ರಸ್ತೆಗಿಳಿಯಲಿವೆ ನೂತನ ಹೋಂಡಾ ಬೈಕ್ ಗಳು

ಕಂಪನಿಯ ಪೂರ್ಣ ಮಾಲಿಕತ್ವದ ಹೋಂಡಾ ಮೋಟಾರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ತನ್ನ ಡೀಲರ್ ನೆಟ್ ವರ್ಕ್ ವಿಸ್ತರಿಸುವ ಯೋಜನೆ ಹೊಂದಿದೆ. ಇದರ ನೂತನ 250 ಸಿಸಿಯ ಸ್ಪೋರ್ಟ್ಸ್ ಬೈಕ್ ಸಿಬಿಆರ್250ಆರ್ ಭಾರತದಲ್ಲಿ ಮುಂದಿನ ಏಪ್ರಿಲ್ ನಲ್ಲಿ ರಸ್ತೆಗಿಳಿಯಲಿದೆ.ಇದರ ದರ ಸುಮಾರು 1.5 ಲಕ್ಷ ರೂಪಾಯಿ.
ಗ್ರಾಹಕರ ಪ್ರಸಕ್ತ ಮತ್ತು ಭವಿಷ್ಯದ ಬೇಡಿಕೆಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಮಾದರಿಗಳನ್ನು ಪರಿಚಯಿಸಲು ಕಂಪನಿ ನಿರ್ಧರಿಸಿದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಆದರೂ ಯಾವ ಯಾವ ಮಾಡೆಲ್ ಗಳನ್ನು ಭವಿಷ್ಯದಲ್ಲಿ ಪರಿಚಯಿಸಲಿದೆ ಎಂಬುದನ್ನು ಕಂಪನಿ ಸ್ಪಷ್ಟಪಡಿಸಿಲ್ಲ. ಈಗ ಎಚ್ಎಂಎಸ್ಐ ಆಕ್ಟಿವಾ ಡೀಯೊ ಸ್ಕೂಟರ್ ಗಳನ್ನು ಮತ್ತು ಸ್ಟನ್ನರ್, ಶೈನ್, ಟ್ವಿಸ್ಟರ್ ಮತ್ತು ಯೂನಿಕಾರ್ನ್ ಬೈಕ್ ಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.
ಪ್ರಸಕ್ತ ಬೇಡಿಕೆಗೆ ತಕ್ಕಂತೆ ಸಮರ್ಪಕವಾಗಿ ಪೂರೈಸಲು ಈಗ ಒತ್ತು ನೀಡುತ್ತಿದ್ದು, ಡೀಲರ್ ಶಿಪ್ ಕೇಂದ್ರಗಳನ್ನು ವಿಸ್ತರಿಸುವ ಯೋಜನೆಯೂ ಇದೆ ಎಂದರು. ಈಗ ಎಚ್ಎಂಎಸ್ಐ ಸುಮಾರು 790 ಮಾರಾಟ ಮಳಿಗೆಗಳನ್ನು ಹೊಂದಿದೆ. ಇದರಲ್ಲಿ 398 ಡೀಲರ್ ಕೇಂದ್ರಗಳು ಮತ್ತು 392 ಶಾಖೆಗಳು ಸೇರಿವೆ ಉಳಿದಂತೆ ಸುಮಾರು 389 ಕಂಪನಿಯ ಅಧಿಕೃತ ಸೇವಾ ಕೇಂದ್ರಗಳಿವೆ.
ಹೈ ಎಂಡ್ ಬೈಕ್ ಮಾರುಕಟ್ಟೆಗೆ ಒತ್ತು ನೀಡಲು ಕಂಪನಿಯು 250 ಸಿಸಿಯ ಸ್ಪೋರ್ಟ್ ಬೈಕ್ ಸಿಬಿಆರ್250ಆರ್ ನ್ನು ಏಪ್ರಿಲ್ ನಲ್ಲಿ ಹೊರತರಲಿದೆ. ಇದರ ದರ ಸುಮಾರು 1.5 ಲಕ್ಷ ರೂ. ಸಿಬಿಆರ್250ಆರ್ ಬುಕ್ಕಿಂಗ್ 2011ರ ಜನವರಿ ಒಂದರಂದು ಆರಂಭವಾಗಿತ್ತು. ಈಗಾಗಲೇ ಸುಮಾರು 1,800 ಬೈಕ್ ಗಳಿಗೆ ಬುಕ್ಕಿಂಗ್ ಆಗಿವೆ ಎಂದು ಕಂಪನಿ ಮೂಲಗಳು ತಿಳಿಸಿವೆ.
ಪ್ರಸಕ್ತ ವರ್ಷ ಕಂಪನಿ ಸುಮಾರು ಶೇ. 26ರಷ್ಟು ಪ್ರಗತಿ ಕಾಣುವ ನಿರೀಕ್ಷೆಯನ್ನು ಹೊಂದಿದೆ. 2010-11ರ ಆರ್ಥಿಕ ವರ್ಷದಲ್ಲಿ ಕಂಪನಿಯು ಸುಮಾರು 16 ಲಕ್ಷ ಯೂನಿಟ್ ಮಾರಾಟ ಮಾಡುವ ಗುರಿಹೊಂದಿದ್ದು ಇದಕ್ಕೂ ಹಿಂದಿನ ವರ್ಷದ 12.7 ಯೂನಿಟ್ ಗಿಂತ ಸುಮಾರು ಶೇಕಡಾ 16ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.


Click it and Unblock the Notifications








