ನಗು ತರಿಸದ ಮಿಸ್ಟರ್ ಬೀನ್ ಇನ್ನೊಂದು ಮುಖ

ಖಂಡಿತಾ ಇದು ಆತನ ಅಭಿಮಾನಿಗಳಲ್ಲಿ ನಗು ತರಿಸದು. ಅದು ಇವನೇನಾ ಮಿಸ್ಟರ್ ಬೀನ್ ಅಂತ ಬೆರಗು ಮೂಡಿಸುತ್ತದೆ. ಇದು ಮಿಸ್ಟರ್ ಬೀನ್ ಯಾನೆ ರೊವನ್ ಅಟ್ಕಿನ್ಸನ್ ಕಾರು ಕ್ರೇಝ್ ಕತೆ. ಇದನ್ನು ಕಾರು ಹುಚ್ಚಾಟ, ಕಾರು ವ್ಯಸನ, ತಿಕ್ಕಲು ಹೀಗೆ ಹೇಗೆ ಬೇಕಾದರೂ ಕರೆಯಬಹುದು. ಅವರು ಪ್ರಮುಖ ವಾಹನ ಪತ್ರಿಕೆಯಲ್ಲಿ ಬರಹಗಾರ ಕೂಡ ಹೌದು!
ಮೊನ್ನೆ ನಿದ್ದೆ ಮಂಪರಿನಲ್ಲಿ ಮರವೊಂದಕ್ಕೆ ತನ್ನ ಮೆಕ್ಲಾರೆನ್ ಕಾರನ್ನು ಡಿಕ್ಕಿಹೊಡೆದು ಬದುಕುಳಿದದ್ದು ನಿಮಗೆ ನೆನಪಿರಬಹುದು. ಇದು ಅವರು ಮಾಡಿದ ಮೊದಲ ಅಪಘಾತವಲ್ಲ. ಅಂದೊಮ್ಮೆ ಆಸ್ಟನ್ ಮಾರ್ಟಿನ್ ಕಾರನ್ನು, ಮತ್ತೊಮ್ಮೆ ಎ6 ಕಾರನ್ನು ಅಪಘಾತ ಮಾಡಿದ್ದಾರೆ ಮಿಸ್ಟರ್ ಬೀನ್. ಅಂದೊಮ್ಮೆ ಆಡಿ ಎ6 ಕಾರಿನಲ್ಲಿ ಮಹಿಳೆಯೊಬ್ಬರಿಗೆ ಮಿಸ್ಟರ್ ಬೀನ್ ಡಿಕ್ಕಿ ಹೊಡೆದಿದ್ದರು. ಆತ ತನ್ನ ಫಿಲ್ಮೊಂದರಲ್ಲಿ ಪಡೆದ ಸಂಭಾವನೆಯ 7 ಪಟ್ಟು ಹೆಚ್ಚು ಅದರ ರಿಪೇರಿಗೆ ಪಾವತಿಸಿದ್ದರು.
ಬೀನ್ ಗೆ ವೇಗದ ಐಷಾರಾಮಿ ಕಾರುಗಳ ಸಂಗ್ರಹ ಹುಚ್ಚಿದೆ. ತನ್ನ ಫ್ಯಾಮಿಲಿ ಸವಾರಿಗೆ ಬಳಸುವುದು ಆಡಿ ಎ8. ಮೂಡು ಜಾಸ್ತಿಯಿದ್ದಾಗ, ಮೂಡಿಯಾಗಿದ್ದಾಗ ಅಥವಾ ಸ್ಪೀಡ್ ಹುಚ್ಚು ಹಿಡಿದಾಗ ಹತ್ತುವುದು ಮೆಕ್ಲಾರೆನ್ ಎಫ್1 ಕಾರನ್ನು. ಆ ಕಾರಿನಲ್ಲಿ ಮೊನ್ನೆ ಗರಿಷ್ಠ 240 ಕಿ.ಮೀ. ಆಕ್ಸಿಲರೇಟರ್ ಒತ್ತಿ ಮರಕ್ಕೆ ಡಿಕ್ಕಿ ಹೊಡೆದಿದ್ದರು.
ಈ "ಎಫ್1" ಕಾರನ್ನು ಬೀನ್-ದಿ ಮೂವಿ" ಯಶಸ್ವಿಯಾದ ಲೆಕ್ಕದಲ್ಲಿ ಖರೀದಿಸಿದ್ದರು. ಇದು ಜಗತ್ತಿನ ದುಬಾರಿ ಕಾರು. ಹನ್ನೆರಡು ವರ್ಷ ಹಳೆಯ ಕಾರಾದರೂ ಜಗತ್ತಿನಲ್ಲಿ ಈಗಲೂ ಪ್ರಮುಖ ವೇಗದ ಕಾರಾಗಿದೆ. ಇದರ ಗರಿಷ್ಠ ವೇಗ ಪ್ರತಿಗಂಟೆಗೆ 240 ಕಿ.ಮೀ. ಈ ಗರಿಷ್ಠ ವೇಗವನ್ನು ಕೊಯಿನ್ಸೊಂಗ್ ಸಿಸಿಆರ್ ಕಾರು ಹಿಮ್ಮೆಟ್ಟಿತ್ತು. ಮತ್ತೆ ಇವೆರಡು ಕಾರುಗಳ ದಾಖಲೆಯನ್ನು ಬುಗಾಟಿ ವೆರೊನ್ ಹಿಂದಿಕ್ಕಿತ್ತು.
ಅವರ ಕಾರು ಸಂಗ್ರಹ ಕ್ರೇಝ್ ಆರಂಭವಾದದ್ದು 1981ರಲ್ಲಿ. ಆಸ್ಟನ್ ಮಾರ್ಟಿನ್ ವಿ8 ಅವರ ಮೊದಲ ಕಾರು. ಉಳಿದಂತೆ ಲಾನ್ಸಿಯಾ ಡೆಲ್ಟಾ, ಬೆಂಟ್ಲಿ ಮುಲ್ಸಾನೆ ಇತ್ಯಾದಿ ಕಾರುಗಳಿವೆ. ಇತ್ತೀಚೆಗೆ ಎಂಜಿ ಎಕ್ಸ್ ಪವರ್ ಸ್ಪೋರ್ಟ್ಸ್ ವೆಹಿಕಲ್ ಕೂಡ ಖರೀದಿಸಿದ್ದಾರೆ.
ಅವರು ಕಾರು ಮ್ಯಾಗಜಿನ್ ಮತ್ತು "ಇವೊ' ಪತ್ರಿಕೆಯ ನಿಯಮಿತ ಬರಹಗಾರ. ಅವರ ಹೆಚ್ಚಿನ ಸಿನಿಮಾಗಳಲ್ಲಿರುವುದು ಅಮೆರಿಕಾದ ಜನಪ್ರಿಯ ಹಳೆಯ ಕಾರು "ಮಿನಿ". ಇದೀಗ ಬಂದ ಸುದ್ದಿಯ ಪ್ರಕಾರ ಮಿಸ್ಟರ್ ಬೀನ್ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರಂತೆ.


Click it and Unblock the Notifications








