ಕೋಟ ಮಹಾರಾಜರ ಕಾರು ಲಂಡನಿನಲ್ಲಿ ಹರಾಜು

ಭಾರತದ ರಾಜರಿಗೆ ಐಷಾರಾಮಿ ಕಾರುಗಳೆಂದರೆ ಇಷ್ಟ. ಅದರಲ್ಲೂ ಹೆಚ್ಚಿನ ಅರಸರು ರೋಲ್ಸ್ ರಾಯ್ಸ್ ಖರೀದಿಸಿದ್ದರು. ಧರ್ಮಸ್ಥಳದಲ್ಲಿರುವ ವಿಂಟೇಜ್ ವಾಹನ ಸಂಗ್ರಹಾಲಯದಲ್ಲೂ ರಾಜರು ಬಳಸಿದ ಹಳೆಯ ಕಾರುಗಳಿವೆ.
ಇದೀಗ ರಾಜಸ್ಥಾನದ ಕೋಟ ಮಹಾರಾಜ ಎರಡನೇ ಉಮೇದ್ ಸಿಂಗ್ ಬಳಸಿದ್ದ ಕಾರೊಂದು ಲಂಡನಿನಲ್ಲಿ ಬಿಕರಿಯಾಗಲು ಸಿದ್ಧವಾಗಿದೆ. 1925ರ ರೋಲ್ಸ್ ರಾಯ್ಸ್ ನ್ಯೂ ಫಂಟೊಮ್ ಕಾರನ್ನು ಲಂಡನಿನ ಹರಾಜು ಹೌಸ್ ಬೊನಾಮಸ್ ನಲ್ಲಿ ಇಡಲಾಗಿದೆ. ಇದನ್ನು ಆಗಸ್ಟ್ 17 ಮತ್ತು 18 ರಂದು ಕ್ಯೂಯೆಲ್ ಲಾಡ್ಜ್ ಸೇಲ್ ನಲ್ಲಿ ಹರಾಜು ಮಾಡಲಾಗುವುದಂತೆ! ಕ್ಯೂಯೆಲ್ ಲಾಡ್ಜ್ ಸೇಲ್ ಎಂಬುದು ಬೃಹತ್ ಪ್ರಮಾಣದ ಜನಪ್ರಿಯ ಹರಾಜು ಪ್ರಕ್ರಿಯೆಯಾಗಿದೆ.
ಕೆಂಪು ಬಣ್ಣದ ಈ ಆಕರ್ಷಕ ಕಾರನ್ನು ಕೋಟ ಮಹಾರಾಜರಿಗಾಗಿ ರೋಲ್ಸ್ ರಾಯ್ಸ್ ವಿಶೇಷವಾಗಿ ವಿನ್ಯಾಸ ಮಾಡಿಕೊಟ್ಟಿತ್ತು. ಗಾಡಿಗೆ ವಿಶೇಷ ಲೈಟ್ ಗಳನ್ನು ಜೋಡಿಸಿ ಕೋಟ ರಾಜ ಬೇಟೆಗೆ ಹೋಗುತ್ತಿದ್ದರಂತೆ! ಹೀಗಾಗಿ ಈ ಕಾರಿಗೆ ಟೈಗರ್ ಕಾರೆಂಬ ಹೆಸರೂ ಇದೆ.
ಈ ವಿಂಟೇಜ್ ಕಾರು ಸುಮಾರು ಹತ್ತು ಲಕ್ಷ ಡಾಲರಿಗೆ ಹರಾಜುಗೊಳ್ಳುವ ನಿರೀಕ್ಷೆಯಿದೆ. ಈ ಕಾರು 8.0 ಲೀಟರ್, 6 ಸಿಲಿಂಡರ್ ಎಂಜಿನ್ ಹೊಂದಿದೆ. ಕ್ಲಾಸಿಕ್ ಕಾರುಗಳನ್ನು ಬಯಸುವರು ಹರಾಜಿನಲ್ಲಿ ಭಾಗವಹಿಸಬಹುದು.


Click it and Unblock the Notifications








