡಿಕೆಯಲ್ಲಿ ಶೇಕಡಾ 50ರಷ್ಟು ಡೀಸಲ್ ಕಾರುಗಳಿಗೆ ಬೇಡಿಕೆಯಿದೆಯೆಂದರೆ ನೀವು ನಂಬಲೇ ಬೇಕು.
ಘಟಕ ನಿರ್ಮಾಣಕ್ಕೆ ಸೂಕ್ತ ಸ್ಥಳ ನೀಡುವಂತೆ ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರ ಸರಕಾರಗಳೊಂದಿಗೆ ಫೋರ್ಡ್ ಇಂಡಿಯಾ ಮಾತುಕತೆ ನಡೆಸುತ್ತಿದೆ. ಘಟಕ ನಿರ್ಮಾಣಕ್ಕೆ ರಾಜ್ಯಗಳು ನೀಡುವ ಸೌಲಭ್ಯ, ಸವಲತ್ತುಗಳು ಯಾಕೋ ಫೋರ್ಡ್ ಗೆ ತೃಪ್ತಿಯಾಗುತ್ತಿಲ್ಲವಂತೆ! ಕರ್ನಾಟಕ ಸರಕಾರ ಕೂಡ ಫೋರ್ಡ್ ನ್ನು ಸೆಳೆಯಲು ಯತ್ನಿಸಬಹುದು.


Click it and Unblock the Notifications








