ನಿಜವಾಯ್ತು ಬೂಕನಕೆರೆ ಯಡಿಯೂರಪ್ಪರ ಬಣ್ಣದ ಜ್ಯೋತಿಷ್ಯ

ಬಣ್ಣ ವ್ಯಕ್ತಿತ್ವ ಸೂಚಕ. ಸದ್ಯ ಸೂತಕದ ಮನೆಯ ಮನಸ್ಸಿನಲ್ಲಿರುವ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ನಿತ್ಯ ಸಂಚಾರಕ್ಕೆ ಬಳಸುವುದು ಮೆಟಾಲಿಕ್ ಗ್ರೇ ಬಣ್ಣದ ಹೋಂಡಾ ಸಿಆರ್ ವಿ ಕಾರು. ಅದರ ದರ 23 ಲಕ್ಷ ರುಪಾಯಿ.
ಮೆಟಾಲಿಕ್ ಗ್ರೇ ಅರ್ಥಾತ್ ಬೂದು ಬಣ್ಣದ ಕಾರಿಗೂ ಯಡಿಯೂರಪ್ಪ ವ್ಯಕ್ತಿತ್ವಕ್ಕೂ ಹೋಲಿಕೆ ಇದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಬೂದು ಬಣ್ಣದ ಕಾರು ಹೊಂದಿರುವರದ್ದು ಕಾರ್ಪೊರೇಟ್ ವ್ಯಕ್ತಿತ್ವ, ಜಿಪುಣರು, ಕಾರ್ಯಶೀಲರು, ಗಂಭೀರ ವ್ಯಕ್ತಿತ್ವ ಹೊಂದಿರುವರು ಎನ್ನಲಾಗಿದೆ. ಬೂದು ಬಣ್ಣದ ಕಾರು ಹೆಚ್ಚಿನ ಯುವಕರಿಗೆ ಇಷ್ಟವಾಗುವುದಿಲ್ಲವಂತೆ!
ಕಾರ್ಪೊರೇಟ್ ವ್ಯಕ್ತಿತ್ವ: ರಾಜ್ಯದ ಸೇವೆಗೆ ನಿಲ್ಲಬೇಕಿದ್ದ ಮಾನ್ಯ ಸಿಎಂ ಕಾರ್ಪೊರೇಟ್ ವ್ಯಕ್ತಿಗಳನ್ನು ನಾಚಿಸುವಂತೆ ವರ್ತಿಸಿದ್ದು ಸುಳ್ಳಲ್ಲ. ತಮ್ಮ ಮಕ್ಕಳು, ಕುಟುಂಬದ ಅಭಿವೃದ್ಧಿ, ಶಿಕ್ಷಣ ಸಂಸ್ಥೆಗಳ ನಿರ್ಮಾಣ. ಗಣಿ ವಹಿವಾಟು, ಷೇರು ವ್ಯವಹಾರ, ಹೂಡಿಕೆಗಳಲ್ಲಿ ಇವರು ಯಾವ ಕಾರ್ಪೊರೇಟ್ ವ್ಯಕ್ತಿಗೂ ಕಡಿಮೆಯೇನಿಲ್ಲ.
ಜಿಪುಣತನ: ರಾಜ್ಯದ ಹಿತದ ವಿಷಯದಲ್ಲಿ ಡಾ. ಯಡಿಯೂರಪ್ಪ ಜಿಪುಣತನ ತೋರಿಸಿದ್ದಾರೆ. ಆದರೆ ಕೌಟುಂಬಿಕ ಹಿತದಲ್ಲಿ ಧಾರಾಳಿ. ಮಠಮಂದಿರ, ಸ್ವಜಾತಿ ಸಂಸ್ಥೆ ಸಂಘಗಳಿಗೆ ಅನುದಾನ ನೀಡುವಲ್ಲಿ ಜಿಪುಣತನ ತೋರಿಸಿಲ್ಲ. ಹೀಗಾಗಿ ಬೂದು ಬಣ್ಣದ ಕಾರು ಹೊಂದಿರುವರು ಜಿಪುಣರು ಎಂಬ ಬಣ್ಣದ ಭವಿಷ್ಯ ಯಡಿಯೂರಪ್ಪ ಪಾಲಿಗೆ ಅರ್ಧಸತ್ಯ.
ಗಂಭೀರ ವದನ: ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಯಾವತ್ತೂ ಗಂಭೀರ. ನಗುವುದು ಅಪರೂಪ. ಸಿಡುಕು ಮೋರೆ ನಿತ್ಯ ವದನ. ಹೀಗಾಗಿ ಬೂದು ಬಣ್ಣದವರು ಗಂಭೀರ ವದನ ಎಂಬುದಕ್ಕೆ ಯಡಿಯೂರಪ್ಪ ಮುಖ ಸಾಕ್ಷಿ ಹೇಳುತ್ತದೆ.
ಕಾರ್ಯಶೀಲ ವ್ಯಕ್ತಿತ್ವ: ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಶೀಲ ವ್ಯಕ್ತಿಯೂ ಹೌದು. ರಾಜ್ಯಕ್ಕೆ ಬೃಹತ್ ಪ್ರಮಾಣದ ವಿದೇಶಿ ಹೂಡಿಕೆ ಹರಿದುಬರುವಂತೆ ಮಾಡಿದ್ದು ಇವರ ಕಾರ್ಯಶೀಲ ವ್ಯಕ್ತಿತ್ವವನ್ನೂ ತೋರಿಸುತ್ತದೆ. ಉಳಿದಂತೆ ಹಗರಣ, ಗಣಿ ಹಗರಣ, ಅಪರೇಷನ್ ಕಮಲ ವಿಷ್ಯಗಳಲ್ಲಿ ಇವರ ಕಾರ್ಯಶೀಲತೆಯ ಕುರಿತು ದೂಸರ ಮಾತನಾಡುವಂತೆ ಇಲ್ಲ.
ಬೂದು ಬಣ್ಣದ ಕಾರುಗಳನ್ನು ಯುವಕರು ಇಷ್ಟಪಡುವುದಿಲ್ಲವೆಂದು ನಮ್ಮ ಬಣ್ಣದ ಜ್ಯೋತಿಷಿ ಅಭಿಪ್ರಾಯಪಡುತ್ತಾರೆ. ಯುವಕರಂತೆ ಕಂಡರೂ ಯಡಿಯೂರಪ್ಪರಿಗೆ ವಯಸ್ಸು 60 ದಾಟಿದೆ. ಹೀಗಾಗಿ ಈ ಬಣ್ಣದ ಭವಿಷ್ಯವೂ ಸತ್ಯವಾಗಿದೆ. ಬೂದು ಬಣ್ಣಕ್ಕೂ ಕೋಪಕ್ಕೂ ಸಂಬಂಧವಿಲ್ಲ. ಹೀಗಾಗಿ ಅವರ ಕೋಪಿಷ್ಠ ವ್ಯಕ್ತಿತ್ವ ಬೂದು ಬಣ್ಣದ ವ್ಯಕ್ತಿತ್ವಸೂಚಕದಿಂದ ಹೊರಗಿದೆ.


Click it and Unblock the Notifications








