ಫಾರ್ಮುಲಾ ಒನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಮಹೀಂದ್ರ ಸ್ಕಾರ್ಪಿಯೊ!!

ವಾರಾಂತ್ಯಗಳಲ್ಲಿ ನಡೆಯುವ ಕಾರು ರೇಸಿನಲ್ಲಿ ಬೆಂಬಲ ಮತ್ತು ಮಧ್ಯಸ್ಥಿಕೆ ವಾಹನವಾಗಿ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಸ್ಕಾರ್ಪಿಯೊ ಒದಗಿಸುವುದಾಗಿ ಮಹೀಂದ್ರ ಹೇಳಿದೆ. ಬೆಂಬಲ ವಾಹನ ನೀಡುವ ಕುರಿತು ಬುದ್ದ್ ಇಂಟರ್ ನ್ಯಾಷನಲ್ ಸರ್ಕ್ಯುಟ್ ನೊಂದಿಗೆ 5 ವರ್ಷದ ಒಪ್ಪಂದವನ್ನು ಕಂಪನಿ ಮಾಡಿಕೊಂಡಿದೆ.
ಫಾರ್ಮುಲಾ ಒನ್ ರೇಸಿಗೆ ಮಹೀಂದ್ರ ಸುಮಾರು 25 ಸ್ಕಾರ್ಪಿಯೊ ಕಾರುಗಳನ್ನು ಒದಗಿಸಲಿದೆ. ಇದರಲ್ಲಿ ಹತ್ತು ಸ್ಕಾರ್ಪಿಯೊ ವಿಎಲ್ಎಕ್ಸ್, 15 ಸ್ಕಾರ್ಪಿಯೊ ಜೀಟಾವೆಸ್ ಆವೃತ್ತಿಗಳನ್ನು ಕಂಪನಿ ಒದಗಿಸಲಿದೆ. ಕಂಪನಿಯು ಇದಕ್ಕೂ ಮುನ್ನ ಮಾನೆಸ್ಟರಿ ಎಸ್ಕೇಪ್ ಮತ್ತು ಆಫ್ ರೋಡ್ ರಾಲಿಗಳಲ್ಲಿ ಸ್ಕಾರ್ಪಿಯೊ ಒದಗಿಸಿದೆ.
"ಕಾರು ರೇಸಿನಲ್ಲಿ ಭಾಗವಹಿಸಲು ಅವಕಾಶ ದೊರಕಿರುವುದಕ್ಕೆ ಹೆಮ್ಮೆಯಾಗಿದೆ. ನಮ್ಮ ವಾಹನಗಳು ಕಾರು ರೇಸಿನಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕಾಪಾಡಲು, ಬೆಂಬಲ ನೀಡಲು ಬಳಸಲಾಗುತ್ತದೆ. ಭಾರತದಲ್ಲಿ ನಡೆಯುವ ಫಾರ್ಮುಲಾ ಒನ್ ಇತಿಹಾಸಕ್ಕೆ ನಾವು ಪ್ರಮುಖ ಸಾಕ್ಷಿಯಾಗಲಿದ್ದೇವೆ" ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷರಾದ ವಿವೇಕ್ ನಾಯರ್ ಹೇಳಿದ್ದಾರೆ.
ಹಾಗಂತ ಫಾರ್ಮುಲಾ ಒನ್ ರೇಸಿನಲ್ಲಿ ಭಾಗವಹಿಸುವ ಸ್ಕಾರ್ಪಿಯೊಗಳು ಪರಿಷ್ಕೃತ ಆವೃತ್ತಿಗಳಲ್ಲ. ಕೇವಲ ಬೆಂಕಿರೋಧಕ ಸಲಕರಣೆಗಳನ್ನು ಮಾತ್ರ ಸ್ಕಾರ್ಪಿಯೊಗೆ ಜೋಡಿಸಲಾಗುವುದು ಎಂದು ಕಂಪನಿ ಹೇಳಿದೆ.
ರೇಸಿಂಗ್ ವಿಷ್ಯದಲ್ಲಿ ಕಂಪನಿಗೆ ಇದು ಮೊದಲ ಅನುಭವವಲ್ಲ. ಕಂಪನಿಯು ಸ್ವತಃ ಮೊಟೊಜಿಪಿಯಲ್ಲಿ ತಂಡವೊಂದನ್ನು ಹೊಂದಿದೆ. ಇಂಡಿಯನ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಈಗಾಗಲೇ ಇತರ ವಾಹನ ಕಂಪನಿಗಳಾದ ಮರ್ಸಿಡಿಸ್ ಬೆಂಝ್ ಮತ್ತು ಹೀರೋ ಮೊಟೊಕಾರ್ಪ್ ಕೂಡ ಜೊತೆಯಾಗಿವೆ.


Click it and Unblock the Notifications








